<div class="paragraphs"><p>NEET PG 2021, Supreme Court</p></div>

NEET PG 2021, Supreme Court

 
ಸುದ್ದಿಗಳು

ನೀಟ್ ಸ್ನಾತಕೋತ್ತರ ಪ್ರಕರಣ: ನಾಳೆಯೇ ವಿಚಾರಣೆಗೆ ಕೇಂದ್ರದ ಮನವಿ, ನಿರ್ಧಾರ ಕೈಗೊಳ್ಳಲಿರುವ ಸಿಜೆಐ

Bar & Bench

ನೀಟ್‌ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತಾಪಿಸಿರುವ ಕೇಂದ್ರ ಸರ್ಕಾರ ಶೀಘ್ರವೇ ಪ್ರಕರಣದ ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಕೋರಿದೆ [ನೀಲ್ ಆರೆಲಿಯೊ ನ್ಯೂನ್ಸ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಪ್ರಕರಣವನ್ನು ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಎದುರು ಪ್ರಸ್ತಾಪಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ʼತುರ್ತುʼ ಇರುವುದರಿಂದ ನಾಳೆಯೇ ವಿಚಾರಣೆ ನಡೆಸಬೇಕು ಎಂದು ಕೋರಿದರು. "ಇದು ಇಡಬ್ಲ್ಯೂಎಸ್ ಮೀಸಲಾತಿಗೆ ಸಂಬಂಧಿಸಿದೆ. ಸ್ವಲ್ಪ ತುರ್ತು ಇದೆ. ದಯವಿಟ್ಟು ಇದನ್ನು ನಾಳೆ ಕೈಗೆತ್ತಿಕೊಳ್ಳಿ" ಎಂದು ಎಸ್‌ಜಿ ವಿನಂತಿಸಿದರು. ಆಗ ನ್ಯಾ. ಚಂದ್ರಚೂಡ್‌ ಅವರು ಸಿಜೆಐ ಎನ್‌ ವಿ ರಮಣ ಅವರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದರು. ನ್ಯಾ. ಸೂರ್ಯಕಾಂತ್ ಅವರು ಸಿಜೆಐ ಅವರಿರುವ ಪೀಠದಲ್ಲಿದ್ದು ನ್ಯಾ. ವಿಕ್ರಮ್ ನಾಥ್ ಮತ್ತೊಂದು ಪೀಠದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಅವರು ಪ್ರಕರಣ ಆಲಿಸಲು ವಿಶೇಷ ಪೀಠ ರಚಿಸಬಹುದೇ ಎನ್ನುವ ಸಾಧ್ಯತೆಯ ಬಗ್ಗೆ ಗಮನಿಸುವುದಾಗಿ ತಿಳಿಸಿದರು.

ಈ ಮೊದಲು ಪ್ರಕರಣದ ವಿಚಾರಣೆ ಜನವರಿ 6ಕ್ಕೆ ನಿಗದಿಯಾಗಿತ್ತು. ಆದರೆ ಪ್ರಕರಣ ಬಾಕಿ ಉಳಿದಿರುವುದರಿಂದಾಗಿ ನೀಟ್‌ ಪಿಜಿ ಕೋರ್ಸ್‌ಗಳ ಕೌನ್ಸೆಲಿಂಗ್‌ಗೆ ತಡೆ ಒಡ್ಡಲಾಗಿದ್ದು ಶೀಘ್ರ ವಿಚಾರಣೆ ಕೋರಿ ಸ್ಥಾನಿಕ ವೈದ್ಯರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಅಖಿಲ ಭಾರತ ಕೋಟಾ (ಎಐಕ್ಯೂ) ಸೀಟುಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) ಶೇ.10 ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನ್ಯಾಯಾಲಯದ ಮುಂದಿದೆ.