ಕೋವಿಡ್ ಸಾಂಕ್ರಾಮಿಕ ಮತ್ತು ಕೋವಿಡ್ ನಂತರ ಬ್ಲ್ಯಾಕ್ ಫಂಗಸ್ ಸೇರಿದಂತೆ ಇತರೆ ಕಾರಣಗಳಿಗೆ ಮೃತಪಟ್ಟವರ ಕುಟುಂಬದವರಿಗೆ ರೂ. 4 ಲಕ್ಷ ಕೃಪಾನುದಾನ ನೀಡುವುದರ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಕೃಪಾನುದಾನ ನೀಡುವಂತೆ ಕೋರಿರುವುದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಪರಿಗಣಿಸಿದೆಯೇ ಎಂಬುದನ್ನು ಕೇಂದ್ರ ಸರ್ಕಾರದಿಂದ ತಿಳಿಯಲು ಬಯಸಿರುವುದಾಗಿ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ ಆರ್ ಶಾ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ಹೇಳಿದ್ದು, ತೀರ್ಪು ಕಾಯ್ದಿರಿಸಿತು.
ವಿಪತ್ತಿನಿಂದ ಬಾದಿತರಾದವರಿಗೆ ಕನಿಷ್ಠ ಮಟ್ಟದ ಪರಿಹಾರ ಹಾಗೂ ಕೃಪಾನುದಾನ ನೀಡುವುದಕ್ಕೆ ಸಂಬಂಧಿಸಿದಂತೆ ಎನ್‌ಡಿಎಂಎ ಮಾರ್ಗಸೂಚಿ ಶಿಫಾರಸ್ಸು ಮಾಡಬೇಕು ಎಂದು ವಿಪತ್ತು ನಿರ್ವಹಣಾ ಕಾಯಿದೆ 2005ರ ಸೆಕ್ಷನ್ 12ರಲ್ಲಿ ವಿವರಿಸಲಾಗಿದೆ ಎಂದು ಅರ್ಜಿದಾರ ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ಮತ್ತು ರೀಪಕ್ ಕನ್ಸಾಲ್ ಉಲ್ಲೇಖಿಸಿದ್ದಾರೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎಸ್ ಬಿ ಉಪಾಧ್ಯಾಯ ಅವರು “ಸಾಂವಿಧಾನಿಕ ಕಟ್ಟುಪಾಡುಗಳಿಂದ ತಪ್ಪಿಸಿಕೊಳ್ಳಲು ಹಣಕಾಸಿನ ನಿರ್ಬಂಧಗಳನ್ನು ಬಳಸಲಾಗದು. ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಗೌರವಿಸಲಾಗುತ್ತದೆ. ಶಾಸನ ಅನುಮತಿಸಿದರೆ ಆರ್ಥಿಕ ನಿರ್ಬಂಧಗಳನ್ನು ಮುಂದು ಮಾಡಿ ಸಾಂವಿಧಾನಿಕ ಕಟ್ಟುಪಾಡುಗಳಿಂದ ತಪ್ಪಿಸಿಕೊಳ್ಳಲಾಗುತ್ತದೆಯೇ? ಸಾಂವಿಧಾನಿಕ ಕಟ್ಟುಪಾಡುಗಳನ್ನು ಜಾರಿಗೊಳಿಸುವಾಗ ಆರ್ಥಿಕ ನಿರ್ಬಂಧಗಳನ್ನು ಮುಂದು ಮಾಡಲಾಗದು ಎಂದು ಸ್ವರಾಜ್ ಅಭಿಯಾನ್ ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕೃಪಾನುದಾನ ಯೋಜನೆಯನ್ನು 2021ಕ್ಕೂ ವಿಸ್ತರಿಸಬೇಕು ಎಂದು ವಿಪತ್ತು ನಿರ್ವಹಣಾ ಕಾಯಿದೆಯಲ್ಲಿಯೇ ಹೇಳಲಾಗಿದೆ” ಎಂದು ಉಪಾಧ್ಯಾಯ ಹೇಳಿದರು.
