“ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾದಗಳಿವೆ ಎಂಬುದು ಅರಿವಿಗೆ ಬಂದಿದ್ದು, ತಟಸ್ಥ, ವಸ್ತುನಿಷ್ಠ ಮತ್ತು ಪಕ್ಷಾತೀತ ತನಿಖೆ ನಡೆಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆರೋಪಗಳು ಮತ್ತು ಅದಕ್ಕೆ ಪೂರಕವಾದ ದಾಖಲೆಗಳನ್ನು ಗಮನಿಸಿದಾಗ ಮೇಲ್ನೋಟಕ್ಕೆ ಅಪರಾಧವಿದೆ ಎಂದು ನನಗನ್ನಿಸಿದೆ” ಎಂದು ಅಭಿಯೋಜನಾ ಮಂಜೂರಾತಿ ನೀಡುವಾಗ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಸಿದ್ದರಾಮಯ್ಯ ಅವರ ವಿರುದ್ಧದ ಅಭಿಯೋಜನಾ ಮಂಜೂರಾತಿಗೆ ಸಂಬಂಧಿಸಿದಂತೆ ಜುಲೈ 26ರಂದು ನೀಡಲಾಗಿದ್ದ ಶೋಕಾಸ್ ನೋಟಿಸ್ ಅನ್ನು ಸಂಪುಟದ ಮುಂದೆ ಮಂಡಿಸಲಾಗಿದೆ. ಮುಖ್ಯಮಂತ್ರಿಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಸಲಹೆ ನೀಡಿರುವ ಸಂಪುಟದ ನಿರ್ಧಾರವು ನನ್ನಲ್ಲಿ ವಿಶ್ವಾಸ ಮೂಡಿಸಿಲ್ಲ” ಎಂದು ಹೇಳಲಾಗಿದೆ.
2004ರಲ್ಲಿ ಮಧ್ಯಪ್ರದೇಶ ಪೊಲೀಸ್ ಸ್ಥಾಪನೆ ವರ್ಸಸ್ ಮಧ್ಯಪ್ರದೇಶ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ರಾಜ್ಯಪಾಲರು ಸಂಪುಟದ ಸಲಹೆಗೆ ಬದ್ಧವಾಗಿರುವುದು ಮತ್ತು ವಿಶೇಷ ಸಂದರ್ಭದಲ್ಲಿ ರಾಜ್ಯಪಾಲರ ವಿವೇಚನಾಧಿಕಾರದ ಕುರಿತು ವಿಸ್ತೃವಾಗಿ ಚರ್ಚಿಸಲಾಗಿದೆ.
ಈ ತೀರ್ಪಿನ ಒಂದು ಕಡೆ ಪೀಠವು “ಇಂಥ ವಾಸ್ತವಿಕ ವಿಚಾರಗಳು ಮತ್ತು ಸಂದರ್ಭದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಕ್ರಮಕೈಗೊಳ್ಳದಿದ್ದರೆ ಕಾನೂನು ಸುವ್ಯವಸ್ಥೆ ಮುರಿದು ಬೀಳಬಹುದು. ಆನಂತರ ಸಾಕಷ್ಟು ದಾಖಲೆಗಳು ಇದ್ದು, ಮೆಲ್ನೋಟಕ್ಕೆ ಪ್ರಕರಣ ಇದ್ದರೂ ಅಭಿಯೋಜನಾ ಮಂಜೂರಾತಿ ನಿರಾಕರಿಸುವುದು ಸರ್ಕಾರಗಳಿಗೆ ಸೇರಿದ್ದಾಗಿರುತ್ತದೆ. ಒಂದೊಮ್ಮೆ ಮೇಲ್ನೋಟಕ್ಕೆ ಪ್ರಕರಣ ಇದ್ದರೂ ಪ್ರಮುಖ ಹುದ್ದೆಯಲ್ಲಿರುವವರ ವಿಚಾರಣೆಗೆ ಅಭಿಯೋಜನಾ ಮಂಜೂರಾತಿ ನಿರಾಕರಿಸುವುದು ಅಥವಾ ತಡೆ ಹಿಡಿಯುವುದರಿಂದ ಪ್ರಜಾಪ್ರಭುತ್ವವೇ ಅಪಾಯಕ್ಕೆ ಸಿಲುಕಲಿದೆ. ಆಗ ಅಧಿಕಾರಸ್ಥರು ತಮ್ಮ ವಿರುದ್ಧ ಅಗತ್ಯ ಅಭಿಯೋಜನಾ ಮಂಜೂರಾತಿ ನೀಡುವುದಿಲ್ಲ ಎಂದು ಅರಿತು ಕಾನೂನನ್ನು ಉಲ್ಲಂಘಿಸುವ ಸ್ಥಿತಿ ನಿರ್ಮಾಣವಾಗಲಿದೆ” ಎಂದು ಹೇಳಿರುವುದನ್ನು ರಾಜ್ಯಪಾಲರ ಅಭಿಯೋಜನಾ ಮಂಜೂರಾತಿಯಲ್ಲಿ ವಿವರಿಸಲಾಗಿದೆ.