Sanjay Raut and Bombay High Court Facebook
ಸುದ್ದಿಗಳು

ಸಂಜಯ್‌ ರಾವುತ್ ಜಾಮೀನು ಅರ್ಜಿ ವಜಾ ಕೋರಿರುವ ಇ ಡಿ ಮನವಿಯ ವಿಶೇಷ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌

ಕರ್ತವ್ಯೇತರ ದಿನವಾದ ಶನಿವಾರ ನ್ಯಾ. ಎನ್‌ ಆರ್‌ ಬೋರ್ಕರ್‌ ಅವರು ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಎಎಸ್‌ಜಿ ಅನಿಲ್‌ ಸಿಂಗ್‌ ಅವರ ವಾದ ಆಲಿಸಿದರು. ರಾವುತ್ ಅವರಿಗೆ ಸೆಷನ್ಸ್‌ ನ್ಯಾಯಾಲಯ ಜಾಮೀನು ನೀಡಿರುವುದನ್ನು ಇ ಡಿ ಪ್ರಶ್ನಿಸಿದೆ.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆಯ ಸಂಸದ ಸಂಜಯ್‌ ರಾವುತ್ ಅವರಿಗೆ ಜಾಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ಅರ್ಜಿಯ ವಿಶೇಷ ವಿಚಾರಣೆಯನ್ನು ಶನಿವಾರ ಬಾಂಬೆ ಹೈಕೋರ್ಟ್‌ ನಡೆಸಿತು.

ವಿಚಾರಣಾಧೀನ ನ್ಯಾಯಾಲಯವು ರಾವುತ್ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌ ಆರ್‌ ಬೋರ್ಕರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಇ ಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ವಾದ ಮಂಡಿಸಿದರು.

ಮುಂಬೈನ ಉತ್ತರ ಉಪನಗರದಲ್ಲಿ ಪತ್ರಚಾಳ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ 2022ರ ಜುಲೈ 31ರಂದು ರಾವುತ್ ಅವರನ್ನು ಇ ಡಿ ಬಂಧಿಸಿತ್ತು. ಎಂಟು ದಿನ ನ್ಯಾಯಾಲಯವು ರಾವುತ್ ಅವರನ್ನು ಇ ಡಿ ವಶಕ್ಕೆ ನೀಡಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. 2022ರ ನವೆಂಬರ್‌ 9ರಂದು ವಿಶೇಷ ನ್ಯಾಯಾಲಯವು ರಾವುತ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.  ಇದನ್ನು ಪ್ರಶ್ನಿಸಿ ಇ ಡಿ ಅರ್ಜಿ ಸಲ್ಲಿಸಿದೆ.

“ನ್ಯಾಯಾಧೀಶರು ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ, ಅಕ್ರಮ ಹಣ ವರ್ಗಾವಣೆಯ ವಿಧೇಯ ಅಪರಾಧದ ಕುರಿತು ನಿರ್ಣಯಿಸಿದ್ದಾರೆ. ಯಾರೂ ವಾದಿಸದಿದ್ದರೂ ಪೀಠವು ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅವು ಅನಗತ್ಯವಾಗಿವೆ. ಅಕ್ರಮ ಹಣ ವರ್ಗಾವಣೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪಿಎಂಎಲ್‌ಎ ಜಾರಿಗೊಳಿಸಲಾಗಿದೆ. ಇದು ಕೊಲೆಗಿಂತಲೂ ಗಂಭೀರ ಅಪರಾಧವಾಗಿದ್ದು, ಕಠಿಣ ಕ್ರಮಕೈಗೊಳ್ಳಲು ಅವಕಾಶ ನೀಡಲಾಗಿದೆ” ಎಂದು ವಿಜಯ್‌ ಚೌಧರಿ ತೀರ್ಪು ಉಲ್ಲೇಖಿಸಿ ಹೇಳಿದರು. ವಿಶೇಷ ನ್ಯಾಯಾಲಯವು ನೀಡಿರುವ ತೀರ್ಪು ವೈರುಧ್ಯಾತ್ಮಕವೆಂದು ನಿರೂಪಿಸಲು ಈ ಹಿಂದೆ ಜಾಮೀನು ರದ್ದುಪಡಿಸಿರುವ ತೀರ್ಪುಗಳನ್ನು ತೋರುವಂತೆ ನ್ಯಾಯಾಲಯವು ಇ ಡಿಗೆ ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಲಾಗಿದೆ.