ಎನ್ ಸಿಎಲ್ ಟಿ ಮುಂಬೈ ಪೀಠ
ಎನ್ ಸಿಎಲ್ ಟಿ ಮುಂಬೈ ಪೀಠ 
ಸುದ್ದಿಗಳು

ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್ಸ್ ಮುಚ್ಚುವಂತೆ ಮುಂಬೈ ಎನ್‌ಸಿಎಲ್‌ಟಿ ಆದೇಶ

Bar & Bench

ಬ್ಯಾಂಕ್‌ಗಳಿಗೆ ವಂಚನೆ ಆರೋಪ ಎದುರಿಸುತ್ತಿರುವ ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಆಭರಣ ಚಿಲ್ಲರೆ ಕಂಪನಿ ಗೀತಾಂಜಲಿ ಜೆಮ್ಸ್ ಮುಚ್ಚುವಂತೆ ಮುಂಬೈನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಫೆಬ್ರವರಿ 7ರಂದು ಆದೇಶಿಸಿದೆ.

ಈ ಸಂಬಂಧ ನ್ಯಾಯಾಂಗ ಸದಸ್ಯ ಕುಲದೀಪ್ ಕುಮಾರ್ ಕರೀರ್ ಮತ್ತು ತಾಂತ್ರಿಕ ಸದಸ್ಯ ಅನಿಲ್ ರಾಜ್ ಚೆಲ್ಲನ್ ಅವರನ್ನೊಳಗೊಂಡ ನ್ಯಾಯಮಂಡಳಿ, ಶಂತನು ಟಿ ರೇ ಅವರನ್ನು ಸಮಾಪನಾಧಿಕಾರಿಯಾಗಿ ( ಲಿಕ್ವಿಡೇಟರ್) ನೇಮಿಸಿದೆ.

ಪಿಎಂಎಲ್‌ಎ ಸೆಕ್ಷನ್‌ಗಳಡಿ ಗೀತಾಂಜಲಿ ಜೆಮ್ಸ್‌ಗೆ ಸೇರಿದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ ಎಂಬುದು ಸ್ಪಷ್ಟವಾಗಿದ್ದು ನಡೆಯುತ್ತಿರುವ ತನಿಖೆಗಳು ಮತ್ತು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಡುವೆ ದಿವಾಳಿತನ ಪರಿಹಾರದ ಸಾಧ್ಯತೆಗಳು ಕ್ಷೀಣಿಸಿರುವುದನ್ನು ಪರಿಗಣಿಸಿ ಸಿಒಸಿ ಕಾರ್ಪೊರೇಟ್ ಸಾಲಗಾರನನ್ನು 90.16% ಬಹುಮತದಿಂದ ಮುಚ್ಚಲು ನಿರ್ಧರಿಸಿತ್ತು. ಕಾರ್ಪೊರೇಟ್ ಸಾಲಗಾರನನ್ನು ದಿವಾಳಿಗೊಳಿಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಡುತ್ತಿದೆ" ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ದಿವಾಳಿತನಕ್ಕೆ ಗುರಿಯಾದ ಚೋಕ್ಸಿ ಒಡೆತನದ ಎರಡನೇ ಕಂಪೆನಿ ಇದಾಗಿದೆ. ನಕ್ಷತ್ರ ವರ್ಲ್ಡ್‌ ಎಂಬ ಅವರ ಇನ್ನೊಂದು ಆಭರಣ ಚಿಲ್ಲರೆ ಉದ್ಯಮವನ್ನು ಜುಲೈ 2021ರಲ್ಲಿ ದಿವಾಳಿ ಎಂದು ಘೋಷಿಸಲಾಗಿತ್ತು.

ಗೀತಾಂಜಲಿ ಜೆಮ್ಸ್ 12,000 ಕೋಟಿ ರೂಪಾಯಿ ಪಾವತಿಸದ ಹಿನ್ನೆಲೆಯಲ್ಲಿ ಅದರ ವಿರುದ್ಧ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (ಸಿಐಆರ್‌ಪಿ) ಆರಂಭಿಸಲಾಗಿತ್ತು.

ಸಿಐಆರ್‌ಪಿಯ ಅವಧಿ 2019ರ ಏಪ್ರಿಲ್‌ನಲ್ಲಿ ಕೊನೆಗೊಳ್ಳುತ್ತಿತ್ತು. ಗೀತಾಂಜಲಿ ಜೆಮ್ಸ್ ವ್ಯವಹಾರ ನಡೆಸುತ್ತಿಲ್ಲವಾದ ಕಾರಣ ಮತ್ತದರ ಎಲ್ಲಾ ಆಸ್ತಿಗಳನ್ನು ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಅದನ್ನು ವಿಸ್ತರಿಸದಿರಲು ಸಾಲದಾತರ ಸಮಿತಿ (ಸಿಒಸಿ) ನಿರ್ಧರಿಸಿತ್ತು. ಆದ್ದರಿಂದ ಗೀತಾಂಜಲಿ ಜೆಮ್ಸ್‌ ಪರಿಹಾರ ಪಡೆಯುವ ಸಾಧ್ಯತೆಗಳು ಕ್ಷೀಣಿಸಿದ್ದವು. ಈ ಹಿನ್ನೆಲೆಯಲ್ಲಿ ಆರ್‌ಪಿ ಅವರು ಗೀತಾಂಜಲಿಯನ್ನು ದಿವಾಳಿಯಾಗಿದೆ ಎಂದು ಘೋಷಿಸುವಂತೆ ಆರ್‌ಪಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಎನ್‌ಸಿಎಲ್‌ಟಿ ಪುರಸ್ಕರಿಸಿತು.

ಕಂಪನಿಯ ಸಮಾಪನಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಆರ್‌ಪಿ ಅವರು ಬಯಸಲಿಲ್ಲವಾದ್ದರಿಂದ ಸಿಒಸಿಯ ಒಪ್ಪಿಗೆಯೊಂದಿಗೆ ಹೊಸ ಸಮಾಪನಾಧಿಕಾರಿಯನ್ನು ಇದೇ ವೇಳೆ ನೇಮಿಸಲಾಯಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Vijay Kumar Garg v. Gitanjali Gems.pdf
Preview