ಬೆಂಗಳೂರಿನಲ್ಲಿ ಬಹು ವಸತಿ ಯೋಜನೆಗಳು ಮತ್ತು ಮಾಲ್‌ಗಳನ್ನು ನಡೆಸುತ್ತಿರುವ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಮಂತ್ರಿ ಡೆವಲಪರ್ಸ್ ವಿರುದ್ಧ ಇಂಡಿಯನ್ ಬ್ಯಾಂಕ್ ಸಲ್ಲಿಸಿದ್ದ ದಿವಾಳಿ ಅರ್ಜಿಯನ್ನು ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮಂಗಳವಾರ ವಜಾಗೊಳಿಸಿದೆ [ಇಂಡಿಯನ್ ಬ್ಯಾಂಕ್ ಮತ್ತು ಮಂತ್ರಿ ಡೆವಲಪರ್ಸ್ ನಡುವಣ ಪ್ರಕರಣ].
ಮಂತ್ರಿ ಡೆವಲಪರ್ಸ್ ₹ 153 ಕೋಟಿ ಸುಸ್ತಿದಾರನಾಗಿರುವ ಸಂಬಂಧ ಇಂಡಿಯನ್ ಬ್ಯಾಂಕ್ 2022ರಲ್ಲಿ ಮನವಿ ಸಲ್ಲಿಸಿತ್ತು. ನ್ಯಾಯಾಂಗ ಸದಸ್ಯ ಕೆ ಬಿಸ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರಿದ್ದ ಪೀಠ ಆದೇಶ ಜಾರಿಗೊಳಿಸಿತು.
₹500 ಕೋಟಿಗೂ ಅಧಿಕ ಮೊತ್ತದ ಸುಸ್ತಿದಾರ ಎಂದು ಆರೋಪಿಸಿ ಇಂಡಿಯಾ ಬುಲ್ಸ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಮಂತ್ರಿ ಡೆವಲಪರ್ಸ್ ಅನ್ನು 2023ರಲ್ಲಿ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆಗೆ (CIRP) ಒಳಪಡಿಸಲಾಗಿತ್ತು. ಈ ಕಾರಣದಿಂದಾಗಿ, ಇಂಡಿಯಾ ಬುಲ್ಸ್ ಆರಂಭಿಸಿದ ಸಿಐಆರ್‌ಪಿ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಇಂಡಿಯನ್ ಬ್ಯಾಂಕ್‌ಗೆ ಅನುವು ಮಾಡಿಕೊಟ್ಟ ಎನ್‌ಸಿಎಲ್‌ಟಿಯು ಬ್ಯಾಂಕ್ ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡಿತ್ತು.
ಆದರೆ, ನಂತರದ ಬೆಳವಣಿಗೆಯಲ್ಲಿ ಮಂತ್ರಿ ಡೆವಲಪರ್ಸ್ ಇಂಡಿಯಾ ಬುಲ್ಸ್ ಜೊತೆ ಒಪ್ಪಂದ ಮಾಡಿಕೊಂಡ ಪರಿಣಾಮ ಅಂತಿಮವಾಗಿ ಮನವಿ ಹಿಂಪಡೆಯಲಾಗಿತ್ತು. ಹೀಗಾಗಿ ತಾನು ಮಂತ್ರಿ ಡೆವಲಪರ್ಸ್ ವಿರುದ್ಧ ಸಲ್ಲಿಸಿರುವ ದಿವಾಳಿ ಅರ್ಜಿಗೆ ಮರುಜೀವ ನೀಡುವಂತೆ ಕೋರಿ ಎನ್‌ಸಿಎಲ್‌ಟಿಯನ್ನು ಇಂಡಿಯನ್ ಬ್ಯಾಂಕ್ ಸಂಪರ್ಕಿಸಿತ್ತು. ಇದೀಗ ಈ ಅರ್ಜಿಯು ವಜಾಗೊಂಡಿದೆ.
