High Court of J&K and Ladakh, Jammu 
ಸುದ್ದಿಗಳು

ಬಹುತೇಕ ಅಸಮರ್ಥ ಅಧಿಕಾರಿಗಳಿಗೇ ಎನ್‌ಡಿಪಿಎಸ್‌ ಪ್ರಕರಣಗಳ ತನಿಖೆಯ ಹೊಣೆ: ಕಾಶ್ಮೀರ ಹೈಕೋರ್ಟ್ ಕಳವಳ

ಮಾದಕವಸ್ತು ಪ್ರಕರಣಗಳಲ್ಲಿ ತಳೆಯುವ ಅಲಕ್ಷ್ಯದ ಧೋರಣೆಯು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಜನಸಾಮಾನ್ಯರು ಇರಿಸಿರುವ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಮಾದಕ ವಸ್ತು ಮತ್ತು ಅಮಲು ಪದಾರ್ಥ ಕಾಯಿದೆ- 1985ಕ್ಕೆ (ಎನ್‌ಡಿಪಿಎಸ್‌ ಕಾಯಿದೆ) ಸಂಬಂಧಿಸಿದ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದ್ದರೂ ಬಹುತೇಕ ಸಂದರ್ಭಗಳಲ್ಲಿ ಅವುಗಳ ತನಿಖೆಯನ್ನು ಅಸಮರ್ಥ ಅಧಿಕಾರಿಗಳಿಗೆ ವಹಿಸಲಾಗುತ್ತಿದೆ ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದೆ [ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ಮತ್ತು ಫರ್ಮಾನ್‌ ಅಲಿ ಇನ್ನಿತರರ ನಡುವಣ ಪ್ರಕರಣ].

ಮಾದಕವಸ್ತು ಅಕ್ರಮ ಸಾಗಣೆ ಅಪರಾಧಗಳು ಹೆಚ್ಚುತ್ತಿದ್ದು ಜನರು ಅದರಲ್ಲಿಯೂ ಹದಿಹರೆಯದವರು ಮತ್ತು ವಿದ್ಯಾರ್ಥಿಗಳು ಗಂಭೀರ ಪ್ರಮಾಣದಲ್ಲಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಕುಮಾರ್ ಮತ್ತು ಮೊಹಮ್ಮದ್ ಯೂಸುಫ್ ವನಿ ಅವರಿದ್ದ ಪೀಠ ತಿಳಿಸಿತು.

"ಪ್ರತಿದಿನ ಯುವಕರಿಂದ ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಕೇಳುತ್ತಿರುತ್ತೇವೆ. ಎನ್‌ಡಿಪಿಎಸ್‌ ಕಾಯಿದೆಯಡಿಯ ಅಪರಾಧಗಳಿಗೆ ಸಂಬಂಧಿಸಿದ ಬಹುತೇಕ ನೈಜ ಪ್ರಕರಣಗಳು ಮುಖ್ಯವಾಗಿ ಅಲಕ್ಷ್ಯ ನಿಷ್ಕಾಳಜಿ, ಅಸಮಂಜಸತೆ, ದೋಷಪೂರಿತ ಮತ್ತು ಅವೈಜ್ಞಾನಿಕ ತನಿಖೆಗಳ ಕಾರಣದಿಂದಾಗಿ ಖುಲಾಸೆಗೊಳ್ಳುತ್ತವೆ ಎಂಬುದು ಆಘಾತಕಾರಿ. ಎನ್‌ಡಿಪಿಎಸ್‌ ಕಾಯಿದೆಯಡಿಯ ಕಡ್ಡಾಯ ಸೆಕ್ಷನ್‌ಗಳನ್ನು ಅಲಕ್ಷ್ಯದಿಂದ ಉಲ್ಲಂಘಿಸುತ್ತಿರುವುದು ಕಂಡು ಬರುತ್ತಿದೆ. ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ ಅಲಕ್ಷ್ಯದ, ನಿಷ್ಕಾಳಜಿಯ ಹಾಗೂ ಅವೈಜ್ಞಾನಿಕ ತನಿಖೆ ಅನಗತ್ಯ" ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಅಬಕಾರಿ ಅಧಿಕಾರಿಗಳು, ಮಾದಕ ದ್ರವ್ಯ ತನಿಖಾ ಸಂಸ್ಥೆಗಳು, ಸುಂಕಾಧಿಕಾರಿಗಳು, ಕಂದಾಯ ಗುಪ್ತಚರ ಅಧಿಕಾರಿಗಳು ಮತ್ತು ಪೊಲೀಸ್‌ ಇಲಾಖೆಗಳು ಸಂದರ್ಭಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ ಮಾದಕ ದ್ರವ್ಯ ಪ್ರಕರಣಗಳನ್ನು ಅತ್ಯಂತ ಜವಾಬ್ದಾರಿ ಮತ್ತು ನ್ಯಾಯಯುತವಾಗಿ ತನಿಖೆ ಮಾಡಬೇಕು ಎಂಬ ನಿರೀಕ್ಷೆ ಇದ್ದರೂ ಇಂತಹ ಪ್ರಕರಣಗಳ ತನಿಖೆಯನ್ನು ಬಹುತೇಕ ಅಸಮರ್ಥ ಅಧಿಕಾರಿಗಳಿಗೆ ವಹಿಸಲಾಗುತ್ತಿದ್ದು ಅವರು ಆ ಪ್ರಕರಣಗಳನ್ನು ಅನಾಸ್ಥೆಯಿಂದ ನಿರ್ವಹಿಸುತ್ತಿದ್ದಾರೆ ಎಂದು ನ್ಯಾಯಾಲಯ ವಿಷಾದ ವ್ಯಕ್ತಪಡಿಸಿತು.

