Muslim Marraige 
ಸುದ್ದಿಗಳು

ಇತರೆ ಸಮುದಾಯಗಳ ಕನಿಷ್ಠ ಮದುವೆ ವಯೋಮಿತಿಯನ್ನೇ ಮುಸ್ಲಿಂ ಸಮುದಾಯಕ್ಕೆ ಅನ್ವಯಿಸಲು ಕೋರಿ ಸುಪ್ರೀಂ ಮೊರೆಹೋದ ಮಹಿಳಾ ಆಯೋಗ

ಆಯೋಗದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾ. ಪಿ ಎಸ್ ನರಸಿಂಹ ಅವರಿದ್ದ ಪೀಠ.

Bar & Bench

ಇತರೆ ಧರ್ಮಗಳಿಗೆ ಸೇರಿದ ವ್ಯಕ್ತಿಗಳ ವಿವಾಹಕ್ಕೆ ವಿಧಿಸಲಾಗಿರುವ ಕನಿಷ್ಠ ವಯೋಮಿತಿಯನ್ನು ಮುಸಲ್ಮಾನ ಸಮುದಾಯಕ್ಕೂ ನಿಗದಿಪಡಿಸುವಂತೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಂಬಂಧ ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಎನ್‌ಸಿಡಬ್ಲ್ಯೂ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ವಕೀಲ ನಿತಿನ್‌ ಸಲೂಜ ಅವರ ಮೂಲಕ ಆಯೋಗ ಸಲ್ಲಿಸಿದ್ದ  ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾ. ಪಿ ಎಸ್‌ ನರಸಿಂಹ ಅವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿತು. ಎನ್‌ಸಿಡಬ್ಲ್ಯೂ ಪರವಾಗಿ ಹಿರಿಯ ನ್ಯಾಯವಾದಿ ಗೀತಾ ಲೂತ್ರಾ, ವಕೀಲರಾದ ಶಿವಾನಿ ಲೂತ್ರಾ ಲೋಹಿಯಾ ಮತ್ತು ಅಸ್ಮಿತಾ ನರುಲಾ ಹಾಜರಿದ್ದರು.

ಭಾರತದಲ್ಲಿ ಮದುವೆಯ ಕನಿಷ್ಠ ವಯಸ್ಸು ಮಹಿಳೆಯರಿಗೆ 18 ಮತ್ತು ಪುರುಷರಿಗೆ 21 ಆಗಿದೆ. ಇಬ್ಬರಿಗೂ ಏಕರೂಪದ ವಯೋಮಿತಿ ವಿಧಿಸುವ ಮಸೂದೆ ಸಂಸದೀಯ ಸಮಿತಿಯ ಮುಂದೆ ಪರಿಶೀಲನೆಗೆ ಬಾಕಿ ಉಳಿದಿದೆ.

ಆದರೂ ಮುಸ್ಲಿಂ ಮಹಿಳೆಯರ ವಿವಾಹ ವಯೋಮಿತಿ 15 ವರ್ಷಗಳಾಗಿದ್ದು, 15 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರೊಂದಿಗಿನ ಮದುವೆ ಸಿಂಧು ಎಂದು ಪರಿಗಣಿಸಲಾಗುತ್ತದೆ.

ಅರ್ಜಿಯಲ್ಲೇನಿದೆ?

  • ಅಪ್ರಾಪ್ತ ವಯಸ್ಸಿನ ಮುಸ್ಲಿಂ ಮಹಿಳೆಯರ ಪರ ಮೂಲಭೂತ ಹಕ್ಕುಗಳ ಜಾರಿಗಾಗಿ ಪಿಐಎಲ್‌ ಸಲ್ಲಿಸಲಾಗುತ್ತಿದೆ.  ಇದರಿಂದಾಗಿ ಇತರ ಧರ್ಮಗಳಿಗೆ ಅನ್ವಯವಾಗುವ ದಂಡನೀಯ ಕಾನೂನುಗಳಿಗೆ ಅನುಗುಣವಾಗಿ ಇಸ್ಲಾಮಿಕ್ ವೈಯಕ್ತಿಕ ಕಾನೂನನ್ನು ರೂಪಿಸಲು ಸಾಧ್ಯವಾಗಲಿದೆ.

