BJP MLA Nehru Olekar and Bengaluru city civil court
BJP MLA Nehru Olekar and Bengaluru city civil court 
ಸುದ್ದಿಗಳು

ಬಿಜೆಪಿ ಶಾಸಕ ನೆಹರೂ ಓಲೇಕಾರ್‌, ಇಬ್ಬರು ಪುತ್ರರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

Bar & Bench

ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್‌ ವಂಚನೆ ಪ್ರಕರಣದಲ್ಲಿ ಬಿಜೆಪಿಯ ಹಾವೇರಿ ಶಾಸಕ ನೆಹರೂ ಓಲೇಕಾರ್‌ ಮತ್ತು ಅವರ ಇಬ್ಬರು ಪುತ್ರರಾದ ದೇವರಾಜ್‌ ಮತ್ತು ಮಂಜುನಾಥ್‌ ಹಾಗೂ ಐವರು ಅಧಿಕಾರಿಗಳಿಗೆ ತಲಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಸೋಮವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದೆ.

ಹಾವೇರಿಯ ಶಶಿಧರ್‌ ಹಳ್ಳಿಕೇರಿ ಅವರ ಖಾಸಗಿ ದೂರನ್ನು ಆಧರಿಸಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು. ಇದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 197, 198, 409 ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1)(ಡಿ) ಜೊತೆಗೆ 13(2) ಅಡಿ ಪ್ರಕರಣ ದಾಖಲಿಸಿ, ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತಕುಮಾರ್‌ ಅವರು ಮೇಲಿನ ಆದೇಶ ಮಾಡಿದ್ದಾರೆ.

ಶಾಸಕ ಓಲೇಕಾರ್‌ಗೆ ₹2,000 ದಂಡ ವಿಧಿಸಿದ್ದು, ಅವರ ಇಬ್ಬರು ಪುತ್ರರಿಗೆ ತಲಾ ₹6,000 ಹಾಗೂ 4,5,7,8 ಮತ್ತು 9ನೇ ಆರೋಪಿಗಳಿಗೆ ತಲಾ ₹8,000 ದಂಡ ವಿಧಿಸಲಾಗಿದೆ. ದಾಖಲೆ ಸಂಗ್ರಹಿಸಲು ವೆಚ್ಚ ಮಾಡಿರುವುದಕ್ಕಾಗಿ ದಂಡದ ಒಟ್ಟಾರೆ ಮೊತ್ತದ ಪೈಕಿ ಪರಿಹಾರದ ರೂಪದಲ್ಲಿ ಖಾಸಗಿ ದೂರು ದಾಖಲಿಸಿದ್ದ ಶಶಿಧರ್‌ ಹಳ್ಳಿಕೇರಿ ಅವರಿಗೆ 10 ಸಾವಿರ ರೂಪಾಯಿ ಪಾವತಿಸಲು ನ್ಯಾಯಾಲಯವು ಆದೇಶಿಸಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ನಿವೃತ್ತ ಉಪ ನಿರ್ದೇಶಕ, ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯಾಕಾರಿ ಎಂಜಿನಿಯರ್‌ ಎಚ್‌ ಕೆ ಕಲ್ಲಪ್ಪ, ಶಿಗ್ಗಾವಿ ಎಸ್‌ಡಿಸಿ ಶಿವಕುಮಾರ್‌ ಪುಟ್ಟಯ್ಯ ಕಮಡೋಡ್‌, ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಪಿ ಎಸ್‌ ಚಂದ್ರಮೋಹನ್‌, ಹಾವೇರಿ ನಗರಸಭೆ ಸಹಾಯಕ ಎಂಜಿನಿಯರ್‌ ಕೆ ಕೃಷ್ಣ ನಾಯಕ್‌ ಅವರನ್ನು ಅಪರಾಧಿಗಳು ಎಂದು ನ್ಯಾಯಾಲಯ ಆದೇಶಿಸಿದೆ.

2008 ಮತ್ತು 2013ರ ಅವಧಿಯಲ್ಲಿ ಶಾಸಕರಾಗಿದ್ದ ಓಲೇಕಾರ್‌ ಅವರು ಸರ್ಕಾರದ ಸಿವಿಲ್‌ ಕೆಲಸಗಳನ್ನು ಬೇರೆಯವರಿಗೆ ದಕ್ಕದಂತೆ ತಮ್ಮ ಇಬ್ಬರು ಪುತ್ರರಿಗೆ ಕೊಡಿಸಿದ್ದರು ಎಂದು 2012ರಲ್ಲಿ ಶಶಿಧರ್‌ ಖಾಸಗಿ ದೂರು ದಾಖಲಿಸಿದ್ದರು. ಇದರ ತನಿಖೆ ನಡೆಸುವಂತೆ ಹಾವೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಲೋಕಾಯುಕ್ತಕ್ಕೆ ಸೂಚಿಸಿತ್ತು.

ಓಲೇಕಾರ್‌ ಅವರ ಪುತ್ರರಾದ ದೇವರಾಜ್‌ ಮತ್ತು ಮಂಜುನಾಥ್‌ ಸೇರಿ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು 2017ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಓಲೇಕಾರ್‌ ಪುತ್ರರು ಕೆಲಸ ಪೂರೈಸಿರುವುದಕ್ಕೆ ಸಂಬಂಧಿಸಿದ ನಕಲಿ ದಾಖಲೆ ಸಲ್ಲಿಸಿದ್ದು, ಇತರೆ ಆರೋಪಿಗಳು ಅದನ್ನು ದೃಢೀಕರಿಸಿದ್ದರು. ಕೆಲಸ ಪೂರೈಸಿದ ದಾಖಲೆಗಳನ್ನು ದುರುದ್ದೇಶದಿಂದ ಸಲ್ಲಿಸಲಾಗಿದ್ದು, ಸರ್ಕಾರದ ಕೆಲಸ ಪಡೆಯಲು ಓಲೇಕರ್‌ ಅವರ ಪುತ್ರರು ಅನರ್ಹರಾಗಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಸೇವಕರಾಗಿ ಓಲೇಕಾರ್‌ ಅವರು ಅಪ್ರಾಮಾಣಿಕರಾಗಿ ಮಕ್ಕಳಿಗೆ ಅನುಕೂಲ ಮಾಡಿಕೊಡಲು ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಓಲೇಕಾರ್‌ ಕೋರಿಕೆಯಂತೆ ಅಧಿಕಾರಿಗಳೂ ತಮ್ಮ ಸ್ಥಾನ ದುರ್ಬಳಕೆ ಮಾಡಿ ನಕಲಿ ದಾಖಲೆಗಳನ್ನು ಮಾನ್ಯ ಮಾಡಿದ್ದಾರೆ. ಓಲೇಕಾರ್‌, ಅವರ ಪುತ್ರರು ಹಾಗೂ ಅಧಿಕಾರಿಗಳು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಮತ್ತು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ಅಪರಾಧ ಎಸಗಿರುವುದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.