<div class="paragraphs"><p>Justice DY Chandrachud, AS Bopanna and Supreme Court</p><p></p></div>

Justice DY Chandrachud, AS Bopanna and Supreme Court

 
ಸುದ್ದಿಗಳು

ನೀಟ್ ಪಿಜಿ ಪರೀಕ್ಷೆ: ಮೀಸಲಾತಿ ಅರ್ಹತೆಗೆ ವಿರುದ್ಧವಲ್ಲ ಎಂದ ಸುಪ್ರೀಂ, ಒಬಿಸಿ ಮೀಸಲಾತಿ ಎತ್ತಿಹಿಡಿದು ವಿವರವಾದ ಆದೇಶ

Bar & Bench

ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವುದು ಮೆರಿಟ್‌ಗೆ ವಿರುದ್ಧವಲ್ಲ ಬದಲಿಗೆ ವಿತರಣಾ ಪರಿಣಾಮವನ್ನು ಹೆಚ್ಚಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ತಿಳಿಸಿದೆ. ಆ ಮೂಲಕ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಅಖಿಲ ಭಾರತ ಕೋಟಾ (ಎಐಕ್ಯು) ಸೀಟುಗಳಡಿ ರಾಜ್ಯ ಸರ್ಕಾರದ ವೈದ್ಯಕೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿ ಒದಗಿಸುವುದನ್ನು ಎತ್ತಿ ಹಿಡಿದಿದೆ [ನೀಲ್ ಆರೆಲಿಯೊ ನ್ಯೂನ್ಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೆಲವು ವರ್ಗಗಳಿಗೆ ಒದಗಿರುವ ಆರ್ಥಿಕ ಸಾಮಾಜಿಕ ಪ್ರಯೋಜನವನ್ನು ಸ್ಪರ್ಧಾತ್ಮಕ ಪರೀಕ್ಷೆ ಪ್ರತಿಬಿಂಬಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ತಿಳಿಸಿತು.

ಸಂವಿಧಾನದ “15(4) ಮತ್ತು 15(5)ನೇ ವಿಧಿಗಳು ಮೂಲಭೂತ ಸಮಾನತೆಯ ಅಂಶಗಳಾಗಿವೆ. ಕೆಲವು ವರ್ಗಗಳಿಗೆ ಇರುವ ಆರ್ಥಿಕ ಸಾಮಾಜಿಕ ಅನುಕೂಲಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಪ್ರತಿಬಿಂಬಿಸುತ್ತಿಲ್ಲ. ಮೆರಿಟ್‌ ಎಂಬುದು ಸಾಮಾಜಿಕವಾಗಿ ಸಂದರ್ಭೋಚಿತವಾಗಿರಬೇಕಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವುದು ಅರ್ಹತೆಗೆ (ಮೆರಿಟ್‌) ವಿರುದ್ಧವಲ್ಲ ಬದಲಿಗೆ ಅದರ ವಿತರಣಾ ಪರಿಣಾಮವನ್ನು ಹೆಚ್ಚಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಎಐಕ್ಯೂ ಸೀಟುಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಈ ಹಿಂದೆ ಅದು ಅಖಿಲ ಭಾರತ ವೈದ್ಯಕೀಯ ಕೋಟಾದಲ್ಲಿ ಒಬಿಸಿ ಮೀಸಲಾತಿ ಒದಗಿಸಿರುವುದನ್ನು ಎತ್ತಿಹಿಡಿದಿರುವ ಬಗ್ಗೆ ಚುಟುಕು ಆದೇಶವನ್ನು ನೀಡಿತ್ತು. ಆದರೆ ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿವರಣೆಯನ್ನು ನೀಡಿರಲಿಲ್ಲ. ಇಂದು ಈ ಬಗ್ಗೆ ವಿವರವಾದ ಆದೇಶವನ್ನು ನ್ಯಾಯಾಲಯ ನೀಡಿತು.

ರಾಜ್ಯಗಳು ನಡೆಸುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳನ್ನು ಹಂಚಿಕೆ ಮಾಡಲು ಎಐಕ್ಯೂ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೋರ್ಟ್ ಇಂದಿನ ಆದೇಶದಲ್ಲಿ ಹೇಳಿದೆ.

"ಎಐಕ್ಯೂ ಸೀಟುಗಳಲ್ಲಿ ಮೀಸಲಾತಿ ನೀಡುವ ಮೊದಲು ಕೇಂದ್ರವು ಈ ನ್ಯಾಯಾಲಯದ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ . ಆದ್ದರಿಂದ ಅವರ ನಿರ್ಧಾರ ಸರಿಯಾಗಿದೆ. ಎಐಕ್ಯೂನಲ್ಲಿ ಒಬಿಸಿಗಾಗಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ನೀಡುವ ಮೀಸಲಾತಿಯು ಸಾಂವಿಧಾನಿಕವಾಗಿ ಮಾನ್ಯವಾಗಿದೆ" ಎಂದು ಅದು ಹೇಳಿದೆ. ಆದರೆ ಇಡಬ್ಲ್ಯೂಎಸ್‌ ಕೋಟಾ ನಿರ್ಧರಿಸುವ ಮಾನದಂಡಗಳ ಸಿಂಧುತ್ವ ಕುರಿಂತೆ ಈ ವರ್ಷ ಮಾರ್ಚ್‌ನಲ್ಲಿ ವಿಸ್ತೃತ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಇಡಬ್ಲ್ಯೂಎಸ್‌ನ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಾದ ಎಐಕ್ಯೂನಲ್ಲಿ ಅದರ ಪಾಲಿನ ವಿಚಾರವಾಗಿ ಮಾತ್ರವಲ್ಲದೆ ಅದಕ್ಕೆ ಆಧರಿಸಿರುವ ಮಾನದಂಡಗಳ ಬಗ್ಗೆಯೂ ಇದೆ. ಆದ್ದರಿಂದ ಇದನ್ನು ವಿವರವಾಗಿ ಆಲಿಸಬೇಕಿದೆ” ಎಂದು ಪೀಠ ತಿಳಿಸಿದೆ.

ಈ ಮಧ್ಯೆ 2021ನೇ ಸಾಲಿನ ನೀಟ್‌ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಯು ಒಬಿಸಿಗಳಿಗೆ ಶೇ 27ರಷ್ಟು ಹಾಗೂ ಇಡಬ್ಲ್ಯೂಎಸ್‌ಗೆ ಶೇ 10ರಷ್ಟು ಎಂಬ ಈಗಿನ ಮೀಸಲಾತಿ ಪ್ರಕಾರ ನಡೆಯಲಿದೆ.