NEET SUPER SPECIALITY EXAMS 2021  
ಸುದ್ದಿಗಳು

[ನೀಟ್ ಪಿಜಿ ಪ್ರವೇಶಾತಿ] ಮುಂದಿನ ವರ್ಷ ಹೊಸ ಮಾದರಿ ಜಾರಿಗೊಳಿಸಿದರೆ ಸ್ವರ್ಗ ಬಿದ್ದುಹೋಗುತ್ತದೆಯೇ? ಕುಟುಕಿದ ಸುಪ್ರೀಂ

ಸೀಟುಗಳು ಭರ್ತಿಯಾಗದೆ ಉಳಿಯಬಾರದು ಎಂಬ ಕಾರಣಕ್ಕೆ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಆದರೆ ಅಂತಹ ಖಾಲಿ ಸೀಟುಗಳು ಹೆಚ್ಚಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಇರುವುದಾಗಿ ಹೇಳಿದೆ.

Bar & Bench

ನೀಟ್‌ ಪಿಜಿ ಸೂಪರ್ ಸ್ಪೆಷಾಲಿಟಿ 2021ರ ಪರೀಕ್ಷಾ ಮಾದರಿಯಲ್ಲಿನ ಹಠಾತ್‌ ಬದಲಾವಣೆ, ವೈದ್ಯಕೀಯ ಶಿಕ್ಷಣ ವ್ಯಾಪಾರ ಆಗಿರುವುದರ ಸಂಕೇತ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಖಾರವಾಗಿ ಪ್ರತಿಕ್ರಿಯಿಸಿದೆ (ಪ್ರತೀಕ್‌ ರಾಸ್ತೋಗಿ ಮತ್ತು ಎನ್‌ಬಿಇ ನಡುವಣ ಪ್ರಕರಣ).

ಮುಂದಿನ ವರ್ಷದಿಂದ ಅಧಿಕಾರಿಗಳು ಹೊಸ ಮಾದರಿ ಜಾರಿಗೊಳಿಸಿದರೆ ಸ್ವರ್ಗವೇನು ಬಿದ್ದುಹೋಗುತ್ತದೆಯೇ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಕುಟುಕಿತು.

"ನಿಮಗೆ ಅಧಿಕಾರವಿದೆ ಎಂದ ಮಾತ್ರಕ್ಕೆ ಅದನ್ನು (ಈ ರೀತಿ) ಹೀಗೆ ಬಳಸಬಹುದೇ? ಮುಂದಿನ ವರ್ಷದಿಂದ ಅದನ್ನು ಮಾಡಿದ್ದರೆ ಸ್ವರ್ಗವೇನು ಬಿದ್ದು ಹೋಗುತ್ತಿತ್ತೇ? ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಲು ಒಂದು ವರ್ಷ ಸಮಯ ನೀಡಿದರೆ ಏನಾಗುತ್ತದೆ. ಮಾದರಿ ಬದಲಿಸುವುದು ತಜ್ಞರ ವಿಷಯವ್ಯಾಪ್ತಿಗೆ ಬರುವಂಥದ್ದು, ಹಾಗಾಗಿ ಅದನ್ನು ತಜ್ಞರು ಮಾಡುವ ರೀತಿಯಲ್ಲಿ ಮಾಡಿ, ಈ ರೀತಿಯಲ್ಲಿ ಅಲ್ಲ. ಇಲ್ಲದೆ ಹೋದರೆ, ಇದು ವೈದ್ಯಕೀಯ ವೃತ್ತಿ ಮತ್ತು ವೈದ್ಯಕೀಯ ನಿಯಂತ್ರಣ ಕೂಡ ವ್ಯವಹಾರವಾಗಿದೆ ಎಂಬ ಸಂದೇಶ ರವಾನಿಸುತ್ತದೆ! ವಿವೇಕ ಮೇಲುಗೈ ಸಾಧಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅದು ಹೇಳಿದ್ದು ಇಲ್ಲದಿದ್ದರೆ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದೆ.

ಸೀಟುಗಳು ಭರ್ತಿಯಾಗದೆ ಉಳಿಯಬಾರದು ಎಂಬ ಕಾರಣಕ್ಕೆ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಆದರೆ ಅಂತಹ ಖಾಲಿ ಸೀಟುಗಳು ಹೆಚ್ಚಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಇರುವುದಾಗಿ ತಿಳಿಸಿದೆ.

ಪರೀಕ್ಷಾ ಮಾದರಿಯಲಿ ಕೊನೆಯ ಕ್ಷಣದ ದಿಢೀರ್‌ ಬದಲಾವಣೆಯನ್ನು ಪ್ರಶ್ನಿಸಿ ಸ್ನಾತಕೋತ್ತರ ಪದವಿಗೆ ಅರ್ಹರಾದ 41 ವೈದ್ಯರು ಸಲ್ಲಿಸಿದ್ದ ಮನವಿಯಲ್ಲಿ ಪರೀಕ್ಷಾ ಮಾದರಿಯನ್ನು ಸಾಮಾನ್ಯ ವೈದ್ಯಕೀಯಕ್ಕೆ ಸೇರಿದ ವೈದ್ಯಕೀಯ ಅಭ್ಯರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿದೆ ಎಂದು ದೂರಲಾಗಿತ್ತು. ಸೋಮವಾರ ಈ ಸಂಬಂಧ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದ ಕೇಂದ್ರ ಸರ್ಕಾರ ಸೀಟುಗಳು ಭರ್ತಿಯಾಗದೆ ಉಳಿಯಬಾರದು ಎಂಬ ಕಾರಣಕ್ಕೆ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

ವಿಚಾರಣೆ ನಾಳೆ ಮುಂದುವರಿಯಲಿದೆ.