NEET PAPER LEAK  
ಸುದ್ದಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಇಬ್ಬರು ಆರೋಪಿಗಳನ್ನು ಸಿಬಿಐ ವಶಕ್ಕೆ ನೀಡಿದ ಪಾಟ್ನಾ ನ್ಯಾಯಾಲಯ

ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಬಿಹಾರ, ಗುಜರಾತ್, ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ವರದಿಯಾದ ಆರು ಪ್ರತ್ಯೇಕ ಪ್ರಕರಣಗಳನ್ನು ಸಿಬಿಐ ಪ್ರಸ್ತುತ ತನಿಖೆ ನಡೆಸುತ್ತಿದೆ.

Bar & Bench

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಯ (ನೀಟ್‌) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಪಾಟ್ನಾದ ವಿಶೇಷ ನ್ಯಾಯಾಲಯವು ಬುಧವಾರ ಸಿಬಿಐ ವಶಕ್ಕೆ ನೀಡಿದೆ.

ಬಿಹಾರ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಯು) ನಡೆಸುತ್ತಿದ್ದ ತನಿಖೆಯನ್ನು ಇದೀಗ ಸಿಬಿಐ ವಹಿಸಿಕೊಂಡಿದ್ದು ಆರೋಪಿ ಬಲದೇವ್ ಕುಮಾರ್ ಮತ್ತು ಮುಖೇಶ್ ಕುಮಾರ್ ಅವರನ್ನು ತನ್ನ ವಶಕ್ಕೆ ಪಡೆದಿರುವುದು ವರದಿಯಾಗಿದೆ.

ಪಾಟ್ನಾದ ಹದಿಮೂರು ಆರೋಪಿಗಳು ಮತ್ತು ಜಾರ್ಖಂಡ್‌ನ ಐವರು ನ್ಯಾಯಾಂಗ ಬಂಧನದಲ್ಲಿದ್ದರು. ಸಿಬಿಐಗೆ ವರ್ಗಾಯಿಸುವ ಮೊದಲು ಪ್ರಕರಣದ ತನಿಖೆ ನಡೆಸುತ್ತಿದ್ದ ಇಒಯು ಅವರನ್ನು ಆರಂಭದಲ್ಲಿ ಬಂಧಿಸಿತ್ತು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಬಿಹಾರ, ಗುಜರಾತ್, ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ವರದಿಯಾದ ಆರು ಪ್ರತ್ಯೇಕ ಪ್ರಕರಣಗಳನ್ನು ಸಿಬಿಐ ಪ್ರಸ್ತುತ ತನಿಖೆ ನಡೆಸುತ್ತಿದೆ.

ಈ ವಾರದ ಆರಂಭದಲ್ಲಿ, ಇಒಯು ಎಫ್‌ಐಆರ್ ಅನ್ನು ಸಿಬಿಐಗೆ ಹಸ್ತಾಂತರಿಸಿತ್ತು,  ಬಳಿಕ ಸಿಬಿಐ ಪಾಟ್ನಾದ ವಿವಿಧ ಭಾಗಗಳಲ್ಲಿ ತನಿಖೆ ಆರಂಭಿಸಿತ್ತು.

ಸಂಸ್ಥೆಯು ಪ್ರಮುಖ ಶಂಕಿತ, ದಾನಾಪುರ ಟೌನ್ ಕೌನ್ಸಿಲ್‌ನ ಜೂನಿಯರ್ ಇಂಜಿನಿಯರ್ ಸಿಕಂದರ್ ಯಾದವೆಂದು ಅವರ ನಿವಾಸ ಮತ್ತು ಪಾಟ್ನಾದಲ್ಲಿನ ಸೊಸೈಟಿ ಮೇಲೆ ಸಿಬಿಐ ದಾಳಿ ನಡೆಸಿತ್ತು.

ಇತ್ತ ಮತ್ತೊಂದೆಡೆ, ಪರೀಕ್ಷೆಗೆ (ನೀಟ್‌ ಯುಜಿ 2024) ಸಂಬಂಧಿಸಿದ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್‌) ಶೀಟ್‌ಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿದ್ದಿದೆ ಎಂದು ದೂರಿದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ನೀಟ್‌ ಸಂಬಂಧಿತ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ಎನ್‌ಟಿಎ ಸಲ್ಲಿಸಿದ ಅರ್ಜಿ ಸೇರಿದಂತೆ ವಿವಿಧ ಅರ್ಜಿಗಳ ಜೊತೆಗೆ ಈ ಮನವಿಯನ್ನೂ ಸರ್ವೋಚ್ಚ ನ್ಯಾಯಾಲಯ ಆಲಿಸಲಿದೆ.

ಜೂನ್ 20ರಂದು, ನ್ಯಾಯಾಲಯ ಪ್ರಕರಣಗಳ ವರ್ಗಾವಣೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿತ್ತು.

ಜೂನ್ 4ರಂದು ಪ್ರಕಟವಾದ ಪರೀಕ್ಷೆ ಫಲಿತಾಂಶ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳು 720ಕ್ಕೆ 720ರಷ್ಟು ಸಂಪೂರ್ಣ ಅಂಕಗಳಿಸಿ ಮೊದಲ ರ‍್ಯಾಂಕ್ ಪಡೆದಿರುವುದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಮತ್ತೊಂದೆಡೆ ಸಮಯ ಪೋಲಾಗಿರುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ಕೂಡ ಅಭ್ಯರ್ಥಿಗಳು ಆರೋಪಿಸಿದ್ದರು.