Senior Advocate Kapil Sibal 
ಸುದ್ದಿಗಳು

ನಿರಂಕುಶ ಪ್ರಭುತ್ವದತ್ತ ಭಾರತ ಹೊರಳುತ್ತಿರುವುದಕ್ಕೆ ಹೊಸ ಅಪರಾಧಿಕ ಕಾನೂನುಗಳು ಸಾಕ್ಷಿ: ಕಪಿಲ್ ಸಿಬಲ್

Bar & Bench

ಈಚೆಗೆ ಜಾರಿಗೆ ಬಂದಿರುವ ಮೂರು ಹೊಸ ಅಪರಾಧಿಕ ಕಾನೂನುಗಳು ದಬ್ಬಾಳಿಕೆಯಿಂದ ಕೂಡಿದ್ದು, ನಿರಂಕುಶ ಪ್ರಭುತ್ವದತ್ತ ಭಾರತ ಹೊರಳುತ್ತಿರುವುದಕ್ಕೆ ನಾಂದಿ ಹಾಡಿವೆ ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಆತಂಕ ವ್ಯಕ್ತಪಡಿಸಿದರು.

ನೀತಿ ನಿರೂಪಣೆ ಕುರಿತಾದ ಚಿಂತಕರ ವೇದಿಕೆಯಾದ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ  ಶುಕ್ರವಾರ ಆಯೋಜಿಸಿದ್ದ ಅಪರಾಧ ಮತ್ತು ಶಿಕ್ಷೆ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ "ನಮ್ಮ ಅಪರಾಧ ಕಾನೂನುಗಳು ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಅನಗುಣವಾಗಿಯೇ?” ಎಂಬ ವಿಷಯವಾಗಿ ಸುಪ್ರೀಂ ಕೋರ್ಟ್ ವಕೀಲರ ಸಂಘದ (SCBA) ಅಧ್ಯಕ್ಷರೂ ಆದ ಅವರು ಮಾತನಾಡಿದರು.

ಇತ್ತೀಚೆಗೆ ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳಾದ- ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್), ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ (ಬಿಎಸ್‌ಎ)  ದೇಶದ ಒಕ್ಕೂಟ ವ್ಯವಸ್ಥೆ ಮತ್ತಿತರ ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿವೆ ಎಂದು ಅವರು ತಿಳಿಸಿದರು.

ಸಿಬಲ್‌ ಉಪನ್ಯಾಸದ ಪ್ರಮುಖಾಂಶಗಳು

  • ಹೊಸ ಕಾನೂನುಗಳು ಏಕೆ ಅಗತ್ಯ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ನಾವು ನಿರಂಕುಶ ವ್ಯವಸ್ಥೆಯತ್ತ ಹೊರಳುತ್ತಿದ್ದೇವೆ.

  • ಐಪಿಸಿಯನ್ನು ನ್ಯಾಯ ಸಂಹಿತೆ ಎಂದು ಏಕೆ ಕರೆಯುತ್ತಿದ್ದಾರೆ. ಸಮಾಜದ ವಿರುದ್ಧ ಅಪರಾಧಗಳು ನಡೆದಾಗ ಅದನ್ನು ವಿಚಾರಣೆ ಮಾಡುವ ಪ್ರಭುತ್ವ ಇದಾಗಿದೆ. ಕಾನೂನನ್ನು ಕೈಗೆತ್ತಿಕೊಂಡು ಅದನ್ನು ಉಲ್ಲಂಘಿಸಿದಾಗ ಸಮಾಜ ನಿಮ್ಮನ್ನು ಶಿಕ್ಷಿಸುತ್ತದೆ. ಇದು ದಂಡನೆ, ನ್ಯಾಯ ಅಲ್ಲ. ಹಾಗಾಗಿ ಹೊಸ ಕಾನೂನನ್ನು ನ್ಯಾಯ ಸಂಹಿತೆ ಅಲ್ಲ, ಅದು ನಿಜವಾಗಿಯೂ ʼಅನ್ಯಾಯ್‌ʼ ಸಂಹಿತೆ ಎನ್ನಬಹುದು.

