ಸುದ್ದಿಗಳು

ಕೈ ಉಳುಕಿಗೆ ಚಿಕಿತ್ಸೆ ಪಡೆವಾಗ ಗಾಯ: ಜಿಂದಾಲ್‌ ಆಸ್ಪತ್ರೆ ಹಾಗೂ ಫಿಸಿಯೋಗೆ ₹10 ಸಾವಿರ ದಂಡ

Bar & Bench

ಕೈ ಉಳುಕಿಗೆ ಚಿಕಿತ್ಸೆ ಪಡೆಯುವಾಗ ಫಿಸಿಯೋಥೆರಪಿಸ್ಟ್ ನಿರ್ಲಕ್ಷ್ಯದಿಂದ ಎಲೆಕ್ಟ್ರಿಕ್‌ ಯಂತ್ರವು ಸುಟ್ಟಿದ್ದು, ತೋಳಿನ ಭಾಗದಲ್ಲಿ ಕಲೆ ಹಾಗೆ ಉಳಿದುಕೊಂಡಿದೆ ಎಂಬ ಹೊರ ರೋಗಿಯ ದೂರನ್ನು ಭಾಗಶಃ ಪರಿಗಣಿಸಿರುವ ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಈಚೆಗೆ ಜಿಂದಾಲ್‌ ಚಾರಿಟೆಬಲ್‌ ಆಸ್ಪತ್ರೆ ಮತ್ತು ಅಲ್ಲಿನ ಫಿಸಿಯೋಥೆರಪಿಸ್ಟ್‌ಗೆ ₹10 ಸಾವಿರ ದಂಡ ವಿಧಿಸಿದೆ.

ಬೆಂಗಳೂರಿನ ವಕೀಲ ಪಿ ಶಿವಣ್ಣ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಕೆ ಎಸ್‌ ಬಗಲಿ ಮತ್ತು ಸದಸ್ಯೆ ರೇಣುಕಾ ದೇಶಪಾಂಡೆ ಅವರು ರಾಜಾಜಿನಗರದಲ್ಲಿರುವ ಜಿಂದಾಲ್‌ ಚಾರಿಟಬಲ್‌ ಆಸ್ಪತ್ರೆ ಮತ್ತು ಫಿಸಿಯೋಥೆರಪಿಸ್ಟ್‌ ಮಲ್ಲೇಶ್‌ ಅವರಿಗೆ ದಂಡ ಹಾಕಿದೆ. ಅಲ್ಲದೇ, ದೂರುದಾರರಿಗೆ ವ್ಯಾಜ್ಯದ ವೆಚ್ಚವಾಗಿ ₹2 ಸಾವಿರ ಪಾವತಿಸಲು ಪ್ರತಿವಾದಿಗಳಿಗೆ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಎಡಗೈ ಉಳುಕಿ ಕೈ ಮಡಚಲು ಸಮಸ್ಯೆಯಾಗಿದ್ದರಿಂದ ಶಿವಣ್ಣ ಅವರು ಜಿಂದಾಲ್‌ ಚಾರಿಟಬಲ್‌ ಆಸ್ಪತ್ರೆಯಲ್ಲಿ 2020ರ ಫೆಬ್ರವರಿ 27, 28, 29 ಹಾಗೂ ಮಾರ್ಚ್‌ 2, 4, 5ರಂದು ಹೊರ ರೋಗಿಯಾಗಿ ಫಿಸಿಯೋಥೆರಪಿ ಮಾಡಿಸಿಕೊಂಡಿದ್ದರು. ಮಾರ್ಚ್‌ 5ರಂದು ಶಿವಣ್ಣ ಅವರ ಕೈ ಮೇಲೆ ಪ್ಯಾಡ್‌ ಇಟ್ಟು ಮಲ್ಲೇಶ್‌ ಅವರು ಎಲೆಕ್ಟ್ರಿಕ್‌ ಯಂತ್ರವನ್ನು ಆನ್‌ ಮಾಡಿದ್ದರು. ಪ್ಯಾಡ್‌ ಅನ್ನು ತೆಗೆಯಬಾರದು ಮತ್ತು ಅಲುಗಾಡಿಸಬಾರದು ಎಂದು ಶಿವಣ್ಣ ಅವರಿಗೆ ತಿಳಿಸಿ, ಮಲ್ಲೇಶ್‌ ಕೊಠಡಿಯಿಂದ ಹೊರಬಂದಿದ್ದರು. ಶಾಖ ಹೆಚ್ಚಾಗಿ ಶಿವಣ್ಣ ಅವರು ಕಿರುಚಲಾರಂಭಿಸಿದ್ದರು. ಇದನ್ನು ಕೇಳಿಕೊಂಡು ಹತ್ತಿರದಲ್ಲಿದ್ದ ನರ್ಸ್‌ ಎಲೆಕ್ಟ್ರಿಕ್‌ ಮಷೀನ್‌ ಸ್ವಿಚ್‌ ಬಂದ್‌ ಮಾಡಿದ್ದರು. ಇದನ್ನು ಮಲ್ಲೇಶ್‌ ಗಮನಕ್ಕೆ ತರಲಾಗಿತ್ತು. ಇದನ್ನು ಲಘುವಾಗಿ ಪರಿಗಣಿಸಿದ್ದ ಮಲ್ಲೇಶ್‌ ಅವರು ಏನೂ ಆಗುವುದಿಲ್ಲ ಎಂದು ಹೇಳಿದ್ದರು. ಆದರೆ, ಮಾರನೇಯ ದಿನ ಪ್ಯಾಡ್‌ ಇಟ್ಟಿದ್ದ ಕೈನ ಭಾಗದಲ್ಲಿ ದೊಡ್ಡ ಗುಳ್ಳೆಗಳು ಕಾಣಿಸಿಕೊಂಡಿದ್ದರಿಂದ ಶಿವಣ್ಣ ಅವರು ಮಲ್ಲೇಶ್‌ ಸಂಪರ್ಕ ಮಾಡಿದ್ದರು. ಮಲ್ಲೇಶ್‌ ಸೂಚನೆಯಂತೆ ನರ್ಸ್‌ ಅವರು ಗುಳ್ಳೆಗಳನ್ನು ಓಪನ್‌ ಮಾಡಿ, ಡ್ರೆಸ್‌ ಮಾಡಿದ್ದರು. ಇಷ್ಟಾದರೂ ಕೈ ನೋವು ಮತ್ತು ಗಾಯದಿಂದ ಶಿವಣ್ಣ ಅವರು ಗುಣಮುಖರಾಗಿರಲಿಲ್ಲ. ಆನಂತರ ಶಿವಣ್ಣ ಅವರು ಬೇರೊಬ್ಬ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು.

