Air India
Air India 
ಸುದ್ದಿಗಳು

ಏರ್ ಇಂಡಿಯಾ ವಿರುದ್ಧ ದಿವಾಳಿ ಪ್ರಕ್ರಿಯೆ: ಮನವಿ ತಿರಸ್ಕರಿಸಿದ ಎನ್‌ಸಿಎಲ್‌ಟಿ

Bar & Bench

ದಿವಾಳಿ ಸಂಹಿತೆ- 2016ರ ಸೆಕ್ಷನ್ 9ರ ಅಡಿಯಲ್ಲಿ ಏರ್ ಇಂಡಿಯಾ ವಿರುದ್ಧ ಕಾರ್ಪೊರೇಟ್ ದಿವಾಳಿ ನಿರ್ಣಯ ಪ್ರಕ್ರಿಯೆ (ಸಿಐಆರ್‌ಪಿ) ಆರಂಭಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ನವದೆಹಲಿ ಪೀಠ ಮಂಗಳವಾರ ತಿರಸ್ಕರಿಸಿದೆ.

ಕಾರ್ಯಾಚರಣೆಯ ಸಾಲದಾತ ಬಿಕೆಪಿ ಎಂಟರ್‌ಪ್ರೈಸ್‌ನ ಮಾಲೀಕ ಭರತ್ ಝವೇರಿ ಸಲ್ಲಿಸಿದ ಮನವಿಯನ್ನು ವಿಳಂಬವಾಗಿದೆ ಎಂಬ ಆಧಾರದಲ್ಲಿ ಎನ್‌ಸಿಎಲ್‌ಟಿಯ ನ್ಯಾಯಾಂಗ ಸದಸ್ಯ ಅಬ್ನಿ ಕುಮಾರ್ ರಂಜನ್ ಸಿನ್ಹಾ ಮತ್ತು ತಾಂತ್ರಿಕ ಸದಸ್ಯ ಎಲ್‌ಎನ್ ಗುಪ್ತಾ ಅವರಿದ್ದ ಪೀಠ ತಿರಸ್ಕರಿಸಿತು. ಮೂರು ವರ್ಷಗಳ ಗಡುವು ಮೀರಿ ಅರ್ಜಿ ಸಲ್ಲಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಕಾಲಮಿತಿ ನಿಯಮದನ್ವಯ ಮನವಿಯನ್ನು ನಿರ್ಬಂಧಿಸಲಾಗಿದೆ ಎಂದು ಎನ್‌ಸಿಎಲ್‌ಟಿ ತಿಳಿಸಿದೆ.

ಸಕಾಲದಲ್ಲಿ ಸೆಕ್ಷನ್ 9 ಅರ್ಜಿಯನ್ನು ಸಲ್ಲಿಸಲು ಕಾರ್ಯಾಚರಣಾ ಸಾಲದಾತನಿಗೆ ಏಕೆ ಸಾಧ್ಯವಾಗಲಿಲ್ಲ ಮತ್ತು ಅರ್ಜಿ ಸಲ್ಲಿಸಲು ವಿಳಂಬವಾದ ದಿನಗಳ ಜೊತೆಗೆ ಅದನ್ನು ಸಲ್ಲಿಸದೇ ಇರಲು ನಿರ್ದಿಷ್ಟವಾದ ಕಾರಣಗಳು ಯಾವುವು ಎಂಬುದರ ಕುರಿತು ಅರ್ಜಿದಾರರು ಯಾವುದೇ ನಿರ್ದಿಷ್ಟ ಹೇಳಿಕೆ ನೀಡಿಲ್ಲ ಎಂದು ಪೀಠ ವಿವರಿಸಿದೆ.

ಕಾರ್ಪೊರೇಟ್ ದಿವಾಳಿತನ ನಿರ್ಣಯ ಪ್ರಕ್ರಿಯೆ ಆರಂಭಿಸಲು ಜುಲೈ 9, 2021 ರಂದು ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಏರ್‌ ಇಂಡಿಯಾ ಕಾಲದ ಮಿತಿಯೊಳಗೆ ಸಾಲ ಪಾವತಿಸಬೇಕಿದ್ದ (ಡಿಫಾಲ್ಟ್‌ ಆಫ್‌ ಡ್ಯೂಸ್‌) ದಿನಾಂಕ ಮಾರ್ಚ್ 11, 2013ಅನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಸಿದ್ದು ಮಾತ್ರ ಜೂನ್ 30, 2021 ರಂದು. ಹೀಗಾಗಿ ಕಾಲಮಿತಿ ಮತ್ತು ನಿರ್ವಹಣೆಯ ಅಂಶವನ್ನು ಪೀಠಕ್ಕೆ ಮನವಿ ಮಾಡಿಕೊಡುವಂತೆ ಎನ್‌ಸಿಎಲ್‌ಟಿ ಕಾರ್ಯಾಚರಣೆ ಸಾಲದಾತನಿಗೆ ಸೂಚಿಸಿತು.

