ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ತೀರ್ಮಾನಿಸಿದ ಅಧೀನ ನ್ಯಾಯಾಲಯ ಆದೇಶಕ್ಕೆ ತಡೆ ನೀಡಲು ಕೋರಿ ಬಿಜೆಪಿಯ ಹಾವೇರಿ ಶಾಸಕ ನೆಹರೂ ಓಲೇಕಾರ್ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಓಲೇಕಾರ್ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.
ಓಲೇಕಾರ್ ಪರ ವಕೀಲರು ಅರ್ಜಿದಾರರನ್ನು ದೋಷಿಯಾಗಿ ತೀರ್ಮಾನಿಸಿರುವ ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು. ಈಗಾಗಲೇ ಅರ್ಜಿದಾರರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವ ಅಧೀನ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿ ಪರಿಶೀಲಿಸಿದ ಪೀಠವು ಸರಿಯಾದ ಮಾದರಿಯಲ್ಲಿ ಅರ್ಜಿಯನ್ನು ಸಲ್ಲಿಸಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಓಲೇಕಾರ್ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಕರಣ ಸಂಬಂಧ ನೆಹರು ಓಲೇಕಾರ್ ಅವರವನ್ನು ದೋಷಿಯಾಗಿ ತೀರ್ಮಾನಿಸಿ ಮತ್ತು ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು (91ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ) 2023ರ ಫೆಬ್ರವರಿ 13ರಂದು ಹೊರಡಿಸಿತ್ತು. ಈ ತೀರ್ಪು ಪ್ರಶ್ನಿಸಿ ಓಲೇಕರ್‌ಗೆ ಹೈಕೊರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 3ರಂದು ಓಲೇಕಾರ್‌ಗೆ ವಿಧಿಸಿದ್ದ ಎರಡು ವರ್ಷದ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿದ್ದ ಹೈಕೋರ್ಟ್, ಜಾಮೀನು ಮಂಜೂರು ಮಾಡಿತ್ತು. ಇದೀಗ ದೋಷಿಯಾಗಿ ತೀರ್ಮಾನಿಸಿರುವ ಆದೇಶದ ಭಾಗಕ್ಕೆ ತಡೆ ನೀಡಲು ಕೋರಿದ್ದಾರೆ.
ಓಲೇಕಾರ್ ಅವರನ್ನು ದೋಷಿಯಾಗಿರುವ ತೀರ್ಮಾನಿಸಿರುವ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡದಿದ್ದರೆ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾನೂನಾತ್ಮಕ ತೊಡಕು ಉಂಟಾಗಲಿದೆ ಎನ್ನಲಾಗಿದೆ.