  • ಈ ಕಾನೂನುಗಳನ್ನು 'ನ್ಯಾಯ'ಕ್ಕಾಗಿ ಬಳಸದೆ ಅವರಿಗೆ ಇಷ್ಟವಿಲ್ಲದ ಜನರನ್ನು ಬಗ್ಗುಬಡಿಯಲು ಬಳಸಲಾಗುತ್ತದೆ.

  • ಸಿಆರ್‌ಪಿಸಿಯನ್ನು ಹೊಸದಾಗಿ ಭಾರತೀಯ ನಾಗರಿಕ್‌ ಸುರಕ್ಷಾ ಸಂಹಿತೆ ಎಂದು ಕರೆಯಲಾಗುತ್ತಿದೆ. ಇಲ್ಲಿ ಸುರಕ್ಷೆ ಎಂದರೆ ಏನರ್ಥ? ಕಾನೂನುಗಳಿಗೆ ಶೀರ್ಷಿಕೆ ನೀಡುವಾಗ ವಿವೇಚನೆ ಬಳಸಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.

  • ಕ್ರಿಮಿನಲ್‌ ಅಪರಾಧ ಎಲ್ಲಿಯೇ ನಡೆದಿದ್ದರೂ ಅದನ್ನು ಪರಿಗಣಿಸದೆ ದೇಶದ ಎಲ್ಲಿಂದ ಬೇಕಾದರೂ ಮೊಕದ್ದಮೆ ಹೂಡಬಹುದು ಎನ್ನುವುದು ದುರಂತಕ್ಕೆ ಬರೆದ ಮುನ್ನುಡಿ.  ಇದು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಳ್ಳುತ್ತದೆ. ಕಿಂಚಿತ್ತೂ ಯೋಚಿಸದೆ ಇವುಗಳನ್ನು ಜಾರಿಗೆ ತರಲಾಗಿದೆ.

  • ಹೊಸ ಕಾನೂನುಗಳು ಪೊಲೀಸರ ಕೈಗೆ ಹೆಚ್ಚಿನ ಅಧಿಕಾರ ನೀಡಿರುವುದು ಕಳವಳಕಾರಿಯಾಗಿದೆ.

  • ಹಿಂದಿನ 15 ದಿನಗಳ ಬದಲಿಗೆ ಈಗ  ಒಬ್ಬ ಆರೋಪಿಯನ್ನು ಬಂಧನದ ನಂತರ 60-90 ದಿನಗಳವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಬಹುದಾಗಿದೆ. ಇಂಥ ಕಾನೂನು ಬೇರಾವುದೇ ದೇಶದಲ್ಲಿ ಇಲ್ಲ.

  • ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಆರೋಪಿ ನಿರಪರಾಧಿಯಾಗಿರುವುದರಿಂದ, ಉದಾರವಾದಿ ರಾಷ್ಟ್ರಗಳಲ್ಲಿ ಬಂಧನದ 24 ಗಂಟೆಗಳ ಒಳಗೆ ಆರೋಪಿಯನ್ನು ನ್ಯಾಯಾಧೀಶರೆದುರು ಹಾಜರುಪಡಿಸಲಾಗುತ್ತದೆ.

  • ಹೀಗಾಗಿ ಹೊಸದಾಗಿ ಜಾರಿಗೆ ತಂದಿರುವ ಕಾನೂನುಗಳು ಈಗ ಬಹುತೇಕ ದಬ್ಬಾಳಿಕೆಯ ಅಸ್ತ್ರಗಳಾಗಿವೆ.

  • ತನಿಖೆ ಮತ್ತು ವಿಚಾರಣೆ ದೇಶದ ಎಲ್ಲಿ ಬೇಕಾದರೂ ನಡೆಯಬಹುದು ಎಂಬುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು.

