Supreme Court, NEET 2024  
ಸುದ್ದಿಗಳು

ನೀಟ್‌ ವಿವಾದ: ಕೃಪಾಂಕ ರದ್ದು, ಕಡಿಮೆ ಸಮಯಾವಕಾಶ ಸಿಕ್ಕವರಿಗೆ ಮರುಪರೀಕ್ಷೆ ಎಂದು ಸುಪ್ರೀಂಗೆ ಕೇಂದ್ರದ ವಿವರಣೆ

ವಿದ್ಯಾರ್ಥಿಗಳು ಮರುಪರೀಕ್ಷೆ ಬಯಸದಿದ್ದರೆ, ಅವರ ಮೂಲ ಅಂಕಗಳು ಹಾಗೆಯೇ ಉಳಿಯುತ್ತವೆ ಆದರೆ ಸಮಯದ ನಷ್ಟವಾದ ಕಾರಣಕ್ಕೆ ಈ ಹಿಂದೆ ನೀಡಲಾದ ಕೃಪಾಂಕ ಗಣನೆಗೆ ಬರುವುದಿಲ್ಲ ಎಂದು ಮಾಹಿತಿ.

Bar & Bench

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆ (ನೀಟ್‌ ಯುಜಿ 2024) ಬರೆಯಲು ಕಡಿಮೆ ಕಾಲಾವಕಾಶ ದೊರೆತಿದ್ದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯುವ ಇಲ್ಲವೇ ಸಮಯದ ನಷ್ಟ ಅನುಭವಿಸಿದ್ದಕ್ಕಾಗಿ ಈ ಹಿಂದೆ ನೀಡಲಾಗಿದ್ದ ಕೃಪಾಂಕ ತ್ಯಜಿಸುವ ಆಯ್ಕೆ ಇದೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಅಸಮರ್ಪಕವಾಗಿ ನಡೆದ ಪರೀಕ್ಷೆ, ವಂಚನೆ, ಅಕ್ರಮ ಹಾಗೂ ಮನಸೋಇಚ್ಚೆಯಿಂದ ಕೃಪಾಂಕ ನೀಡಿದ್ದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರ ಸಂಖ್ಯೆ ಆಘಾತಕರ ರೀತಿಯಲ್ಲಿ ಹೆಚ್ಚಳವಾಯಿತು ಎಂಬ ವಿವಾದದ ಮಧ್ಯೆ ಈ ಬೆಳವಣಿಗೆ ನಡೆದಿದೆ. 

ಪರೀಕ್ಷೆ ಬರೆಯಲು ಕಡಿಮೆ ಕಾಲಾವಕಾಶ ದೊರೆತ ಎಲ್ಲಾ 1,563 ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಅವರು ಮರುಪರೀಕ್ಷೆ ತೆಗೆದುಕೊಂಡರೆ ಈ ಹಿಂದೆ ಅವರು ಪಡೆದ ಅಂಕ ರದ್ದಾಗುತ್ತದೆ, ಬದಲಿಗೆ ಮರುಪರೀಕ್ಷೆಯ ಅಂಕಗಳು ಅವರಿಗೆ ದೊರೆಯಲಿವೆ ಎಂದು ಇಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.

ನಿನ್ನೆ (ಜೂನ್ 12) ನಡೆದ ಸಮಿತಿ ಸಭೆಯ ನಂತರ ಈ ಸಲಹೆ ದೊರೆತಿದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ತಿಳಿಸಲಾಯಿತು. ಇದನ್ನು ನ್ಯಾಯಾಲಯದ ಆದೇಶದಲ್ಲಿ ದಾಖಲಿಸಲಾಗಿದೆ.

ಜೂನ್ 23 ರಂದು ಮರು ಪರೀಕ್ಷೆ ನಡೆಸಿ ಫಲಿತಾಂಶಗಳನ್ನು ಜೂನ್ 30ರೊಳಗೆ ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿದೆ. ನಂತರ ಜುಲೈ 6ರಿಂದ ವೈದ್ಯಕೀಯ ಕಾಲೇಜು ಕೌನ್ಸೆಲಿಂಗ್ ಆರಂಭವಾಗಲಿದೆ.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲೆ ಕನು ಅಗರವಾಲ್ ಅವರು, ವಿದ್ಯಾರ್ಥಿಗಳ ಭಯ ಹೋಗಲಾಡಿಸಲು ಸಮಯ ಪೋಲಾಗಿದ್ದಕ್ಕೆ ಕೃಪಾಂಕ ಪಡೆದವರಿಗೆ ಮರುಪರೀಕ್ಷೆ ನಡೆಸಲು ಜೂನ್ 12ರಂದು ಎನ್‌ಟಿಎ ಸಮಿತಿ ನಿರ್ಧರಿಸಿದೆ ಎಂದು ಹೇಳಿದರು.

ಈ ಮರುಪರೀಕ್ಷೆ ಆರು ಪರೀಕ್ಷಾ ಕೇಂದ್ರಗಳಲ್ಲಿ ಕಡಿಮೆ ಸಮಯಾವಕಾಶ ಪಡೆದು ಕೃಪಾಂಕಕ್ಕೆ ಭಾಜನರಾಗಿದ್ದ 1,563 ವಿದ್ಯಾರ್ಥಿಗಳನ್ನು ಒಳಗೊಳ್ಳುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಅರ್ಜಿದಾರ ಅಲಖ್ ಪಾಂಡೆ ಅವರ ಪರ ಹಾಜರಾದ ವಕೀಲ ಜೆ ಸಾಯಿ ಅವರು ಇದು ಕೆಲವೇ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಎರಡನೇ ಅವಕಾಶ ನೀಡಬಹುದು ಎಂಬ ಆತಂಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದ ಕೆಲವರಲ್ಲಿ ಇರಬಹುದು ಎಂದರು.

ಆದರೆ ಈಗಲೂ ನ್ಯಾಯಾಲಯ ಸಂಪರ್ಕಿಸದವರಿಗೆ ಪ್ರಕರಣದ ವ್ಯಾಪ್ತಿ ವಿಸ್ತರಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.