ಎನ್‌ಡಿಪಿಎಸ್‌ ಕಾಯಿದೆಯ ನೈಜ ಪ್ರಕರಣಗಳು ಮುಖ್ಯವಾಗಿ ಅಲಕ್ಷ್ಯ ನಿಷ್ಕಾಳಜಿ, ಅಸಮಂಜಸತೆ, ದೋಷಪೂರಿತ ಮತ್ತು ಅವೈಜ್ಞಾನಿಕ ತನಿಖೆಗಳ ಕಾರಣದಿಂದಾಗಿ ಖುಲಾಸೆಗೊಳ್ಳುತ್ತವೆ ಎಂಬುದು ಆಘಾತಕಾರಿ.
ಕಾಶ್ಮೀರ ಹೈಕೋರ್ಟ್

ಈಗಾಗಲೇ ಹಿರಿಯ ಅಧಿಕಾರಿಗಳು ತನಿಖೆ ಮುನ್ನಡೆಸಬೇಕು ಎಂದು ಕಾಯಿದೆ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023 (ಬಿಎನ್‌ಎಸ್‌ಎಸ್‌) ಹೇಳುತ್ತವೆ ಎಂದ ನ್ಯಾಯಾಲಯ ಈಗಾಗಲೇ ಈ ವಿಚಾರವಾಗಿ ತಾನು ನೀಡಿರುವ ನಿರ್ದೇಶನಗಳನ್ನು ಅಧಿಕಾರಿಗಳು ಪಾಲಿಸಬೇಕೆಂದು ತಿಳಿಸಿತು.

ಇದೇ ವೇಳೆ ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಚಾರಣಾ ವಿಧಾನ (ಎಸ್‌ಒಪಿ) ಕುರಿತು ಕಾಶ್ಮೀರ ಸರ್ಕಾರ 2017ರಲ್ಲಿ ಸುತ್ತೋಲೆ ಹೊರಡಿಸಿರುವುದಕ್ಕೆ ನ್ಯಾಯಾಲಯ ಮೆಚ್ಚುಗೆ ವ್ಯಕ್ತಪಡಿಸಿತು

ನೋವು ನಿವಾರಕವಾದ 10,000 ಮಾತ್ರೆಗಳನ್ನು (ಸ್ಪಾಸ್ಮೊ ಪ್ರಾಕ್ಸಿವಾನ್ ಗುಳಿಗೆಗಳು) ಅಕ್ರಮವಾಗಿ ಸಾಗಿಸಿದ್ದ ಇಬ್ಬರು ವ್ಯಕ್ತಿಗಳನ್ನು ಖುಲಾಸೆಗೊಳಿಸಿದ್ದ ಆದೇಶ ಎತ್ತಿ ಹಿಡಿದ ಪೀಠ ಈ ವಿಚಾರಗಳನ್ನು ತಿಳಿಸಿತು.