  • ಮುಸ್ಲಿಮರಿಗೆ 15 ವರ್ಷಕ್ಕೆ ಮದುವೆಯಾಗಲು ಅವಕಾಶ ನೀಡಿರುವುದು ಮನಸೋಇಚ್ಛೆಯಿಂದ ಕೂಡಿದ್ದು ಅತಾರ್ಕಿಕತೆ ಹಾಗೂ ತಾರತಮ್ಯದಿಂದ ಕೂಡಿರುವಂತಥದ್ದಾಗಿದೆ. ದಂಡನೀಯ ಕಾನೂನುಗಳ ಉಲ್ಲಂಘನೆಯಾಗಿದೆ.

  • ಪ್ರಾಯಕ್ಕೆ ಬಂದ ವ್ಯಕ್ತಿ ಜೈವಿಕವಾಗಿ ಸಂತಾನೋತ್ಪತ್ತಿಗೆ ಸಮರ್ಥಳಾಗಿರಬಹುದಾದರೂ ಆಕೆ ಮದುವೆಯಾಗುವುದಕ್ಕಾಗಲಿ ಮತ್ತು ದೈಹಿಕವಾಗಿ ಲೈಂಗಿಕವಾಗಿ ಪ್ರಬುದ್ಧಳಾಗಿರುತ್ತಾಳೆ ಎಂದಾಗಲಿ ಹೇಳಲಾಗದು. ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹಾಗೂ ಮಕ್ಕಳನ್ನು ಹೆರಲು ಪ್ರಬುದ್ಧಳಾಗಿರುತ್ತಾಳೆ ಎಂದು ಪರಿಗಣಿಸಲಾಗದು.

  • ಈ ಪದ್ದತಿಗೆ ಅನುಮತಿ ನೀಡುವುದು ಎಳೆಯ ಮುಸ್ಲಿಂ ಹುಡುಗಿಯರನ್ನು ಬಲವಂತದ ವಿವಾಹಕ್ಕೆ ಒತ್ತಾಯಿಸಿ, ಸಮ್ಮತಿಯ ಹೆಸರಿನಲ್ಲಿ ಪತಿಯ ಆಜ್ಞೆಯಂತೆ ಲೈಂಗಿಕ ದೌರ್ಜನ್ಯ ಕಿರುಕುಳ ಮತ್ತು ಶೋಷಣೆಗೆ ಒಳಪಡಿಸಿದಂತಾಗುತ್ತದೆ 

  • ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಕೂಡ 18 ವರ್ಷದೊಳಗಿನವರ ಲೈಂಗಿಕತೆಗೆ ಒಪ್ಪಿಗೆ ನೀಡುವುದಿಲ್ಲ. ಸಂಪ್ರದಾಯದ ಭಾಗವಾಗಿ ಬಾಲ್ಯ ವಿವಾಹ ನಡೆಸಿಕೊಂಡು ಬರಲಾಗಿದೆ ಎಂದ ಮಾತ್ರಕ್ಕೆ ಸಂಪ್ರದಾಯ ಸ್ವೀಕಾರಾರ್ಹವೆಂದಾಗಲಿ, ಪವಿತ್ರ ಎಂದಾಗಲಿ ಭಾವಿಸುವಂತಿಲ್ಲ.

  • ಎಲ್ಲಾ ಧರ್ಮಗಳ ವೈಯಕ್ತಿಕ ಕಾನೂನಿನ ಮೇಲೆ ಪೋಕ್ಸೊ, ಬಾಲ್ಯ ವಿವಾಹ ತಡೆ ಕಾಯಿದೆ, ಐಪಿಸಿ ನಿಯಮಾವಳಿಗಳನ್ನು ವಿಧಿಸಬೇಕು.