Supreme Court and NEET-UG 2024 
ಸುದ್ದಿಗಳು

ನೀಟ್‌ ಪದವಿ 2024: ಕೌನ್ಸೆಲಿಂಗ್‌ಗೆ ತಡೆ ನೀಡಲು ಮತ್ತೆ ಸುಪ್ರೀಂ ಕೋರ್ಟ್ ನಕಾರ

ಪ್ರಸಕ್ತ ಸಾಲಿನ ನೀಟ್‌ ಪರೀಕ್ಷೆ ರದ್ದುಗೊಳಿಸಿದರೆ ಕೌನ್ಸೆಲಿಂಗ್‌ ಕೂಡ ತನ್ನಿಂತಾನೇ ಇಲ್ಲವಾಗುತ್ತದೆ ಎಂದು ತಿಳಿಸಿದ ನ್ಯಾಯಾಲಯ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತು.

Bar & Bench

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆ ಮೂಲಕ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ಕೌನ್ಸೆಲಿಂಗ್‌ಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ. 

ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್  ಮತ್ತು  ಎಸ್‌ವಿಎನ್ ಭಟ್ಟಿ  ಅವರಿದ್ದ ರಜಾಕಾಲೀನ ಪೀಠ ಪ್ರಸಕ್ತ ಸಾಲಿನ ನೀಟ್‌ ಪರೀಕ್ಷೆ ರದ್ದುಗೊಳಿಸಿದರೆ ಕೌನ್ಸೆಲಿಂಗ್‌ ಕೂಡ ತನ್ನಿಂತಾನೇ ಇಲ್ಲವಾಗುತ್ತದೆ ಎಂದಿತು. 

ಮೇಘಾಲಯದ ಕೇಂದ್ರದಲ್ಲಿ 45 ನಿಮಿಷಗಳ ಕಾಲ ಪರೀಕ್ಷೆ ನಡೆಯಲಿಲ್ಲ ಎಂದು ದೂರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, “ಕೌನ್ಸೆಲಿಂಗ್‌ಗೆ ತಡೆ ನೀಡುವುದಿಲ್ಲ. ಅಂತಿಮ ವಿಚಾರಣೆ ಬಳಿಕ ಪರೀಕ್ಷೆ ರದ್ದಾದರೆ ಕೌನ್ಸೆಲಿಂಗ್‌ ಕೂಡ ಇಲ್ಲವಾಗುತ್ತದೆ" ಎಂದು ಹೇಳಿತು.

ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ನೀಟ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಲ್ಲಿಸಿದ ಅರ್ಜಿ ಸೇರಿದಂತೆ ಹಲವು ಹೊಸ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಇಂದು ಆರಂಭಿಸಿತು.  

ಮೇಘಾಲಯ ವಿದ್ಯಾರ್ಥಿಗಳ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯ ವಿವಿಧ ಹೈಕೋರ್ಟ್‌ಗಳಲ್ಲಿ ನೀಟ್‌ಗೆ ಸಂಬಂಧಿಸಿದ ವಿಚಾರಣೆಗೆ ತಡೆ ನೀಡಿ ಆ ಎಲ್ಲಾ ಪ್ರಕರಣಗಳನ್ನು ಈ ಪ್ರಕರಣದೊಂದಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿತು. ಜುಲೈ 8ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.

 ಜೂನ್ 11 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕುರಿತಂತೆ ಪ್ರತಿಕ್ರಿಯಿಸಲು ಎನ್‌ಟಿಎಗೆ ಆದೇಶಿಸಿತ್ತು. ಕೌನ್ಸೆಲಿಂಗ್‌ಗೆ ತಡೆ ನೀಡುವುದಿಲ್ಲ ಎಂದು ಆಗಲೂ ಕೂಡ ಅದು ತಿಳಿಸಿತ್ತು.

 ಜೂನ್ 4 ರಂದು ಪ್ರಕಟವಾದ ನೀಟ್‌ ಯುಜಿ ಪರೀಕ್ಷೆ ಫಲಿತಾಂಶ ವಿವಾದಕ್ಕೆ ಕಾರಣವಾಗಿದ್ದು 67 ವಿದ್ಯಾರ್ಥಿಗಳು 720ಕ್ಕೆ 720ರಷ್ಟು ಸಂಪೂರ್ಣ ಅಂಕಗಳಿಸಿ ಮೊದಲ ರ‍್ಯಾಂಕ್ ಪಡೆದಿರುವುದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಮತ್ತೊಂದೆಡೆ ಸಮಯ ಪೋಲಾಗಿರುವುದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ಕೂಡ ಅಭ್ಯರ್ಥಿಗಳು ಆರೋಪಿಸಿದ್ದರು.

ಪ್ರಮುಖವಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ನೀಟ್‌ ಯುಜಿ 2024ರ ಫಲಿತಾಂಶಗಳ ಪ್ರಕಟಣೆಗೆ ತಡೆ ನೀಡಲು ಮೇ 17ರಂದು ನಿರಾಕರಿಸಿತ್ತು.