Akshay Kumar, Cue learn and NCLT  
ಸುದ್ದಿಗಳು

'ಕ್ಯೂ ಲರ್ನ್' ವಿರುದ್ಧ ನಟ ಅಕ್ಷಯ್ ಕುಮಾರ್ ಸಲ್ಲಿಸಿದ್ದ ದಿವಾಳಿ ಅರ್ಜಿ ವಜಾಗೊಳಿಸಿದ ಎನ್‌ಸಿಎಲ್‌ಟಿ

ಒಪ್ಪಂದದ ಅಡಿಯಲ್ಲಿ ಮಾಡಬೇಕಾದ ಬಾಕಿ ಪಾವತಿಗಳನ್ನು ಅಕ್ಷಯ್ ಅವರ ವಾದ ಆಧರಿಸಿದ್ದು ದಿವಾಳಿ ಮತ್ತು ದಿವಾಳಿತನ ಸಂಹಿತೆಯಡಿ ಕ್ರಮ ಕೈಗೊಳ್ಳಲು ಅದು 'ಕಾರ್ಯಾಚರಣಾ ಸಾಲ' ಎಂಬ ಅರ್ಹತೆ ಪಡೆಯುವುದಿಲ್ಲ ಎಂದು ಎನ್‌ಸಿಎಲ್‌ಟಿ ಹೇಳಿದೆ.

Bar & Bench

ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಕ್ಯೂ ಲರ್ನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸಲು ಕೋರಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ವಜಾಗೊಳಿಸಿದೆ.

 ಒಪ್ಪಂದದ ಅಡಿಯಲ್ಲಿ ಮಾಡಬೇಕಾದ ಬಾಕಿ ಪಾವತಿಗಳನ್ನು ಅಕ್ಷಯ್ ಅವರ ವಾದ ಆಧರಿಸಿದ್ದು ದಿವಾಳಿ ಮತ್ತು ದಿವಾಳಿತನ ಸಂಹಿತೆಯಡಿ (ಐಬಿಸಿ) ಕ್ರಮ ಕೈಗೊಳ್ಳಲು  ಅದು 'ಕಾರ್ಯಾಚರಣಾ ಸಾಲ' ಎಂಬ ಅರ್ಹತೆ ಪಡೆಯುವುದಿಲ್ಲ ಎಂದು ನ್ಯಾಯಾಂಗ ಸದಸ್ಯ ಎಂಎಸ್ ಷಣ್ಮುಗ ಸುಂದರಂ ಮತ್ತು ತಾಂತ್ರಿಕ ಸದಸ್ಯ ಡಾ. ಸಂಜೀವ್ ರಂಜನ್ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಮಾರ್ಚ್ 2021ರಲ್ಲಿ ಅಕ್ಷಯ್‌ ಕುಮಾರ್ ಮತ್ತು ಕ್ಯೂ ಲರ್ನ್ ನಡುವೆ ಆದ ಒಪ್ಪಂದವು ವಿವಾದದ ಮೂಲವಾಗಿದೆ.

ಒಪ್ಪಂದದ ಅಡಿಯಲ್ಲಿ,  ಅಕ್ಷಯ್‌ ಕುಮಾರ್ ಅವರು ಕಂಪನಿಯ ಜಾಲತಾಣಕ್ಕೆ ಅನುಮೋದನಾ ಜಾಹೀರಾತು ಸೇವೆಗಳನ್ನು (ಎಂಡೋರ್ಸ್‌ಮೆಂಟ್‌) ಒದಗಿಸಬೇಕಿತ್ತು. ಅದಕ್ಕಾಗಿ ಒಟ್ಟು ₹8.10 ಕೋಟಿ ಪಾವತಿಸಬೇಕಿತ್ತು. ಪಾವತಿಯನ್ನು ಎರಡು ಕಂತುಗಳಾಗಿ ವಿಂಗಡಿಸಲಾಗಿತ್ತು - ಸಹಿ ಮಾಡಿದ ನಂತರ ಜಿಎಸ್‌ಟಿ ಸೇರಿಸಿ ₹ 4.05 ಕೋಟಿ ನೀಡುವುದು ಮತ್ತು ಉಳಿದ ಹಣವನ್ನು ಎರಡನೇ ಜಾಹೀರಾತು ದಿನಕ್ಕೂ ಮೊದಲು ನೀಡುವುದು ಎಂದು ಒಪ್ಪಂದವಾಗಿತ್ತು.