ವೈದ್ಯರಿಗೆ ಜಾರಿಗೊಳಿಸಲಾಗಿರುವ ಯೋಜನೆಯನ್ನು ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸಲಾಗುವ ಶವಾಗಾರದಲ್ಲಿ ಕೆಲಸ ಮಾಡುವವರಿಗೂ ವಿಸ್ತರಿಸಬೇಕು ಎಂದು ಉಪಾಧ್ಯಾಯ ಕೋರಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರತಿ ದಶಕ ಅಥವಾ ಶತಮಾನಕ್ಕೊಮ್ಮೆ ಘಟಿಸುವ ಸಾಂಕ್ರಾಮಿಕಕ್ಕೆ ಸಂಬಂಧದ ಸಮಸ್ಯೆ ಪರಿಹಾರಕ್ಕೆ ವಿಮಾ ಯೋಜನೆ ಅತ್ಯುತ್ತಮ ವಿಧಾನ ಎಂದರು. ಇದಕ್ಕಾಗಿ ಅವರು ಹಣಕಾಸು ಆಯೋಗದ ಐದು ವರ್ಷದ ವರದಿಯನ್ನು ಉಲ್ಲೇಖಿಸಿದರು. “ಶಾಸನಬದ್ಧ ಕಟ್ಟುಪಾಡುಗಳನ್ನು ಹಣಕಾಸು ಆಯೋಗದ ಶಿಫಾರಸ್ಸುಗಳು ಮೀರಲಾಗದು. ಹಾಗೆಂದು ಸೆಕ್ಷನ್ 12 ಅನ್ನು ರದ್ದು ಮಾಡಲಾಗದು. ಆಯೋಗವು ಹಣಕಾಸು ಕಡಿತ ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಇದನ್ನು ಆಧರಿಸಿ ಅನುದಾನ ಹಂಚಿಕೆ ಮಾಡಲಾಗುತ್ತದೆ. ಅರ್ಜಿಗೆ ಸಹಮತ ದೊರೆತರೆ ಅನುದಾನದ ಹಂಚಿಕೆ ಬದಲಾಗಬೇಕು” ಎಂದರು.
ಈ ಸಂದರ್ಭದಲ್ಲಿ ನ್ಯಾ. ಶಾ ಅವರು “ಐದು ವರ್ಷಗಳಿಗೆ ಹಣಕಾಸು ಆಯೋಗದ ಶಿಫಾರಸ್ಸುಗಳು ಮತ್ತು ಸೆಕ್ಷನ್ 12 ಬೇರೆಬೇರೆಯೇ” ಎಂದು ಪ್ರಶ್ನಿಸಿದರು. ಅಲ್ಲದೇ, “ಪರಿಹಾರದ ಹಣ ನಿರ್ಧರಿಸಲು ಸಹಕಾರಿಯಾಗುವ ಎನ್‌ಡಿಎಂಎ (ಸೆಕ್ಷನ್ 12) ನಿರ್ಧಾರ ಎಲ್ಲಿ” ಎಂದು ಪೀಠ ಪ್ರಶ್ನಿಸಿತು.
ಕೆಲವು ಹೂಡಿಕೆದಾರರನ್ನು ಪ್ರತಿನಿಧಿಸುತ್ತಿರುವ ವಕೀಲ ಸುಮೀರ್ ಸೋಧಿ ಅವರು “ ಬಿಹಾರ ಸರ್ಕಾರವು ರೂ. 4 ಲಕ್ಷ ಪರಿಹಾರ ನೀಡುತ್ತಿದೆ. ಕೆಲವು ರಾಜ್ಯಗಳು ರೂ. 1 ಲಕ್ಷ ಪರಿಹಾರ ನೀಡುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಏಕೀಕೃತ ನೀತಿಯ ಅಗತ್ಯವಿದೆ” ಎಂದರು.
ಆಗ ಎಸ್‌ಜಿ ಮೆಹ್ತಾ ಅವರು “ಸರ್ಕಾರದ ಬಳಿ ಹಣ ಇಲ್ಲವೆಂದಲ್ಲ. ಸಮಗ್ರ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಹಣ ವಿನಿಯೋಗಿಸಲು ಉದ್ದೇಶಿಸಿದ್ದೇವೆ” ಎಂದರು.
ಅಂತಿಮವಾಗಿ ಪೀಠವು “ಮರಣ ಪ್ರಮಾಣ ಪತ್ರ ಪಡೆಯಲು ಸಾಕಷ್ಟು ಸಮಸ್ಯೆಯಾಗುತ್ತದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಪ್ರಕ್ರಿಯೆಯನ್ನು ಸರಳೀಕರಿಸಲಾಗುವುದಿಲ್ಲವೇ? ಕೋವಿಡ್‌ನಿಂದ ಮೃತಪಟ್ಟವರಿಗೆ ಈಗಾಗಲೇ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಅದರಲ್ಲಿ ಸಾವಿಗೆ ಕಾರಣ ಕೋವಿಡ್ ಎಂದು ಉಲ್ಲೇಖಿಸಲಾಗಿಲ್ಲ. ಇದಕ್ಕೆ ಪರಿಹಾರವೇನು? ಕೋವಿಡ್ ಪಾಸಿಟಿವ್ ಪ್ರಮಾಣ ಪತ್ರ ಹಾಜರುಪಡಿಸಿದರೆ ಅದನ್ನು ನೀಡಲಾಗುವುದಿಲ್ಲವೇ?” ಎಂದು ನ್ಯಾ. ಶಾ ಪ್ರಶ್ನಿಸಿದರು. ಮರಣ ಪ್ರಮಾಣ ಪತ್ರದ ವಿಚಾರವನ್ನು ಪರಿಶೀಲಿಸಲಾಗುವುದು ಎಂದು ಸರ್ಕಾರ ಪೀಠಕ್ಕೆ ತಿಳಿಸಿತು.