ಇತ್ತೀಚೆಗೆ ಜಾರಿಗೆ ತರಲು ಮುಂದಾಗಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಎದ್ದುಕಾಣುವಂತಹ ಯಾವುದೇ ಬದಲಾವಣೆಗಳನ್ನಾಗಲೀ, ಕಾನೂನುಗಳ ನಿರ್ವಸಾಹತೀಕರಣವನ್ನಾಗಲೀ ಮಾಡಿಲ್ಲ ಎಂದು ಹಿರಿಯ ನ್ಯಾಯವಾದಿ ಹಾಗೂ ದೆಹಲಿ ಮತ್ತು ಒರಿಸ್ಸಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಎಸ್ ಮುರಳೀಧರ್ ತಿಳಿಸಿದರು.
ರಾಕೇಶ್ ಕಾನೂನು ಪ್ರತಿಷ್ಠಾನ ಮತ್ತು ರಾಜಾ ಮುತ್ತಯ್ಯ ಸಂಶೋಧನಾ ಗ್ರಂಥಾಲಯ ಚೆನ್ನೈನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಕೇಶ್ ಸ್ಮಾರಕ ನ್ಯಾಯ ಮತ್ತು ಸಮಾನತೆಗಾಗಿನ ಉಪನ್ಯಾಸ ಸರಣಿಯಲ್ಲಿ “ಗಿಲ್ಟಿ ಟಿಲ್ ಪ್ರೂವ್ಡ್ ಇನ್ನೋಸೆಂಟ್ - ಡಾರ್ಕ್ ಏರಿಯಾಸ್ ಆಫ್ ಕ್ರಿಮಿನಲ್ ಜ್ಯೂರಿಸ್ಪ್ರುಡೆನ್ಸ್" ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.
ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆಗಳಿಗೆ ಬದಲಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಬರುವ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿವೆ. ಈ ಕಾನೂನುಗಳ ಕುರಿತಾಗಿ ನ್ಯಾಯಶಾಸ್ತ್ರಜ್ಞರೂ ಆದ ಡಾ. ಮುರಳೀಧರ್ ಅವರು ಮಾಡಿರುವ ಅವಲೋಕನಗಳು ಇಲ್ಲಿವೆ:
ಈ ಮೂರು ಹೊಸ ಕಾನೂನುಗಳಿಂದ ಅಗಾಧ ಬದಲಾವಣೆಯಾಗಲಿವೆ ಮತ್ತು ಇವು ಕಾನೂನನ್ನು ನಿರ್ವಸಾಹತೀಕರಣಗೊಳಿಸಿವೆ ಎಂಬ ಮಾತುಗಳಿಂದೆಲ್ಲಾ ಮಾರುಹೋಗದಿರಿ. ಅದರಲ್ಲಿ ಅಂಥದ್ದೇನೂ ಇಲ್ಲ.
ಸ್ವಾತಂತ್ರ್ಯೋತ್ತರದಲ್ಲಿ ಜಾರಿಯಲ್ಲಿರುವ ಮುಂಜಾಗ್ರತಾ ಕ್ರಮವಾಗಿ ಬಂಧನ ಕ್ರಮಕ್ಕೆ 1915 ರ ಭಾರತದ ರಕ್ಷಣಾ ಕಾಯಿದೆ ಆಧಾರವಾಗಿದೆ.
ಈ ಕಾನೂನಿನೊಳಗಿನ ಜಾಮೀನು ನಿಬಂಧನೆಗಳು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯಿದೆ (ಯುಎಪಿಎ), ಅಕ್ರಮ ಹಣ ತಡೆ ಕಾಯಿದೆ (ಪಿಎಂಎಲ್ಎ) ಮತ್ತು ಕಂಪನಿ ಕಾಯಿದೆಯಂತಹ ಕಾನೂನುಗಳಲ್ಲಿ ಕಂಡುಬರುವ ಅವಳಿ ಪರೀಕ್ಷೆಗೆ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತವೆ.
ಸಂವಿಧಾನ 22 ನೇ ವಿಧಿ ಅವಕಾಶ ಕಲ್ಪಿಸುವ ಮುಂಜಾಗ್ರತಾ ಕ್ರಮವಾಗಿ ಬಂಧನದ ಕಾಯಿದೆಗಳು ತುರ್ತು ಸಂದರ್ಭಗಳಲ್ಲಿ ತಾತ್ಕಾಲಿಕ ಕ್ರಮವಾಗಿಯಷ್ಟೇ ಜಾರಿಯಾಗಬೇಕಿತ್ತು.
ಮುಂಜಾಗ್ರತಾ ಕ್ರಮವಾಗಿ ಬಂಧನದ ಮೂಲಕ ಆಡಳಿತ ನಡೆಸುವುದು ಶಾಸಕಾಂಗಕ್ಕೆ ರೂಢಿಯಾಗಿಬಿಟ್ಟಿದೆ. ಅಂತಹ ಬಂಧನಗಳಲ್ಲಿ ಮಧ್ಯಪ್ರವೇಶಿಸದೆ ಇರುವುದು ನ್ಯಾಯಾಂಗದ ಪದ್ದತಿಯಾಗಿಬಿಟ್ಟಿದೆ ಎಂದು ಪ್ರೊ. ಉಪೇಂದ್ರ ಭಕ್ಷಿ ಹೇಳಿದ್ದರು.
ಹೊಸ ಕಾನೂನುಗಳು ಎನ್‌ಕೌಂಟರ್‌ಗಳು, ನಾಪತ್ತೆ, ಗುಂಪು ಅಪರಾಧ, ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮಾತನಾಡುವುದಿಲ್ಲ.
ದುರುದ್ದೇಶಪೂರಿತ ಕಾರಣಕ್ಕೆ ಪ್ರಕರಣಗಳಲ್ಲಿ ಸಿಲುಕಿಕೊಂಡವರಿಗೆ ಕಾನೂನು ಆಯೋಗದ 277 ನೇ ವರದಿಯಲ್ಲಿ ತಿಳಿಸಿರುವಂತೆ ಪರಿಹಾರ ನೀಡುವ ಕುರಿತು ಹೊಸ ಕ್ರಿಮಿನಲ್ ಕಾನೂನುಗಳು ಪ್ರಸ್ತಾಪಿಸುವುದಿಲ್ಲ.
ಅಕ್ರಮ ಬಂಧನಕ್ಕೆ ಕೇವಲ ₹1,000 ಪರಿಹಾರ ನೀಡುವ ಐಪಿಸಿ ಸೆಕ್ಷನ್ 358 ಅನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್) ಉಳಿಸಿಕೊಳ್ಳಲಾಗಿದೆ.
ಸುಳ್ಳು ಪ್ರಕರಣ ಹೂಡುವುದಕ್ಕೆ ಸಂಬಂಧಿಸಿದಂತೆ ವ್ಯವಹರಿಸುವ ಸೆಕ್ಷನ್ 211 ಸಹ ಕಡಿಮೆ ಪರಿಹಾರ ನೀಡುತ್ತದೆ ಇಲ್ಲವೇ ಯಾವುದೇ ಪರಿಹಾರ ನೀಡುವುದಿಲ್ಲ. ಹೊಸ ಕಾನೂನುಗಳಲ್ಲಿ ಈ ಸಂಬಂಧ ಯಾವುದೇ ಬದಲಾವಣೆಗಳಿಲ್ಲ.