ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಪರಿಚಯಿಸಿದ ನಂತರ ತಮಿಳುನಾಡಿನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿರುವುದು ಚಿಂತೆಗೀಡು ಮಾಡುವ ವಿಷಯವಾಗಿದ್ದು, ಈ ಸಮಸ್ಯೆಯ ಬೇರುಗಳನ್ನು ಅಧ್ಯಯನ ಮಾಡುವ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ ಎಂದು ಮದ್ರಾಸ್ ಹೈಕೋರ್ಟ್ ಮುಂದೆ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) - ಸಿಪಿಐ(ಎಂ) ಹೇಳಿಕೆ ಸಲ್ಲಿಸಿದೆ.
ಮುಂದುವರೆದು, ನೀಟ್ ಅನ್ನು ಪರಿಚಯಿಸಿದ ನಂತರ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳನ್ನು ಪಡೆಯುವ ಸರ್ಕಾರಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದೂ ಸಿಪಿಐ(ಎಂ) ಹೇಳಿದೆ.
ನೀಟ್ ಪರಿಚಯಿಸುವುದಕ್ಕೂ ಮುನ್ನ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದ ವಿದ್ಯಾರ್ಥಿಗಳಲ್ಲಿ ಶೇ.90 ಮಂದಿ ರಾಜ್ಯ ಪಠ್ಯಕ್ರಮವನ್ನು ಬೋಧಿಸುತ್ತಿದ್ದ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಅಥವಾ ಕಡಿಮೆ ವೆಚ್ಚದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಾಗಿರುತ್ತಿದ್ದರು. ಆದರೆ, ನೀಟ್ ಪರೀಕ್ಷೆಯನ್ನು ಪರಿಚಯಿಸಿದ ನಂತರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯುವ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ 2017ರಲ್ಲಿ 5, 2018ರಲ್ಲಿ 7 ಹಾಗೂ 2019ರಲ್ಲಿ ಶೂನ್ಯಕ್ಕೆ ಇಳಿದಿದೆ ಎಂದು ಸಿಪಿಐ (ಎಂ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆಡಳಿತಾರೂಢ ಡಿಎಂಕೆ ಸರ್ಕಾರವು ಸಾಮಾಜಿಕವಾಗಿ ವಂಚಿತರಾಗಿರುವ ವಿದ್ಯಾರ್ಥಿಗಳ ಮೇಲೆ ನೀಟ್ ಪರೀಕ್ಷೆಯು ಬೀರಿರುವ ಪರಿಣಾಮವನ್ನು ಅಧ್ಯಯನ ಮಾಡಲು ಒಂಭತ್ತು ಸದಸ್ಯರ ಸಮಿತಿಯನ್ನು ರಚಿಸಿದ್ದನ್ನು ಪ್ರಶ್ನಿಸಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕರು ನಾಗರಾಜನ್ ಅವರು ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಮಧ್ಯಪ್ರವೇಶ ಕೋರಿ ಸಿಪಿಐ(ಎಂ) ಅರ್ಜಿ ಸಲ್ಲಿಸಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಬಾಲಕೃಷ್ಣನ್ ಅವರ ಮೂಲಕ ಸಿಪಿಐ(ಎಂ) ಸಲ್ಲಿಸಿರುವ ಅರ್ಜಿಯಲ್ಲಿ ಕರು ನಾಗರಾಜನ್ ಅವರ ಅರ್ಜಿಯು ಅಕಾಲಿಕವಾಗಿದ್ದು ವಜಾಗೊಳಿಸಲು ಯೋಗ್ಯವಾಗಿದೆ ಎನ್ನಲಾಗಿದೆ. ಈ ಕೆಳಗಿನ ಅಂಶಗಳನ್ನು ಅರ್ಜಿಯಲ್ಲಿ ದಾಖಲಿಸಲಾಗಿದೆ:
2017ರಲ್ಲಿ ನೀಟ್ ಪರೀಕ್ಷೆಯನ್ನು ಪರಿಚಯಿಸುವುದಕ್ಕೂ ಮುನ್ನ ತಮಿಳುನಾಡು ರಾಜ್ಯದಲ್ಲಿ 22 ವೈದ್ಯಕೀಯ ಕಾಲೇಜುಗಳಿದ್ದವು. ಇವುಗಳಲ್ಲಿ ಪ್ರವೇಶ ಪಡೆಯುತ್ತಿದ್ದ ಶೇ.90 ವಿದ್ಯಾರ್ಥಿಗಳು ರಾಜ್ಯ ಪಠ್ಯಕ್ರಮವನ್ನು ಬೋಧಿಸುವ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಕಡಿಮೆ ವೆಚ್ಚದ ಖಾಸಗಿ ಶಾಲೆಗಳಿಂದ ಬಂದ ವಿದ್ಯಾರ್ಥಿಗಳಾಗಿರುತ್ತಿದ್ದರು. 2016ರಲ್ಲಿ ತಮಿಳು ಮಾಧ್ಯಮ ಶಾಲೆಗಳಿಂದ ವೈದ್ಯಕೀಯ ಕೋರ್ಸ್‌ಗಳಿಗೆ ಸೇರಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 600 ಇತ್ತು. ಆದರೆ, ನೀಟ್ ಪರೀಕ್ಷೆಯನ್ನು ಪರಿಚಯಿಸಿದ ನಂತರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯುವ ಸರ್ಕಾರಿ ಶಾಲಾ ಮಕ್ಕಳ ಸಂಖ್ಯೆ 2017ರಲ್ಲಿ 5, 2018ರಲ್ಲಿ 7 ಹಾಗೂ 2019ರಲ್ಲಿ ಶೂನ್ಯಕ್ಕೆ ಇಳಿದಿದೆ.
ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳು ಸಹ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಆಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮೂರು ವರ್ಷದ ಹಿಂದೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಪ್ರಾಣತೆತ್ತ ಪ್ರತಿಭಾವಂತ ವಿದ್ಯಾರ್ಥಿನಿ ಅನಿತಾ ಅವರ ಉದಾಹರಣೆಯನ್ನು ಉಲ್ಲೇಖಿಸಲಾಗಿದೆ. ಮತ್ತೊಂದು ಉದಾಹರಣೆಯಲ್ಲಿ, 2018ರಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಮತ್ತೋರ್ವ ಪ್ರತಿಭಾವಂತ ವಿದ್ಯಾರ್ಥಿನಿ ಪ್ರದೀಪಾ ಅವರ ಬಗ್ಗೆ ಉಲ್ಲೇಖಿಸಲಾಗಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 2018-19ರಲ್ಲಿ ಕೈಗೊಂಡಿದ್ದ ಅಖಿಲ ಭಾರತೀಯ ಉನ್ನತ ಶಿಕ್ಷಣ ಸಮೀಕ್ಷೆಯಡಿ (ಎಐಎಸ್‌ಎಚ್‌ಇ) ತಮಿಳುನಾಡಿನಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗುವ ಪ್ರಮಾಣ ಶೇ.51.4 ಇದ್ದು ದೇಶದ ಸರಾಸರಿಯಾದ ಶೇ.27.1ಕ್ಕಿಂತ ಸಾಕಷ್ಟು ಹೆಚ್ಚು. ಉನ್ನತ ಶಿಕ್ಷಣ ಪಡೆಯಲು ದಾಖಲಾಗುವ ವಿದ್ಯಾರ್ಥಿನಿಯರ ಪ್ರಮಾಣ ಶೇ.48.3, ಪರಿಶಿಷ್ಟ ಜಾತಿಯಲ್ಲಿ ಈ ಪ್ರಮಾಣ ಶೇ.41.6 ಹಾಗೂ ಪರಿಶಿಷ್ಟ ಪಂಗಡದಲ್ಲಿ ಇದೇ ಪ್ರಮಾಣ ಶೇ.37.8 ಆಗಿದೆ. ಪರಿಸ್ಥಿತಿ ಹೀಗಿರುವಾಗ, ಇದ್ದಕ್ಕಿದ್ದಂತೆ ತಮಿಳುನಾಡು ವಿದ್ಯಾರ್ಥಿಗಳ ಸಂಖ್ಯೆ ಉನ್ನತ ಶಿಕ್ಷಣದಲ್ಲಿ ಇಳಿಕೆಯಾಗುವುದು ಗಂಭೀರ ಚಿಂತೆಯ ವಿಷಯವಾಗಿದೆ. ಉನ್ನತ ಶಿಕ್ಷಣದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯವಾಗಿರುವ ತಮಿಳುನಾಡಿನಲ್ಲಿ ಈ ಪರಿಸ್ಥಿತಿ ಉದ್ಭವಿಸಿರುವುದರಿಂದ ಈ ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚುವ ಹಾಗೂ ಅದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.