ಮೊದಲ ಜಾಹೀರಾತು ಅನುಮೋದನೆ ದಿನದ ಜವಾಬ್ದಾರಿಗಳನ್ನು ಪೂರೈಸಿದ್ದರೂ ಕ್ಯೂ ಲರ್ನ್ ₹4.05 ಕೋಟಿ ಅಷ್ಟೇ ಪಾವತಿಸಿದ್ದು ಎರಡನೆಯ ಕಂತಾದ ಉಳಿಕೆ ₹4.05 ಕೋಟಿ ಮೊತ್ತವನ್ನು ಪಾವತಿ ಮಾಡಲು ಸಂಸ್ಥೆ ವಿಫಲವಾಗಿದೆ ಎಂದು ಅಕ್ಷಯ್‌ ಕುಮಾರ್ ಆರೋಪಿಸಿದ್ದರು.

ತಮಗೆ ಬಾಕಿ ನೀಡಬೇಕಿರುವ ಮೊತ್ತವವು ದಿವಾಳಿ ಮತ್ತು ದಿವಾಳಿತನ ಸಂಹಿತೆಯಡಿ  ಕಾರ್ಯಾಚರಣೆಯ ಸಾಲವಾಗುತ್ತದೆ. ಹೀಗಾಗಿ ಕ್ಯೂ ಲರ್ನ್ ವಿರುದ್ಧ ದಿವಾಳಿತ ಪ್ರಕ್ರಿಯೆಗಳನ್ನು ಹೂಡಲು ಇದು ಅರ್ಹತೆ ಪಡೆಯುತ್ತದೆ ಎಂದು ಅವರು ಪ್ರತಿಪಾದಿಸಿದ್ದರು.

ಅದರೆ, ಇದನ್ನು ಅಲ್ಲಗಳೆದಿದ್ದ ಕ್ಯೂ ಲರ್ನ್‌, ಅಕ್ಷಯ್‌ ಕುಮಾರ್ ಅವರು ಅನುಮೋದನಾ ಜಾಹೀರಾತು ಚಿತ್ರೀಕರಣದ ಎರಡನೇ ದಿನಕ್ಕೆ ಪರಸ್ಪರ ಒಪ್ಪಿತವಾದ ಯಾವುದೇ ದಿನಾಂಕ ನೀಡದೆ ಒಪ್ಪಂದ ಉಲ್ಲಂಘಿಸಿದರು. ಆ ಮೂಲಕ ಉಳಿದ ಮೊತ್ತದ ಪಾವತಿ ಮೇಲಿನ ತಮ್ಮ ಹಕ್ಕಿನ ನಿರಾಕರಣೆ ಮಾಡಿದರು ಎಂದು ವಾದಿಸಿತ್ತು.

ಪ್ರಸ್ತುತ ವಿವಾದವು ಒಪ್ಪಂದದ ಉಲ್ಲಂಘನೆಯ ವ್ಯಾಪ್ತಿಗೆ ಬರುವಂತಹದ್ದಾಗಿದೆ. ಇದು ಕಾರ್ಯಕಾರಿ ಸಾಲದ ಅಡಿ ಬರುವುದಿಲ್ಲ. ಮಂಡಳಿಯ ನ್ಯಾಯನಿರ್ಣಯದ ವ್ಯಾಪ್ತಿಯು ದಿವಾಳಿ ಸಂಹಿತೆಗೆ ಸೀಮಿತವಾಗಿದೆ ಎಂದ ನ್ಯಾಯಮಂಡಳಿ ಅಕ್ಷಯ್‌ ಕುಮಾರ್‌ ಅರ್ಜಿಯನ್ನು ತಿರಸ್ಕರಿಸಿತು.