Justice BV Nagarathna
Justice BV Nagarathna 
ಸುದ್ದಿಗಳು

ನ್ಯಾಯಾಂಗ, ಕಾರ್ಯಾಂಗ ಇಲ್ಲವೇ ಶಾಸಕಾಂಗಕ್ಕಿಂತಲೂ ಸಂವಿಧಾನವೇ ಸರ್ವಶ್ರೇಷ್ಠ: ನ್ಯಾ. ಬಿ.ವಿ.ನಾಗರತ್ನ

Bar & Bench

ನ್ಯಾಯಾಂಗವಾಗಲೀ ಕಾರ್ಯಾಂಗವಾಗಲೀ ಇಲ್ಲವೇ ಶಾಸಕಾಂಗವೇ ಆಗಲಿ ಸರ್ವೋಚ್ಚವಲ್ಲ, ವಾಸ್ತವದಲ್ಲಿ ಸಂವಿಧಾನವೇ ಸರ್ವಶ್ರೇಷ್ಠ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಸೋಮವಾರ ಹೇಳಿದರು.

ದಕ್ಷ್‌ ಸಂಸ್ಥೆ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಸೋಮವಾರ ಹಮ್ಮಿಕೊಂಡಿದ್ದ ʼಕಾನ್‌ಸ್ಟಿಟ್ಯೂಷನಲ್‌ ಐಡಿಯಲ್ಸ್‌: ಡೆವಲಪ್‌ಮೆಂಟ್‌ ಅಂಡ್‌ ರಿಯಲೈಸೇಷನ್‌ ಥ್ರೂ ಕೋರ್ಟ್‌ ಲೆಡ್‌ ಜಸ್ಟೀಸ್‌ʼ ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

"ನ್ಯಾಯಾಂಗ ಸ್ವಾತಂತ್ರ್ಯ ಎಂಬುದು ಕಾಪಿಟ್ಟುಕೊಳ್ಳಲೇಬೇಕಾದ ಮಹತ್ವದ ಸಾಂವಿಧಾನಿಕ ಆದರ್ಶಗಳಲ್ಲಿ ಒಂದಾಗಿದೆ. ನಾವು ನ್ಯಾಯಾಧೀಶರು ಅದನ್ನು ಹೆಚ್ಚು ಗೌರವಿಸುತ್ತೇವೆ. ಎಷ್ಟೇ ಸಾಂಸ್ಥಿಕ ಸ್ವಾತಂತ್ರ್ಯವಿದ್ದರೂ ಅಂತಿಮವಾಗಿ ನ್ಯಾಯಾಧೀಶರ ವ್ಯಕ್ತಿತ್ವ ಮುಖ್ಯವಾಗುತ್ತದೆ" ಎಂದು ಅವರು ಹೇಳಿದರು.

ನ್ಯಾ. ನಾಗರತ್ನ ಅವರ ಭಾಷಣದ ಪ್ರಮುಖಾಂಶಗಳು

  • ಸಾಮಾಜಿಕ-ಆರ್ಥಿಕ ನ್ಯಾಯದ ಆದರ್ಶವು ಸಂವಿಧಾನದ ಸಂಸ್ಥಾಪಕರ ಪ್ರಧಾನ ಧ್ಯೇಯವಾಗಿತ್ತು.

  • ಸಂವಿಧಾನದ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳ ವ್ಯಾಪ್ತಿಯಲ್ಲಿ  ಹೆಚ್ಚಿನ ಹಕ್ಕುಗಳನ್ನು ವ್ಯಾಖ್ಯಾನಿಸಲು ಇನ್ನೂ ಅವಕಾಶವಿದೆ. ಆದರೆ ಅದರ ವಿಸ್ತರಣೆ ಎಂಬುದು ನ್ಯಾಯಾಲಯಗಳಿಗೆ ವಕೀಲ ವರ್ಗವು ನೀಡುವ ಸಲಹೆಗಳನ್ನು ಆಧರಿಸಿರುತ್ತದೆ.

  • ಸ್ವಾತಂತ್ರ್ಯವು ನಮ್ಮೊಂದಿಗೆ ಉಳಿಯುವಂತೆ ನೋಡಿಕೊಳ್ಳುವುದು ದೇಶದ ಜನರಿಗೆ ಬಿಟ್ಟ ವಿಚಾರ.

  • ಎಲ್ಲಾ ನಾಲ್ಕು ಆದರ್ಶಗಳಲ್ಲಿ ಭ್ರಾತೃತ್ವವನ್ನು ಕನಿಷ್ಠ ಪ್ರಮಾಣದಲ್ಲಿ ಅರ್ಥಮಾಡಿಕೊಳ್ಳಲಾಗಿದ್ದು ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪ್ರಜಾಪ್ರಭೂತ್ವದ ಮೌಲ್ಯಗಳನ್ನು ಸದೃಢಗೊಳಿಸಲು ಭ್ರಾತೃತ್ವ ಸಹಾಯ ಮಾಡುತ್ತದೆ.

  • ದೇಶ ಆರ್ಥಿಕವಾಗಿ ಬೆಳೆದಿದ್ದರೂ, ಲಂಚ, ಭ್ರಷ್ಟಾಚಾರ ಹಾಗೂ ಸಂಪತ್ತಿನ ಅಸಮಾನತೆಯು ಇಲ್ಲಿರುವ ಪ್ರಾಮಾಣಿಕತೆಯ ಕೊರತೆಯ ಪ್ರತೀಕಗಳಾಗಿವೆ.

  • ಅಕ್ರಮವಾಗಿ ಗಳಿಸಿದ ಹಣದಿಂದ ಸವಲತ್ತುಗಳನ್ನು ಪಡೆಯುವುದನ್ನು ಧಿಕ್ಕರಿಸಿ. ಇದಕ್ಕೆ ಕೊಳ್ಳುಬಾಕತನವನ್ನು ದೂರವಿಡುವುದು ಮತ್ತು ದೇಶದ ಆದರ್ಶ ನಾಗರಿಕರಾಗಲು ಹೆಚ್ಚಿನ ಗಮನ ನೀಡುವುದು ಅವಶ್ಯಕ. 

  •  ನ್ಯಾ. ಚಿನ್ನಪ್ಪರ ರೆಡ್ಡಿ ಅವರು ಹೇಳಿರುವಂತೆ, ನಮ್ಮ ಪರಂಪರೆ ಸಹಿಷ್ಣುತೆಯನ್ನು ಕಲಿಸುತ್ತದೆ. ನಮ್ಮ ತತ್ವಜ್ಞಾನ ಸಹಿಷ್ಣುತೆಯನ್ನು ಬೋಧಿಸುತ್ತದೆ. ನಮ್ಮ ಸಂವಿಧಾನವು ಸಹಿಷ್ಣುತೆಯನ್ನು ಆಚರಿಸುತ್ತದೆ, ನಾವು ಅದನ್ನು ದುರ್ಬಲಗೊಳಿಸಬಾರದು.