AIR INDIA , Vistara 
ಸುದ್ದಿಗಳು

ಏರ್ ಇಂಡಿಯಾದೊಂದಿಗೆ ವಿಸ್ತಾರ ಏರ್‌ಲೈನ್ಸ್‌ ವಿಲೀನ: ಎನ್‌ಸಿಎಲ್‌ಟಿ ಅಸ್ತು

ಪ್ರಸ್ತಾಪಿತ ವಿಲೀನಕ್ಕೆ ಸಂಬಂಧಪಟ್ಟ ಷೇರುದಾರರು ಮತ್ತು ಸಾಲಗಾರರಿಂದ ಅನುಮೋದನೆ ದೊರೆತಿದ್ದು ನಿಯಂತ್ರಕ ಅಧಿಕಾರಿಗಳಿಂದ ಯಾವುದೇ ಗಂಭೀರ ಆಕ್ಷೇಪಣೆಗಳಿಲ್ಲ ಎಂದು ಎನ್‌ಸಿಎಲ್‌ಟಿಯ ಜೂನ್ 6ರ ತೀರ್ಪು ಹೇಳಿದೆ.

Bar & Bench

ವಿಮಾನಯಾನ ಕಂಪೆನಿಗಳಾದ ಏರ್ ಇಂಡಿಯಾ ಮತ್ತು ವಿಸ್ತಾರ ನಡುವಿನ ವಿಲೀನಕ್ಕೆ ಚಂಡೀಗಢದಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಸಮ್ಮತಿಸಿದೆ.

ಅರ್ಜಿದಾರ ಕಂಪೆನಿಗಳಾದ ಏರ್‌ ಇಂಡಿಯಾ ಸ್ವಾಧೀನದ ಕಂಪೆನಿ ತಾಲೇಸ್ ಪ್ರೈವೇಟ್ ಲಿಮಿಟೆಡ್ ಹಾಗೂ ವಿಸ್ತಾರವನ್ನು ನಿರ್ವಹಿಸುವ ಜಂಟಿ ಉದ್ಯಮ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸಿಂಗಪೋರ್‌ ಏರ್‌ಲೈನ್ಸ್ ಲಿಮಿಟೆಡ್‌ಗೆ ಸೇರಿದ ಟಾಟಾ ಸಿಯಾ ಏರ್‌ಲೈನ್ಸ್ ಲಿಮಿಟೆಡ್ ಮತ್ತು ಏರ್‌ ಇಂಡಿಯಾ ಲಿಮಿಟೆಡ್‌  ಪ್ರಸ್ತಾಪಿಸಿದ ಸಂಯೋಜಿತ ಯೋಜನೆಯನ್ನು ಎನ್‌ಸಿಎಲ್‌ಟಿ ಅನುಮೋದಿಸಿದೆ.

ವಿಲೀನ ಯೋಜನೆಗೆ ಅನುಮತಿ ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಾಂಗ ಸದಸ್ಯ ಹರ್ಲಾಮ್ ಸಿಂಗ್ ಠಾಕೂರ್ ಮತ್ತು ತಾಂತ್ರಿಕ ಸದಸ್ಯ ಎಲ್‌ಎನ್ ಗುಪ್ತಾ ಅವರಿದ್ದ ಪೀಠ ಹೇಳಿದೆ.

ಪ್ರಸ್ತಾವಿತ ವಿಲೀನಕ್ಕೆ ಸಂಬಂಧಪಟ್ಟ ಷೇರುದಾರರು ಮತ್ತು ಸಾಲಗಾರರಿಂದ ಅನುಮೋದನೆ ದೊರೆತಿದ್ದು ನಿಯಂತ್ರಕ ಅಧಿಕಾರಿಗಳಿಂದ ಯಾವುದೇ ಗಂಭೀರ ಆಕ್ಷೇಪಣೆಗಳಿಲ್ಲ ಎಂದು ಎನ್‌ಸಿಎಲ್‌ಟಿಯ ಜೂನ್ 6ರ ತೀರ್ಪು ತಿಳಿಸಿದೆ.  