  • ಸಂಘಟಿತ ಅಪರಾಧ ಮತ್ತು ಭಯೋತ್ಪಾದಕ ಚಟುವಟಿಕೆಗಳ ಆರೋಪ ಇರುವ ಪ್ರಕರಣಗಳಲ್ಲಿ ಜನರನ್ನು ಇದೀಗ ಸುಲಭವಾಗಿ ಸಿಲುಕಿಸಬಹುದಾಗಿದೆ.

  • ಎಲ್ಲಿಯೋ ಪ್ರತಿಭಟನೆ ನಡೆಸುತ್ತಿರುವವರಿಗೆ ಯಾರಾದರೂ ಆಹಾರ ನೀಡಿದರೆ ಅವರನ್ನು ಕೂಡ ಇನ್ನುಮುಂದೆ ಭಯೋತ್ಪಾದಕರು ಎಂದು ಕರೆಯಬೇಕು ಎಂಬುದು ಗೃಹ ಸಚಿವರ ಆಲೋಚನೆಯಾಗಿರಬಹುದು.

  • ಸುಪ್ರೀಂ ಕೋರ್ಟ್‌ ರದ್ದುಪಡಿಸಿರುವ ದೇಶದ್ರೋಹ ಕಾನೂನು ಇದೀಗ ಕೆಟ್ಟ ರೂಪದಲ್ಲಿ ಮರಳಿದೆ.

  •  ದೇಶದ ಶೇ ಎಪತ್ತರಷ್ಟು ಸುದ್ದಿಗಳು ಇದೀಗ ಕಾನೂನು ಮತ್ತು ರಾಜಕೀಯದಿಂದ ತುಂಬಿ ಹೋಗಿವೆ.

  • ಇನ್ನು ಮುಂದೆ ಗುರಿಯಾಗಬೇಕಾದ ಭೀತಿ ಇರುವುದರಿಂದ ಭಾರತದಲ್ಲಿ ಹೂಡಿಕೆ ಮಾಡಲು ಯಾರೂ ಮುಂದೆ ಬರುವುದಿಲ್ಲ.

  • ಕಾನೂನುಗಳು ಹೆಚ್ಚು ಹೆಚ್ಚು ಆಕ್ರಮಣಕಾರಿಯಾಗಿದ್ದು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯದೆ ನಮ್ಮನ್ನು ಆಳುವವರನ್ನು ಎತ್ತಿ ಹಿಡಿಯುತ್ತವೆ.

  •  ಪ್ರತಿಭಟನೆಗಳನ್ನು ಹತ್ತಿಕ್ಕುವುದು ಹೊಸ ಕ್ರಿಮಿನಲ್ ಕಾನೂನುಗಳ ಉದ್ದೇಶವಾಗಿದೆ.

  • ಶೇ 95ರಷ್ಟು ಹೊಸ ಕಾನೂನುಗಳು ಹಳೆಯ ಕಾನೂನುಗಳಂತೆಯೇ ಇವೆ. ಉಳಿದ ಭಾಗ ಪ್ರಭುತ್ವದ ಅಧಿಕಾರವನ್ನು ಹಿಗ್ಗಿಸುವ ಇಂಗಿತ ಹೊಂದಿದೆ.

  • ಪ್ರತಿಭಟನೆಯನ್ನು ಸಂಘಟಿತ ಅಪರಾಧದಂತೆ ಕಂಡರೆ ಅದೇ ಒಂದು ಸಮಸ್ಯೆಯಾಗುತ್ತದೆ.

  • ಮತ್ತೊಂದು ಸಮಸ್ಯೆ ಎಂದರೆ ಈ ಕಾನೂನುಗಳು ಈವರೆಗೆ ನೀಡಲಾದ ನ್ಯಾಯಾಂಗ ತೀರ್ಪುಗಳನ್ನು ಗಣನೆಗೆ ತೆಗೆದುಕೊಳ್ಳದೇ ಹೋಗುವುದು.