ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ) ಮತ್ತು ಜಂಟಿ ಪ್ರವೇಶ ಪರೀಕ್ಷೆಗಳನ್ನು (ಜೆಇಇ) ಮುಂದೂಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಈ ಸಂಬಂಧ ಬಾರ್ ಅಂಡ್ ಬೆಂಚ್ ಗೆ ಪ್ರತಿಕ್ರಿಯಿಸಿರುವ ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ ಅವರು ಹೀಗೆ ಹೇಳಿದರು:
“ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶವನ್ನು ನೀಡಿದ್ದು, ಎನ್ಇಇಟಿ 2020 ಪರೀಕ್ಷೆಗಳನ್ನು ಮುಂದೂಡಲಾಗುವುದಿಲ್ಲ,”ಅಮಿತ್ ಖರೆ, ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ
ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಕೋವಿಡ್ ಸಾಂಕ್ರಾಮಿಕತೆಯ ನಡುವೆಯೇ ನಡೆಸಲು ಉದ್ದೇಶಿಸಲಾಗಿರುವ ಎನ್‌ಇಇಟಿ (ನೀಟ್) ಹಾಗೂ ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಆಗಸ್ಟ್ 17ರ ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್, “ನೀಟ್ ಯುಜಿ-2020 ಹಾಗೂ ಜೆಇಇ (ಮುಖ್ಯ ಪರೀಕ್ಷೆ) ಏಪ್ರಿಲ್, 2020 ಪರೀಕ್ಷೆಗಳ ಮುಂದೂಡಿಕೆಗೆ ಸಲ್ಲಿಸಿರುವ ಮನವಿಯಲ್ಲಿ ಯಾವುದೇ ಸಮರ್ಥನೆಯನ್ನು ಕಾಣುತ್ತಿಲ್ಲ,” ಎಂದು ಹೇಳಿತ್ತು.
ಮುಂದುವರೆದು, “ನಮ್ಮ ಅಭಿಪ್ರಾಯದಲ್ಲಿ, ಸಾಂಕ್ರಾಮಿಕತೆ ಪರಿಸ್ಥಿತಿಯ ಹೊರತಾಗಿಯೂ ಜೀವನವು ಮುಂದುವರಿಯಲೇ ಬೇಕಿದೆ. ವಿದ್ಯಾರ್ಥಿಗಳ ವೃತ್ತಿಜೀವನವನ್ನು ದೀರ್ಘಕಾಲ ಅಪಾಯದಲ್ಲಿರಿಸಲು ಸಾಧ್ಯವಿಲ್ಲ, ಒಂದು ಪೂರ್ಣ ಶೈಕ್ಷಣಿಕ ವರ್ಷವನ್ನು ನಷ್ಟ ಮಾಡಲಾಗದು,” ಎಂದು ಅಭಿಪ್ರಾಯಪಟ್ಟಿತ್ತು.
ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದ್ವಿತೀಯ ಮರುಪರಿಶೀಲನಾ ಅರ್ಜಿಯ ಕುರಿತಾಗಿ ನ್ಯಾಯಾಲಯವು ಹೀಗೆ ಹೇಳಿತು:
W. P. (C) No. 812, 2020 ಅರ್ಜಿ ವಜಾಗೊಳಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಲ್ಲಾ ಮುಂಜಾಗ್ರತಾ ಕ್ರಮಕೈಗೊಳ್ಳುವ ಮೂಲಕ ಪರೀಕ್ಷೆ ನಡೆಸಲಾಗುವುದು ಮತ್ತು ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ರಿಟ್ ಅರ್ಜಿಗೆ ಯಾವುದೇ ಮಾನ್ಯತೆ ಇರುವುದಿಲ್ಲ”.ಸುಪ್ರೀಂ ಕೋರ್ಟ್
ಪರೀಕ್ಷೆಗಳನ್ನು ಮತ್ತೆ ಮುಂದೂಡಿದರೆ ವಿದ್ಯಾರ್ಥಿಗಳ ಒತ್ತಡ ಮತ್ತಷ್ಟು ದ್ವಿಗುಣವಾಗಲಿದೆ. ಅಲ್ಲದೇ ತಮ್ಮ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ಆಘಾತಕ್ಕೊಳಗಾಗುವ ಸಾಧ್ಯತೆಯೂ ಇದೆ ಎಂದು ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಇದೇ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ನೀಟ್ ಮತ್ತು ಜೆಇಇ (ಮುಖ್ಯ) ಪರೀಕ್ಷೆಗಳನ್ನು ರದ್ದುಪಡಿಸಬೇಕು. ದೇಶಾದ್ಯಂತ ನೀಟ್ ಮತ್ತು ಜೆಇಇ ಪರೀಕ್ಷೆ ಕೇಂದ್ರಗಳನ್ನು ಹೆಚ್ಚಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರ ಇರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ಅನ್ನು ಕೋರಿದ್ದರು.
ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಿರುವ ನಡುವೆಯೇ ಕೋವಿಡ್ ಪ್ರಕರಣಗಳು ವ್ಯಾಪಕವಾಗುತ್ತಿರುವುದರ ಬಗ್ಗೆ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.
ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಮುಖಂಡ ಸುಬ್ರಮಣ್ಯಂ ಸ್ವಾಮಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಪರೀಕ್ಷೆಗಳನ್ನು ದೀಪಾವಳಿಯವರೆಗೆ ಮುಂದೂಡುವಂತೆ ಕೋರಿದ್ದರ ನಡುವೆಯೂ ಪರೀಕ್ಷೆ ನಡೆಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.