NCLT Mumbai, Anupam, Shaadi  
ಸುದ್ದಿಗಳು

ಶಾದಿ.ಕಾಮ್‌ ಸಿಇಒಗೆ ಸಂಬಂಧಿಸಿದ ಮಧ್ಯಸ್ಥಿಕೆ ಪ್ರಕ್ರಿಯೆಗೆ ಎನ್‌ಸಿಎಲ್‌ಟಿ ತಾತ್ಕಾಲಿಕ ತಡೆ

Bar & Bench

ಸಿಂಗಪೋರ್‌ ಮಧ್ಯಸ್ಥಿಕೆ ಕೇಂದ್ರದಲ್ಲಿ ಮುಂದಿನ ವಾರ ಆರಂಭವಾಗಬೇಕಿದ್ದ ಶಾದಿ.ಕಾಮ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅನುಪಮ್ ಮಿತ್ತಲ್ ಅವರಿಗೆ ಸಂಬಂಧಿಸಿದ ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಮುಂಬೈನಲ್ಲಿರುವ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯ ಮಂಡಳಿ ಈಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ [ಅನುಪಮ್‌ ಮಿತ್ತಲ್‌ ಮತ್ತು ಪೀಪಲ್‌ ಇಂಟರಾಕ್ಟೀವ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ಮತ್ತಿತರರ ನಡುವಣ ಪ್ರಕರಣ].

ನ್ಯಾಯಾಂಗ ಸದಸ್ಯೆ ರೀಟಾ ಕೊಹ್ಲಿ ಮತ್ತು ತಾಂತ್ರಿಕ ಸದಸ್ಯ ಮಧು ಸಿನ್ಹಾ ಅವರಿದ್ದ ಪೀಠ ಸೆಪ್ಟೆಂಬರ್ 15ರಂದು ಮಧ್ಯಂತರ ಆದೇಶವನ್ನು ನೀಡಿತು.

"ವಿಲಕ್ಷಣವಾದ ಸಂದರ್ಭ ಸನ್ನಿವೇಶಗಳ ಹಿನ್ನೆಲೆಯಲ್ಲಿ ಹಾಗೂ ಮತ್ತು ಸ್ಥಾಪಿತ ಕಾನೂನಿನ ದೃಷ್ಟಿಯಿಂದ, ಅರ್ಜಿದಾರರು (ಮಿತ್ತಲ್) ಮಧ್ಯಂತರ ತಡೆಯಾಜ್ಞೆಯ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ , 2023ರ ಸೆಪ್ಟೆಂಬರ್ 18 ರಿಂದ 22ರವರೆಗೆ ನಿಗದಿಪಡಿಸಲಾದ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ತಡೆಯುವ ಅಗತ್ಯವಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎನ್‌ಸಿಎಲ್‌ಟಿ ಮುಂದೆ ಇರುವ ಪ್ರಸಕ್ತ ಪ್ರಕರಣವು ಶಾದಿ.ಕಾಮ್‌ ಒಡೆತನವನ್ನು ಹೊಂದಿರುವ ಪೀಪಲ್‌ ಇಂಟೆರಾಕ್ಟೀವ್‌ (ಇಂಡಿಯಾ) ಪ್ರೈವೆಟ್‌ ಲಿಮಿಟೆಡ್‌ ಹಾಗೂ ಅದರಲ್ಲಿ ಹೂಡಿಕೆ ಮಾಡಿರುವ ವೆಸ್ಟ್‌ಬ್ರಿಜ್‌ ವೆಂಚರ್ಸ್‌ ನಡುವಿನ ವಿವಾದದಿಂದಾಗಿ ಉದ್ಭವಿಸಿದೆ.

ಪೀಪಲ್‌ ಇಂಟರಾಕ್ಟೀವ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ನೊಂದಿಗೆ ಕಾರ್ಯಗತಗೊಳಿಸಿದ ಷೇರುದಾರರ ಒಪ್ಪಂದದಲ್ಲಿ (ಎಸ್‌ಎಚ್‌ಎ) ನಿರ್ಗಮನ ಹಕ್ಕುಗಳು ಸೇರಿದಂತೆ ಕೆಲವು ಒಪ್ಪಂದದ ಹಕ್ಕುಗಳನ್ನು ತಾನು ಹೊಂದಿರುವುದಾಗಿ ವೆಸ್ಟ್‌ಬ್ರಿಜ್‌ ಹೇಳಿಕೊಂಡಿದೆ. ಒಪ್ಪಂದ ಮಧ್ಯಸ್ಥಿಕೆ ಷರತ್ತನ್ನು ಸಹ ಹೊಂದಿದ್ದು, ಇದರ ಅನ್ವಯ ವಿವಾದಗಳ ಮಧ್ಯಸ್ಥಿಕೆಯು ಸಿಂಗಪೋರ್‌ನಲ್ಲಿ ನಡೆಯಬೇಕಿದೆ ಎಂದಿದೆ. ಆದರೆ ತೀರ್ಪು ಜಾರಿ ಭಾರತೀಯ ಕಾನೂನುಗಳಿಗೆ ಒಳಪಟ್ಟಿರಲಿದೆ ಎಂದಿದೆ.

ಪೀಪಲ್‌ ಇಂಟೆರಾಕ್ಟೀವ್‌ ಸಂಸ್ಥೆಯ ನಿರ್ವಹಣೆಗೆ ಸಂಬಂಧಿಸಿದಂತೆ ಈ ಎರಡು ಸಂಸ್ಥೆಗಳ ನಡುವೆ ವಿವಾದ ಏರ್ಪಟ್ಟಿದೆ. ಪೀಪಲ್ ಇಂಟರ್‌ಆಕ್ಟೀವ್‌ ನಿರ್ದೇಶಕರ ಮಂಡಳಿಯಲ್ಲಿ ತನ್ನ ನಾಮನಿರ್ದೇಶಿತರನ್ನು ನೇಮಿಸುವ ಕ್ರಮಗಳು ಸೇರಿದಂತೆ ವೆಸ್ಟ್‌ಬ್ರಿಜ್‌ನ ಅನೇಕ ಕ್ರಮಗಳು ದಬ್ಬಾಳಿಕೆ ಹಾಗೂ ದುರುಪಯೋಗಕ್ಕೆ ಕಾರಣವಾಗಿವೆ ಎಂದು ಆಕ್ಷೇಪಿಸಿ ಮಿತ್ತಲ್‌ ಎನ್‌ಸಿಎಲ್‌ಟಿ ಮೊರೆ ಹೋಗಿದ್ದಾರೆ.