National Commission for Women  
ಸುದ್ದಿಗಳು

ಹೇಮಾ ಸಮಿತಿಯ ವರದಿ ಯಥಾವತ್‌ ಸಲ್ಲಿಸುವಂತೆ ಕೇರಳ ಸರ್ಕಾರಕ್ಕೆ ಕೇಂದ್ರ ಮಹಿಳಾ ಆಯೋಗ ಸೂಚನೆ

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ ಮತ್ತು ಕಿರುಕುಳದ ಸಮಸ್ಯೆಗಳನ್ನು ವರದಿ ಬಹಿರಂಗಪಡಿಸಿತ್ತು.

Bar & Bench

ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ನಿಂದನೆ ಮತ್ತು ಕಿರುಕುಳವನ್ನು ಬಹಿರಂಗಪಡಿಸಿದ್ದ ನ್ಯಾಯಮೂರ್ತಿ ಕೆ ಹೇಮಾ ಸಮಿತಿಯ ವರದಿಯನ್ನು ಯಾವುದೇ ರೀತಿಯಲ್ಲಿ ಮಬ್ಬುಗೊಳಿಸದೆ ಯಥಾವತ್‌ ಆವೃತ್ತಿ ಸಲ್ಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (NCW) ಕೇರಳ ಸರ್ಕಾರವನ್ನು ಸೂಚಿಸಿದೆ.

ಬಿಜೆಪಿ ನಾಯಕರಾದ ಸಂದೀಪ್ ವಾಚಸ್ಪತಿ ಮತ್ತು ಪಿಆರ್ ಶಿವಶಂಕರ್ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಆಯೋಗ ಕೇರಳದ ಮುಖ್ಯ ಕಾರ್ಯದರ್ಶಿ ಅವರಿಗೆ ಅಧಿಕೃತ ಪತ್ರ ಕಳುಹಿಸಿದೆ.

ನಿರ್ಣಾಯಕ ಅಂಶಗಳನ್ನು ಬಿಟ್ಟು ರಾಜ್ಯ ಸರ್ಕಾರ ವರದಿಯ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಿದ್ದ ಹಿನ್ನೆಲೆಯಲ್ಲಿ ಆಯೋಗಕ್ಕೆ ಈ ದೂರು ನೀಡಲಾಗಿತ್ತು.

ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು 'ವಿಮೆನ್ ಇನ್ ಸಿನಿಮಾ ಕಲೆಕ್ಟಿವ್' ಸಂಸ್ಥೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಕೇರಳ ಸರ್ಕಾರ ನ್ಯಾಯಮೂರ್ತಿ ಕೆ ಹೇಮಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ ಮತ್ತು ಕಿರುಕುಳವನ್ನು ವರದಿ ತಿಳಿಸಿತ್ತು.  

ಎರಡು ವರ್ಷಗಳ ತನಿಖೆಯ ನಂತರ, ಸಮಿತಿ ತನ್ನ ವರದಿಯನ್ನು 2019ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ವರದಿಯನ್ನು ಸರ್ಕಾರ ಅಧಿಕೃತವಾಗಿ ಬಹಿರಂಗಗೊಳಿಸಿರಲಿಲ್ಲ. ನಂತರ ಪತ್ರಕರ್ತರ ಮನವಿ ಹಿನ್ನಲೆಯಲ್ಲಿ ವೈಯಕ್ತಿಕ ಮಾಹಿತಿಯನ್ನು ಬಿಟ್ಟು  ವರದಿಯ ಕೆಲ ಭಾಗಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ರಾಜ್ಯ ಮಾಹಿತಿ ಆಯೋಗ ಅವಕಾಶ ಮಾಡಿಕೊಟ್ಟಿತ್ತು.

ಇದರ ಹೊರತಾಗಿಯೂ ಸರ್ಕಾರ ವರದಿ ಬಿಡುಗಡೆ ಮಾಡುವುದನ್ನು ವಿಳಂಬ ಮಾಡಿತ್ತು. ಈ ವರ್ಷದ ಆಗಸ್ಟ್ 19 ರಂದು ವರದಿ ಬಹಿರಂಗಗೊಂಡಿತ್ತು.

ಅತ್ಯಾಚಾರದ ಆರೋಪ ಹೊತ್ತಿರುವ ನಟ-ಶಾಸಕ ಮುಖೇಶ್ ಸೇರಿದಂತೆ ವರದಿಯಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿಗಳನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ಬಿಜೆಪಿ ಸೇರಿದಂತೆ ಹಲವರು ಟೀಕಿಸಿದ್ದಾರೆ. ವರದಿ ಬಿಡುಗಡೆಯಾದ ನಂತರ, ನಟರಾದ ಸಿದ್ದಿಕ್, ಎಡವೇಲ ಬಾಬು ಮತ್ತು ನಿರ್ದೇಶಕ ರಂಜಿತ್ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ.