Sudhir Chaudhary, Aj tak and Karnataka HC
Sudhir Chaudhary, Aj tak and Karnataka HC 
ಸುದ್ದಿಗಳು

ಕೋಮು ಸಾಮರಸ್ಯಕ್ಕೆ ಧಕ್ಕೆ ಪ್ರಕರಣ: ಎಫ್‌ಐಆರ್‌ಗೆ ತಡೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಸುಧೀರ್‌ ಚೌಧರಿ, ಆಜ್‌ತಕ್‌

Bar & Bench

ಕರ್ನಾಟಕ ಸರ್ಕಾರದ ʼಸ್ವಾವಲಂಬಿ ಸಾರಥಿ ಯೋಜನೆʼಯ ಕುರಿತು ಅಪಪ್ರಚಾರ, ಕೋಮು ಪ್ರಚೋದನೆ ಮತ್ತು ಸುಳ್ಳು ಸುದ್ದಿ ಭಿತ್ತರಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ಗೆ ವಜಾ ಮಾಡುವಂತೆ ಕೋರಿ ದೆಹಲಿಯ ಆಜ್‌ ತಕ್‌ ಹಿಂದಿ ವಾಹಿನಿ ಪ್ರಧಾನ ಸಂಪಾದಕ ಸುಧೀರ್‌ ಚೌಧರಿ ಮತ್ತು ಆಜ್‌ತಕ್‌ ಸುದ್ದಿ ವಾಹಿನಿಯಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದ್ದು. ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಇಂದು ನಡೆಸಲಿದೆ.

ಅರ್ಜಿ ವಿಚಾರಣೆಯು ಇಂದು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ನೇತೃತ್ವದ ಏಕಸದಸ್ಯ ಪೀಠದ ಮುಂದೆ ನಡೆಯಲಿದೆ. ಸುಧೀರ್‌ ಚೌಧರಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದು, ಆಜ್‌ ತಕ್‌ ನ್ಯೂಸ್‌ ಚಾನಲ್‌, ಆಜ್‌ ತಕ್‌ ನ್ಯೂಸ್‌ ಚಾನಲ್‌ ಅರ್ಗನೈಸರ್‌ ಮತ್ತು ಟಿ ವಿ ಟುಡೇ ನೆಟ್‌ವರ್ಕ್‌ ಲಿಮಿಟೆಡ್‌ ಪರವಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆಯಾಗಿದೆ. ವಕೀಲ ಬಿ ಪ್ರಮೋದ್‌ ಅವರು ವಕಾಲತ್ತು ಹಾಕಿದ್ದಾರೆ.

ಪ್ರಕರಣದ ಹಿನ್ನೆಲೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ವಿವಿಧ ಯೋಜನೆಗಳ ಅಡಿ ಸಾಲ-ಸೌಲಭ್ಯ ಕಲ್ಪಿಸುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳು ಬ್ಯಾಂಕ್‌ ಮೂಲಕ ಸಾಲ ಪಡೆದು ಟ್ಯಾಕ್ಸಿ/ಗೂಡ್ಸ್‌ ವಾಹನ/ ಆಟೊರಿಕ್ಷಾ ಖರೀದಿಸಲು ಬಯಸಿದ್ದಲ್ಲಿ ನಿಗಮದಿಂದ ಶೇ. 50ರಷ್ಟು, ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇತರೆ ಜಾತಿಯ ನಿಗಮಗಳಲ್ಲಿ ಅನುಷ್ಠಾನದಲ್ಲಿದೆ.

ಆದರೆ, ಸೆಪ್ಟೆಂಬರ್‌ 11ರಂದು ರಾತ್ರಿ 9.55ರ ವೇಳೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯಾದ ಆಜ್‌ ತಕ್‌ನಲ್ಲಿ ಅದರ ಪ್ರಧಾನ ಸಂಪಾದಕ ಸುಧೀರ್‌ ಚೌಧರಿ ಅವರು ಯೋಜನೆಯ ಪ್ರಯೋಜನವನ್ನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಕರ್ನಾಟಕ ಸರ್ಕಾರದಿಂದ ನೀಡಲಾಗುತ್ತಿದೆ. ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಈ ಯೋಜನೆ ನೀಡದೇ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲದ ಬಡ ಹಿಂದೂಗಳಿಗೆ ಅನ್ಯಾಯವಾಗಿರುತ್ತದೆ ಎಂದು ಕೋಮು ಪ್ರಚೋದನಾಕಾರಿ ಸುದ್ದಿ ಪ್ರಸಾರ ಮಾಡುವ ಮೂಲಕ ಹಿಂದೂ ಧರ್ಮ ಮತ್ತು ಇತರ ಧರ್ಮಗಳ ನಡುವೆ ದ್ವೇಷ ಹರಡುವ, ಅಶಾಂತಿಯ ವಾತಾವರಣ ಮತ್ತು ಕೋಮು ಗಲಭೆ ನಡೆಸಲು ಪ್ರಚೋದನೆ ನೀಡಿರುತ್ತಾರೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್‌ ಶಿವಕುಮಾರ್‌ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿದ್ದರು.

ಅಲ್ಲದೇ, ಚೌಧರಿ ಅವರು ತಾವಾಡುವ ಮಾತುಗಳ ಬಗ್ಗೆ ಸ್ಪಷ್ಟ ಅರಿವಿದ್ದರೂ ಸುಳ್ಳು ಸುದ್ದಿ ಬಿತ್ತರಿಸಿ, ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಸಂಚು ಮಾಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಯ ಬಗ್ಗೆ ಸುಳ್ಳು ಮತ್ತು ಕೋಮು ಪ್ರಚೋದನಕಾರಿ ಸುದ್ದಿ ಬಿತ್ತರಿಸಿದ ಆಜ್‌ ತಕ್‌ ಸುದ್ದಿ ವಾಹಿನಿ ಮತ್ತು ಅದರ ಮುಖ್ಯ ಸಂಪಾದಕ ಸುಧೀರ್‌ ಚೌಧರಿ ಹಾಗೂ ಕಾರ್ಯಕ್ರಮ ಆಯೋಜಿಸಿರುವ ಆಜ್‌ ತಕ್‌ ವಾಹಿನಿಯ ಸಂಘಟಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್‌ ಶಿವಕುಮಾರ್‌ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನು ಆಧರಿಸಿ ಸುಧೀರ್‌ ಚೌಧರಿ, ಆಜ್‌ ತಕ್‌ ಸುದ್ದಿ ವಾಹಿನಿ, ವಾಹಿನಿಯ ಸಂಘಟಕರನ್ನು ಕ್ರಮವಾಗಿ ಮೂವರು ಆರೋಪಿಗಳನ್ನಾಗಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್‌ 153ಎ ಮತ್ತು 505 ಅಡಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಮಧ್ಯಂತರ ಪರಿಹಾರದ ಭಾಗವಾಗಿ ತಡೆ ಕೋರಲಾಗಿದೆ.