ಸುಶೀಲ್ ಮಂತ್ರಿ ಅವರು 1999ರಲ್ಲಿ ಸ್ಥಾಪಿಸಿದ ಮಂತ್ರಿ ಡೆವಲಪರ್ಸ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಚೆನ್ನೈ, ಪುಣೆ ಮತ್ತು ಹೈದರಾಬಾದ್‌ನಂತಹ ಪ್ರಮುಖ ನಗರಗಳಲ್ಲಿ ವಸತಿ ಯೋಜನೆಗಳನ್ನು ರೂಪಿಸಿದೆ. ಬೆಂಗಳೂರಿನ ಮಂತ್ರಿ ಸ್ಕ್ವೇರ್ ಮಾಲ್, ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ಮಂತ್ರಿ ಪಿನಾಕಲ್‌ನಂತಹ ಪ್ರಮುಖ ವಾಣಿಜ್ಯ, ವಸತಿ ಸಮುಚ್ಚಯಗಳನ್ನು ಮಂತ್ರಿ ನಿರ್ಮಿಸಿದೆ. ಹಣಕಾಸು ಮುಗ್ಗಟ್ಟಿನ ಪರಿಣಾಮ ಯೋಜನೆಗಳಲ್ಲಿ ವಿಳಂಬ ಉಂಟಾಗಿ ಖರೀದಿದಾರರ ಮೇಲೆ ಪರಿಣಾಮ ಉಂಟಾಗಿತ್ತು. ಹೀಗಾಗಿ ದಾವೆದಾರರ ಕಾನೂನು ಹೋರಾಟ, ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಸುಮಾರು ₹ 1,000 ಕೋಟಿಗಳಷ್ಟು ಮಿತಿ ಮೀರಿದ ಸಾಲ, ಯೋಜನೆಗಾಗಿ ಮೀಸಲಾದ ಹಣವನ್ನು ಅನ್ಯಕಾರ್ಯಗಳಿಗೆ ದುರುಪಯೋಗಪಡಿಸಿಕೊಂಡ ಆರೋಪದಿಂದಾಗಿ ಕಂಪೆನಿಗೆ ಹಣಕಾಸು ಸಮಸ್ಯೆಗಳು ತಲೆದೋರಿದವು. ಇದು ಫ್ಲಾಟ್‌ಗಳನ್ನು ಒದಗಿಸುವಲ್ಲಿ ವಿಳಂಬ ಮತ್ತು ರದ್ದತಿಗೆ ಕಾರಣವಾಗಿ ಮನೆ ಖರೀದಿದಾರರು ಕಾನೂನು ಕ್ರಮದಕ್ಕೆ ಮುಂದಾದರು. ಹಣ ಮರುಪಾವತಿ ಮಾಡದೆಯೇ ಒಪ್ಪಂದ ರದ್ದುಗೊಳಿಸಿರುವುದು ಸೇರಿದಂತೆ ಅನ್ಯಾಯದ ವ್ಯಾಪಾರ ಕ್ರಮಗಳನ್ನು ಉಲ್ಲೇಖಿಸಿ ಗ್ರಾಹಕ ನ್ಯಾಯಾಲಯಗಳು ಕಂಪೆನಿ ವಿರುದ್ಧ ತೀರ್ಪು ನೀಡಿದ್ದವು. ಉದಾಹರಣೆಗೆ ಬೆಂಗಳೂರು ನಗರ ಗ್ರಾಹಕ ಆಯೋಗ ಅಪಾರ್ಟ್‌ಮೆಂಟ್ ದೊರೆಯದ ಖರೀದಿದಾರರಿಗೆ ಪರಿಹಾರ ನೀಡುವಂತೆ ಮಂತ್ರಿ ಡೆವಲಪರ್ಸ್‌ಗೆ ನಿರ್ದೇಶಿಸಿತ್ತು.
ಇಂಡಿಯನ್ ಬ್ಯಾಂಕ್ ಪರ ವಕೀಲ ಎಚ್.ಆರ್.ಕಟ್ಟಿ ಹಾಗೂ ಮಂತ್ರಿ ಡೆವಲಪರ್ಸ್ ಪರ ವಕೀಲ ಅನೀಶ್ ಆಚಾರ್ಯ ವಾದ ಮಂಡಿಸಿದ್ದರು.