ಸಾಲದಾತ 3 ವರ್ಷಗಳ ಮಿತಿಯೊಳಗೆ ಮನವಿ ಸಲ್ಲಿಸಿಲ್ಲ ಎಂದು ಈಗಾಗಲೇ ಒಪ್ಪಿಕೊಂಡಿದ್ದು ಹೀಗಾಗಿ ವಿಳಂಬಕ್ಕೆ ಕ್ಷಮೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. ಸಾಲದಾತ ಪ್ರಾಮಾಣಿಕವಾಗಿ ವರ್ತಿಸಿದ್ದು ಕಾರ್ಯಾಚರಣೆ ಸಾಲದಾತನಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸೆಕ್ಷನ್ 9 ಅರ್ಜಿಯನ್ನು ಪ್ರಸ್ತುತಪಡಿಸುವಲ್ಲಿ ವಿಳಂಬ ಉಂಟಾಯಿತು ಎಂದು ವಾದಿಸಲಾಯಿತು.

ಕಾರ್ಯಾಚರಣೆಯ ಸಾಲದಾತ ಸಂಸ್ಥೆಯು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮದಡಿ ಬರುವಂಥದ್ದಾಗಿದ್ದರೂ ಸಹ 2013ರಿಂದ ಏರ್‌ ಇಂಡಿಯಾ ಮರುಪಾವತಿಸುವುದಾಗಿ ಒಪ್ಪಿಕೊಂಡ ಬಾಕಿ ಮೊತ್ತ ಪಡೆಯುವ ಸಲುವಾಗಿ ಹೋರಾಡುತ್ತಿರುವುದಾಗಿ ವಾದ ಮಂಡಿಸಲಾಯಿತು. ಸಾಲಗಾರ (ಏರ್‌ ಇಂಡಿಯಾ), ಕೇಂದ್ರ ಸರ್ಕಾರದ ಕಂಪನಿಯಾಗಿದ್ದು, ನ್ಯಾಯೋಚಿತ ತತ್ವಗಳಿಂದ ಸಂಪೂರ್ಣ ದೂರವಿದ್ದು, ಅನಿಯಂತ್ರತೆಯ ದುಷ್ಕೃತ್ಯದಲ್ಲಿ ಸಿಲುಕಿಕೊಂಡಿತ್ತು ಎಂದು ತಿಳಿಸಲಾಗಿತ್ತು.

ಆದರೂ ಸೂಕ್ತ ಸಮಯಕ್ಕೆ ಸೆಕ್ಷನ್ 9 ಅರ್ಜಿ ಸಲ್ಲಿಸದೇ ಇರಲು ಕಾರಣ ಏನು ಏಂಬುದನ್ನು ವಿವರಿಸುವ ಯಾವುದೇ ನಿರ್ದಿಷ್ಟ ವಾದ ಇರಲಿಲ್ಲ ಎಂದು ಎನ್‌ಸಿಎಲ್‌ಟಿ ಹೇಳಿತು. “ಪ್ರಸ್ತುತ ಅರ್ಜಿ ಸಲ್ಲಿಸುವಲ್ಲಿ ಉಂಟಾದ ವಿಳಂಬ ಕ್ಷಮಿಸುವುದಕ್ಕಾಗಿ ಅಗತ್ಯವಾದ ಸೂಕ್ತ ಕಾರಣಗಳನ್ನು ನೀಡಲು ಕಾರ್ಯಾಚರಣೆಯ ಸಾಲದಾತ ವಿಫಲಾಗಿದ್ದಾರೆ ಎಂದು ನಾವು ತೀರ್ಮಾನಿಸಿದ್ದು ಹೀಗಾಗಿ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಲು ಒಲವು ತೋರುತ್ತಿಲ್ಲ” ಎಂದಿತು. ಪರಿಣಾಮ ಕಾಲಮಿತಿಯ ನಿರ್ಬಂಧಕ್ಕೊಳಗಾದ ಅರ್ಜಿಯನ್ನು ವಜಾಗೊಳಿಸಲಾಯಿತು. ವಕೀಲರಾದ ಸುವಿಜ್ಞಾ ಅವಸ್ಥಿ ಮತ್ತು ವಿವೇಕ್ ಜೋಶಿ ಕಾರ್ಯಾಚರಣೆ ಸಾಲಗಾರ ಸಂಸ್ಥೆ ಪರವಾಗಿ ವಾದಿಸಿದರು.