Supreme Court and NEET-UG 2024 
ಸುದ್ದಿಗಳು

ನೀಟ್‌ ಪ್ರಕರಣ: ಬ್ಯಾಕಪ್ ಪ್ರಶ್ನೆ ಪತ್ರಿಕೆಗಳ ಬಳಕೆ; ವಿವರ ನೀಡುವಂತೆ ಕೇಂದ್ರ, ಎನ್‌ಟಿಎಗೆ ಸುಪ್ರೀಂ ತಾಕೀತು

Bar & Bench

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಗಾಗಿ (ನೀಟ್‌ 2024 ) ಬ್ಯಾಕಪ್‌ (ಪರ್ಯಾಯವಾಗಿ) ರೂಪದಲ್ಲಿ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಸಂಗ್ರಹಿಸಿಡಲಾಗಿದ್ದ  ಪ್ರಶ್ನೆ ಪತ್ರಿಕೆಗಳನ್ನು ಬಳಸಿರುವುದರ ಬಗ್ಗೆ ವಿವರ ನೀಡುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಒಂದು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (ಎಸ್‌ಬಿಐ) ಸಂಗ್ರಹಿಸಿಡಲಾಗಿದ್ದರೆ ಮತ್ತೊಂದು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಕೆನರಾ ಬ್ಯಾಂಕ್‌ನಲ್ಲಿ ಇರಿಸಿದ್ದ ಪ್ರಶ್ನೆಪತ್ರಿಕೆಗಳ ಸೆಟ್, ಬ್ಯಾಕಪ್ ಪ್ರಶ್ನೆ ಪತ್ರಿಕೆಯಾಗಿ ಇರಬೇಕಿತ್ತು.

ಎಸ್‌ಬಿಐ ಪ್ರಶ್ನೆಪತ್ರಿಕೆ ಸೆಟ್‌ನಲ್ಲಿ ಯಾವುದೇ ವ್ಯತ್ಯಾಸ ಅಥವಾ ಸೋರಿಕೆ ಉಂಟಾದರೆ ಅಂತಹ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಇರಿಸಲಾಗಿದ್ದ ಪ್ರಶ್ನೆಪತ್ರಿಕೆಗಳ ಸೆಟ್‌ ಬ್ಯಾಕಪ್ ಆಗಿ ಕಾರ್ಯ ನಿರ್ವಹಿಸಬೇಕಿತ್ತು. ಆದಾಗ್ಯೂ, ಕೆನರಾ ಬ್ಯಾಂಕ್‌ ಪ್ರಶ್ನೆಪತ್ರಿಕೆಗಳನ್ನೇ ಕೆಲ ಕೇಂದ್ರಗಳಲ್ಲಿ ನೀಡಲಾಗಿತ್ತು.  

ಈ ಬಗ್ಗೆ ವಿವರ ನೀಡುವಂತೆ ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ  ಸೂಚಿಸಿದೆ.

ಕೆನರಾ ಬ್ಯಾಂಕ್‌ನಲ್ಲಿರಿಸಿದ್ದ ಪತ್ರಿಕೆಗಳನ್ನು ಎಷ್ಟು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾಗಿದೆ ಎಂದು ನಮಗೆ ತಿಳಿಸಿ. ಆ ಕೇಂದ್ರಗಳಲ್ಲಿ ಸರಿಯಾದ ಪ್ರಶ್ನೆ ಪತ್ರಿಕೆಗಳನ್ನು ಬದಲಾಯಿಸಲಾಗಿತ್ತೆ ಎಂಬಂತಹ ವಿವಿಧ ಪ್ರಶ್ನೆಗಳನ್ನು ಸಿಜೆಐ ಕೇಳಿದ್ದಾರೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ನರೇಂದರ್ ಹೂಡಾ ಅವರು, ಜಜ್ಜರ್‌ನಲ್ಲಿರುವ ಶಾಲೆಯೊಂದರಲ್ಲಿ ಎಸ್‌ಬಿಐ ಸೆಟ್ ಬದಲಿಗೆ ಕೆನರಾ ಬ್ಯಾಂಕ್ ಸೆಟ್ ವಿತರಿಸಲಾಗಿತ್ತು ಎಂದು ಹೇಳಿದ್ದರು.

ಪ್ರಸಕ್ತ ಸಾಲಿನ ಪರೀಕ್ಷೆಗೆ ಸಂಬಂಧಿಸಿದಂತೆ ನಡೆದ ಸಾಮೂಹಿಕ ಪ್ರಶ್ನೆಪತ್ರಿಕೆ ಸೋರಿಕೆ, ವಿವಿಧ ಅಕ್ರಮಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ .

ಇಂದಿನ ವಿಚಾರಣೆ ವೇಳೆ ಕೂಡ ಕೆಲ ಅರ್ಜಿದಾರರು ಮರುಪರೀಕ್ಷೆಗೆ ಮನವಿ ಮಾಡಿದರು. ಆದರೆ ಕೇಂದ್ರ ಮತ್ತು ಎನ್‌ಟಿಎ ಇದಕ್ಕೆ ವಿರೋಧ ವ್ಯಕ್ತಪಡಿಸಿದವು. ಇಂದಿಗೆ ಅರ್ಜಿದಾರರ ವಾದಗಳು ಪೂರ್ಣಗೊಂಡಿದ್ದು ನಾಳೆಯಿಂದ ಎನ್‌ಟಿಎ ಮತ್ತು ಕೇಂದ್ರ ಸರ್ಕಾರ ವಾದ ಆರಂಭಿಸಲಿವೆ.