ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ನೂತನ ಸಾಂವಿಧಾನಿಕ ಪೀಠ ರಚಿಸಲಾಗಿದ್ದು, ಪೀಠವು ಜುಲೈ 12ರಿಂದ ನಾಲ್ಕು ಪ್ರಕರಣಗಳ ವಿಚಾರಣೆ ನಡೆಸಲಿದೆ.
ನೂತನ ಸಾಂವಿಧಾನಿಕ ಪೀಠದಲ್ಲಿ ಸಿಜೆಐ ಅಲ್ಲದೆ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ ಎಸ್ ನರಸಿಂಹ, ಪಂಕಜ್ ಮಿತ್ತಲ್ ಹಾಗೂ ಮನೋಜ್ ಮಿಶ್ರಾ ಅವರನ್ನು ಪೀಠ ಒಳಗೊಂಡಿರಲಿದೆ. ಪೀಠ ಈ ಕೆಳಗಿನ ಪ್ರಕರಣಗಳನ್ನು ಆಲಿಸಲಿದೆ:
ನೇಮಕಾತಿ ಆಯ್ಕೆ ಪ್ರಕ್ರಿಯೆಯು ಪ್ರಾರಂಭವಾದ ನಂತರ ಸರ್ಕಾರದ ಅಂಗಗಳು ಅರ್ಹತಾ ನಿಯಮ ಬದಲಿಸಬಹುದೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸಲಿದೆ.
ಪ್ರಕರಣವನ್ನು ಈ ಹಿಂದೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು, ಆದರೆ ಕಳೆದ ವರ್ಷ ಸೆಪ್ಟೆಂಬರ್ 23ರಂದು ನ್ಯಾ. ಬ್ಯಾನರ್ಜಿ ಅವರು ನಿವೃತ್ತರಾದ ನಂತರ ಪೀಠವನ್ನು ವಿಸರ್ಜಿಸಲಾಯಿತು. ನಂತರ ಅದನ್ನು ಸಿಜೆಐ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತಾದರೂ ವಿಚಾರಣೆ ನಡೆದಿರಲಿಲ್ಲ. ಹೊಸದಾಗಿ ರಚನೆಯಾದ ಪೀಠದಲ್ಲಿ ಈಗ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರ ಸ್ಥಾನದಲ್ಲಿ ನ್ಯಾಯಮೂರ್ತಿ ಮಿತ್ತಲ್ ಇದ್ದಾರೆ.
ಪ್ರಕರಣದಲ್ಲಿ ವಿಚಾರಣೆ ನಡೆಯಲಿರುವ ಕಾನೂನು ಪ್ರಶ್ನೆಗಳು ಇಂತಿವೆ: ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್ 11ರ ಅಡಿಯ ಅರ್ಜಿಯಲ್ಲಿ ನ್ಯಾಯಾಲಯಗಳು ಮಧ್ಯಸ್ಥಗಾರರನ್ನು ನೇಮಿಸುವ ಒಪ್ಪಿತ ಕಾರ್ಯವಿಧಾನದಿಂದ ವಿಮುಖಗೊಳ್ಳಬಹುದೇ?
ನಿವೃತ್ತ ನೌಕರರು ತಮ್ಮ ಹಿಂದಿನ ಉದ್ಯೋಗದಾತರನ್ನು ಒಳಗೊಂಡ ಪ್ರಕರಣಗಳಲ್ಲಿ ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸಲು ಅನರ್ಹರಾಗಿದ್ದಾರೆಯೇ?
ಇಲ್ಲಿ ಸಾಂವಿಧಾನಿಕ ಪೀಠ ಆಲಿಸಲಿರುವ ಪ್ರಶ್ನೆ ಈ ರೀತಿ ಇದೆ: ʼಲಘು ಮೋಟಾರು ವಾಹನʼ ಕ್ಕೆ ಸಂಬಂಧಿಸಿದಂತೆ ಚಾಲನಾ ಪರವಾನಗಿ ಪಡೆದಿರುವ ವ್ಯಕ್ತಿಯು, ಆ ಪರವಾನಗಿಯ ಬಲದ ಮೇಲೆ, 7500 ಕೆಜಿ ಮೀರದ ಭಾರವುಳ್ಳ 'ಲಘು ಮೋಟಾರು ವಾಹನ ವರ್ಗದ ಸಾರಿಗೆ ವಾಹನ' ಚಲಾಯಿಸಲು ಅರ್ಹರಾಗಬಹುದೇ?".
ಮೋಟಾರು ವಾಹನ ಕಾಯಿದೆಯ ವಿವಿಧ ನಿಯಮಾವಳಿಗಳ ಪ್ರಕಾರ ಎರಡು ವರ್ಗಗಳ ಅಡಿಯಲ್ಲಿ ಪರವಾನಗಿ ಪಡೆಯಲು ಚಾಲಕರ ಅರ್ಹತೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ವ್ಯತ್ಯಾಸಗಳಿರುವುದರಿಂದ ಪ್ರಕರಣ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಕದ ತಟ್ಟಿದೆ.
ಪ್ರಕರಣದಲ್ಲಿ ಉದ್ಭವಿಸಿರುವ ಸವಾಲು ಇಂತಿದೆ: ಒಬ್ಬ ವ್ಯಕ್ತಿಯು ಖುದ್ದು ಮಧ್ಯಸ್ಥಗಾರನಾಗಲು ಅನರ್ಹನಾಗಿರುವಾಗ ತಾನೇ ಮತ್ತೊಬ್ಬ ಮಧ್ಯಸ್ಥಗಾರನನ್ನು ನೇಮಿಸಬಹುದೇ?
[ನೋಟಿಸ್ ಪ್ರತಿಯನ್ನು ಇಲ್ಲಿ ಓದಿ]