ಮಲ್ಲೇಶ್‌ ಅವರ ನಿರ್ಲಕ್ಷ್ಯದಿಂದ ಇಷ್ಟು ದಿನವಾದರೂ ತೋಳಿನ ಭಾಗದಲ್ಲಿ ಗಾಯದ ಗುರುತು ಹಾಗೆ ಉಳಿದಿದ್ದು, ಶಿವಣ್ಣ ಅವರು ನೋವಿನಿಂದ ಬಳಲುತ್ತಿದ್ದಾರೆ. ನೋಟಿಸ್‌ ನೀಡಿದರೂ ಪ್ರತಿವಾದಿಗಳಾದ ಮಲ್ಲೇಶ್‌ ಮತ್ತು ಜಿಂದಾಲ್‌ ಚಾರಿಟಬಲ್‌ ಆಸ್ಪತ್ರೆ ಪರಿಹಾರ ನೀಡಿರಲಿಲ್ಲ. ಪ್ರತಿವಾದಿಗಳ ಸೇವೆಯ ನ್ಯೂನತೆಯಿಂದ ಸಮಸ್ಯೆಗೆ ಸಿಲುಕಿದ್ದೇನೆ ಎಂದು ಶಿವಣ್ಣ ಅವರು ದೂರು ದಾಖಲಿಸಿ, ₹50 ಸಾವಿರ ಪರಿಹಾರ ಕೋರಿದ್ದರು.

ಜಿಂದಾಲ್‌ ಚಾರಿಟೆಬಲ್‌ ಆಸ್ಪತ್ರೆಯಾಗಿದ್ದು, ದೂರುದಾರರಿಗೆ ಯಾವುದೇ ಸೇವಾ ಶುಲ್ಕ ವಿಧಿಸಿಲ್ಲ. ಹೀಗಾಗಿ, ಮನವಿ ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಪ್ರತಿವಾದಿಗಳು ವಾದಿಸಿದ್ದರು. ಆದರೆ, ಪ್ರತಿಬಾರಿಯೂ ಫಿಸಿಯೋಥೆರಪಿ ಮಾಡಿಸಿಕೊಂಡಾಗ ಆಸ್ಪತ್ರೆಯು ₹80 ಅನ್ನು ಶಿವಣ್ಣ ಅವರಿಂದ ಶುಲ್ಕವನ್ನಾಗಿ ಪಡೆದಿದೆ. ಇದರರ್ಥ ಪ್ರತಿವಾದಿಗಳು ಉಚಿತ ಸೇವೆ ನೀಡಿಲ್ಲ. ₹80 ಅನ್ನು ದೇಣಿಗೆಯನ್ನಾಗಿ ಪಡೆಯಲಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳು ಇಲ್ಲ. ಇದರ ಅರ್ಥ, ದೂರುದಾರರು ಗ್ರಾಹಕರಾಗಿದ್ದು, ಪ್ರತಿವಾದಿ ಆಸ್ಪತ್ರೆಯು ಸೇವೆ ನೀಡಿರುವ ವಿಚಾರವು ಗ್ರಾಹಕರ ರಕ್ಷಣಾ ಕಾಯಿದೆ 2019ರ ಸೆಕ್ಷನ್‌ 2(42)ರ ವ್ಯಾಪ್ತಿಗೆ ಬರುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ಪ್ರತಿವಾದಿಗಳಿಗೆ ದಂಡ ವಿಧಿಸಿದೆ.

ಇನ್ನು, ದೂರುದಾರ ಶಿವಣ್ಣ ಅವರು ಜಿಂದಾಲ್‌ ಚಾರಿಟೆಬಲ್‌ ಆಸ್ಪತ್ರೆಯಲ್ಲಿನ ಸಮಸ್ಯೆಯ ಬಳಿಕ ಹೊರಗಡೆ ಚಿಕಿತ್ಸೆ ಪಡೆದಿರುವುದಕ್ಕೆ ಸೂಕ್ತವಾದ ದಾಖಲೆಗಳನ್ನು ಸಲ್ಲಿಸದಿರುವುದು ಮತ್ತು ಚಿಕಿತ್ಸೆ ಪಡೆಯುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿರುವುದನ್ನು ಪರಿಗಣಿಸಿರುವ ಆಯೋಗವು ದೂರುದಾರರು ಕೋರಿದ್ದಂತೆ ₹50 ಸಾವಿರ ಪರಿಹಾರ ನೀಡುವಂತೆ ಆದೇಶಿಸಿಲು ನಿರಾಕರಿಸಿದೆ.

P Shivanna V. Mallesh and other.pdf
Preview