Supreme Court and NEET-UG 2024  
ಸುದ್ದಿಗಳು

ನೀಟ್: ಎಲ್ಲಾ ಅಭ್ಯರ್ಥಿಗಳ ಅಂಕ ಪ್ರಕಟಿಸಲು ಎನ್‌ಟಿಎಗೆ ಸುಪ್ರೀಂ ಆದೇಶ; ಮರುಪರೀಕ್ಷೆಯ ಅಗತ್ಯತೆ ಪ್ರಶ್ನಿಸಿದ ನ್ಯಾಯಾಲಯ

ದೊಡ್ಡ ಪ್ರಮಾಣದ ಗೌಪ್ಯತೆಯ ಉಲ್ಲಂಘನೆಯ ಪುರಾವೆಗಳಿಲ್ಲದ ಕಾರಣ ಪರೀಕ್ಷೆಯನ್ನು ರದ್ದುಗೊಳಿಸುವ ಅಥವಾ ಮರುಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಪ್ರತಿಪಾದಿಸಿದ್ದವು.

Bar & Bench

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪದವಿ ಪರೀಕ್ಷೆ (ನೀಟ್‌) ಬರೆದ ಎಲ್ಲಾ 23 ಲಕ್ಷ ಅಭ್ಯರ್ಥಿಗಳ ಅಂಕಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಆದೇಶಿಸಿದೆ.

ಅಭ್ಯರ್ಥಿಗಳ ಗುರುತನ್ನು ಬಹಿರಂಗಪಡಿಸದೆ ಅಂಕಗಳನ್ನು ಪ್ರಕಟಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.

ಪ್ರತಿ ಕೇಂದ್ರಕ್ಕೆ ಸಂಬಂಧಿಸಿದಂತೆ ಫಲಿತಾಂಶವನ್ನು ಘೋಷಿಸಬೇಕು. ಜುಲೈ 20 ರಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟವಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಪ್ರಸ್ತುತ ಸ್ಥಿತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೀಮಿತವಾಗಿ ನಡೆದಿರುವಂತೆ ತೋರುತ್ತಿದ್ದು ವ್ಯಾಪಕವಾಗಿ ನಡೆದಿಲ್ಲ. ಹೀಗಾಗಿ ಸೀಮಿತ ಸೋರಿಕೆ ಆಧರಿಸಿ ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆಗೆ ಆದೇಶಿಸಲು ಸಾಧ್ಯವೇ ಎನ್ನುವ ಅನುಮಾನ ವ್ಯಕ್ತಪಡಿಸಿತು.

ಸಾಕ್ಷ್ಯಾಧಾರಗಳು ಮತ್ತು ಘಟನೆಗಳ ಕ್ರಮಾವಳಿಯಂತೆ, ಸಾಮೂಹಿಕ ಸೋರಿಕೆ ಸಂಭವಿಸಿರುವುದು ಅಸಂಭವವಾಗಿದ್ದು ಸೋರಿಕೆ ಪಾಟ್ನಾ ಮತ್ತು ಹಜಾರಿಬಾಗ್ ನಗರಗಳಲ್ಲಿ ಮಾತ್ರ ನಡೆದಿರುವಂತೆ ತೋರುತ್ತಿದೆ ಎಂದಿತು.

ಜುಲೈ 8 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಮರುಪರೀಕ್ಷೆ ಅಗತ್ಯವಿದೆಯೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಪರೀಕ್ಷೆಯಲ್ಲಿ ಎಷ್ಟು ಪ್ರಮಾಣದ ಅಕ್ರಮ ನಡೆದಿದೆ ಎಂಬುದನ್ನು ನಿರ್ಧರಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

ಸೋರಿಕೆಯ ಪ್ರಮಾಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಅದು ಎನ್‌ಟಿಎ ಮತ್ತು ಕೇಂದ್ರ ಸರ್ಕಾರವನ್ನು ಕೇಳಿತ್ತು.

ನಂತರ ಎನ್‌ಟಿಎ ಮತ್ತು ಕೇಂದ್ರ ಸರ್ಕಾರ ಸೋರಿಕೆ ಸೀಮಿತವಾಗಿದ್ದು ಹೊಸದಾಗಿ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಅಫಿಡವಿಟ್‌  ಸಲ್ಲಿಸಿದ್ದವು. ಇದೇ ನಿಲುವನ್ನು ಇವೆರಡೂ ಇಂದು ಪುನರುಚ್ಚರಿಸಿದವು. ನ್ಯಾಯಾಲಯವು ಜುಲೈ 22ರ, ಸೋಮವಾರ ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.