ಸುದ್ದಿಗಳು

ಎನ್‌ಟಿಎ ಅಧಿಕಾರಿಗಳೇ ನೀಟ್ ಪರೀಕ್ಷೆ ಒಎಂಆರ್ ಶೀಟ್ ತಿದ್ದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ದೂರು

ನೀಟ್ ಪ್ರವೇಶಾತಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಿಬಿಐ ಮತ್ತು ಇ ಡಿ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Bar & Bench

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಗೆ (ನೀಟ್‌ ಯುಜಿ 2024) ಸಂಬಂಧಿಸಿದ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್‌) ಶೀಟ್‌ಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿದ್ದಿದೆ ಎಂದು ದೂರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.  

ಆದರೆ ಅರ್ಜಿಯನ್ನು ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ ಪೀಠ ಹೈಕೋರ್ಟ್ ಮನವಿಯನ್ನು ಹಿಂಪಡೆದು ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ನೀಟ್‌ ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿತು.

ಒಎಂಆರ್ ಶೀಟ್‌ಗಳ ವಿನಿಮಯದಲ್ಲಿ ಎನ್‌ಟಿಎ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ನೀಟ್ ಪ್ರವೇಶಾತಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಿಬಿಐ ಮತ್ತು ಇ ಡಿ ತನಿಖೆ ನಡೆಸಬೇಕೆಂದು ಕೂಡ ಕೋರಲಾಗಿದೆ.

ಜುಲೈ 8 ರಂದು ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ನೀಟ್‌ ಸಂಬಂಧಿತ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ಎನ್‌ಟಿಎ ಸಲ್ಲಿಸಿದ ಅರ್ಜಿ ಸೇರಿದಂತೆ ವಿವಿಧ ಅರ್ಜಿಗಳ ಜೊತೆಗೆ ಈ ಮನವಿಯನ್ನು ನ್ಯಾಯಾಲಯ ಆಲಿಸಲಿದೆ.

ಜೂನ್ 20 ರಂದು, ನ್ಯಾಯಾಲಯ ಪ್ರಕರಣಗಳ ವರ್ಗಾವಣೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿತ್ತು. ಜೊತೆಗೆ ವಿವಿಧ ಹೈಕೋರ್ಟ್‌ಗಳಲ್ಲಿ ನೀಟ್‌ ಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ವಿಚಾರಣೆಗೆ ತಡೆ ನೀಡಿತ್ತು. ನಂತರ ಸಂಬಂಧಿತ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.  

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಎನ್‌ಟಿಎ ಪ್ರತಿಕ್ರಿಯೆ ನೀಡುವಂತೆ ಜೂನ್ 11ರಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಆದರೆ ಕೌನ್ಸೆಲಿಂಗ್‌ಗೆ ತಡೆ ನೀಡುವುದಿಲ್ಲ ಎಂದು ಅದು ಹೇಳಿತ್ತು.

ಅನೇಕ ಅಭ್ಯರ್ಥಿಗಳು ಅನುಮಾನಾಸ್ಪದವಾಗಿ ನೂರಕ್ಕೆ ನೂರರಷ್ಟು ಅಂಕ ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ ಸಮಯಾವಕಾಶದ ಸಂಬಂಧ ನೀಡಲಾದ ಕೃಪಾಂಕ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದರು.

ಪ್ರಮುಖವಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ನೀಟ್‌ ಯುಜಿ 2024ರ ಫಲಿತಾಂಶಗಳ ಪ್ರಕಟಣೆಗೆ ತಡೆ ನೀಡಲು ಮೇ 17ರಂದು ನಿರಾಕರಿಸಿತ್ತು.