"ಅದರ ಪ್ರಕಾರ, ಅರ್ಜಿದಾರ ಕಂಪನಿಗಳು ಮತ್ತು ಅವರ ಷೇರುದಾರರ ನಡುವಿನ 'ಸಂಯೋಜಿತ ಯೋಜನೆ'ಗೆ ಕಂಪನಿಗಳ ಕಾಯಿದೆ-2013ರ ಸೆಕ್ಷನ್ 230 ಮತ್ತು 232ರ ಸೆಕ್ಷನ್‌ಅಡಿ ಮಂಜೂರಾತಿ ನೀಡಲಾಗಿದೆ ಎಂದು ಅದು ವಿವರಿಸಿದೆ.

ಅರ್ಜಿದಾರ ಕಂಪನಿಗಳು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಸಂಬಂಧಿತ ಶಾಸನಬದ್ಧ ಅಧಿಕಾರಿಗಳಿಗೆ ಎಲ್ಲಾ ಅಗತ್ಯ ಸೂಚನೆಗಳನ್ನು ನೀಡಿವೆ ಎಂಬುದನ್ನು ಪೀಠದ ಗಮನಕ್ಕೆ ತರಲಾಯಿತು.

ಡಿಜಿಸಿಎ ಹೊರಡಿಸಿರುವ ನಾಗರಿಕ ವಿಮಾನಯಾನ ನಿಯಂತ್ರಣ ನಿಯಮಾವಳಿ (ಸಿಎಆರ್) ಅಡಿಯಲ್ಲಿ ಅಗತ್ಯವಾದ ಭದ್ರತಾ ಅನುಮತಿಗಳನ್ನು ಹೊರತುಪಡಿಸಿ ಸಿಂಗಪೋರ್‌ ಏರ್‌ಲೈನ್ಸ್‌ (ವಿಸ್ತಾರ ಷೇರುದಾರ) ವಿದೇಶಿ ನೇರ ಹೂಡಿಕೆ ಅನುಮೋದನೆ ಪಡೆದುಕೊಂಡಿದ್ದರೆ, ಪ್ರಸ್ತಾವಿತ ವಿಲೀನಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ನ್ಯಾಯಮಂಡಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿತ್ತು.  

ಸಚಿವಾಲಯದ ಸಲಹೆಗೆ ಅನುಗುಣವಾಗಿ, ಅರ್ಜಿದಾರ-ಕಂಪೆನಿಗಳಿಗೆ ವಿಲೀನ ಪ್ರಕ್ರಿಯೆ ಮತ್ತು ಸಂಬಂಧಿತ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಎನ್‌ಸಿಎಲ್‌ಟಿ ಒಂಬತ್ತು ತಿಂಗಳ ಸಮಯಾವಕಾಶ ನೀಡಿದೆ.

ಇದೇ ವೇಳೆ ನ್ಯಾಯೋಚಿತ ವ್ಯಾಪಾರ ನಿಯಂತ್ರಕವಾದ ಭಾರತ ಸ್ಪರ್ಧಾ ಆಯೋಗ (ಸಿಸಿಐ) ಕೂಡ ತನ್ನ ಅನುಮೋದನೆ ನೀಡಿದೆ ಎಂದು ಎನ್‌ಸಿಎಲ್‌ಟಿ ಹೇಳಿದೆ. ಸಂಬಂಧಪಟ್ಟ ಕಂಪನಿಗಳ ಪ್ರಾದೇಶಿಕ ನಿರ್ದೇಶಕರು, ಅಧಿಕೃತ ಬರಖಾಸ್ತುದಾರರು ಅಥವಾ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಆಕ್ಷೇಪಣೆಗಳಿಲ್ಲದ ಕಾರಣ, ವಿಲೀನಕ್ಕೆ ಸಮ್ಮತಿಸುತ್ತಿರುವುದಾಗಿ ಎನ್‌ಸಿಎಲ್‌ಟಿ ತಿಳಿಸಿದೆ.