NCLAT 
ಸುದ್ದಿಗಳು

ಎನ್ಎಫ್ಆರ್‌ಎ ಸ್ಥಾಪನೆಗೂ ಮೊದಲಿನ ಲೆಕ್ಕಪರಿಶೋಧನೆ ಅವ್ಯವಹಾರಗಳನ್ನು ಅದು ತನಿಖೆ ಮಾಡಬಹುದು: ಎನ್‌ಸಿಎಲ್‌ಎಟಿ

ಚಾರ್ಟರ್ಡ್‌ ಅಕೌಂಟೆಂಟ್‌ಗಳ ಶಿಸ್ತು ವಿಚಾರದಲ್ಲಿ ಐಸಿಎಐಗಿಂತಲೂ ಎನ್‌ಎಫ್‌ಆರ್‌ಎಗೆ ಪರಮ ಮತ್ತು ಉನ್ನತಾಧಿಕಾರ ಇರುತ್ತದೆ ಎಂದಿದೆ ನ್ಯಾಯಮಂಡಳಿ.

Bar & Bench

ಹಣಕಾಸು ಲೆಕ್ಕಪರಿಶೋಧಕರ ದುಷ್ಕೃತ್ಯದ ಆರೋಪಗಳ ಬಗ್ಗೆ ಪೂರ್ವಾನ್ವಯವಾಗುವಂತೆ ತನಿಖೆ ಮಾಡುವ ಅಧಿಕಾರ ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರಕ್ಕೆ (ಎನ್ಎಫ್ಆರ್‌ಎ) ಇದೆ ಎಂದು ದೆಹಲಿಯ ರಾಷ್ಟ್ರೀಯ ಕಂಪನಿ ಮೇಲ್ಮನವಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಶುಕ್ರವಾರ ತೀರ್ಪು ನೀಡಿದೆ.

ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಲೆಕ್ಕಪರಿಶೋಧಕರ ವೃತ್ತಿಪರ ಅವ್ಯವಹಾರ ಆರೋಪಗಳನ್ನು ತನಿಖೆ ಮಾಡಲು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಸಮಕಾಲೀನ ಶಿಸ್ತು ಅಧಿಕಾರ ಹೊಂದಿದ್ದರೂ 2013ರ ಕಂಪೆನಿ ಕಾಯಿದೆಯ ಸೆಕ್ಷನ್ 132 (4) ರಲ್ಲಿ ಸೂಚಿಸಿರುವಂತೆ ಎನ್‌ಎಫ್‌ಆರ್‌ಎ ಕೆಲ ವಿಷಯಗಳಲ್ಲಿ ಪರಮ ಮತ್ತು ಉನ್ನತಾಧಿಕಾರ ಹೊಂದಿದೆ ಎಂದು ನ್ಯಾಯಾಂಗ ಸದಸ್ಯ ರಾಕೇಶ್ ಕುಮಾರ್ ಜೈನ್ ಮತ್ತು ತಾಂತ್ರಿಕ ಸದಸ್ಯ ನರೇಶ್ ಸಲೇಚಾ ಹೇಳಿದರು.

ಸಾರ್ವಜನಿಕ ಕಂಪನಿಯ ಹದಿನೇಳು ಶಾಖೆಗಳಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್ಎಫ್ಎಲ್) ಗಾಗಿ ಶಾಖಾ ಲೆಕ್ಕಪರಿಶೋಧನೆ ನಡೆಸುವಲ್ಲಿ ಎಸಗಿದ ಲೋಪಗಳಿಗಾಗಿ ಎನ್ಎಫ್ಆರ್‌ಎ ವಿಧಿಸಿದ ದಂಡ ಪ್ರಶ್ನಿಸಿ ಚಾರ್ಟರ್ಡ್ ಅಕೌಂಟೆಂಟ್‌ಗಳು ಸಲ್ಲಿಸಿದ್ದ ನಾಲ್ಕು ಮೇಲ್ಮನವಿಗಳನ್ನು ವಜಾಗೊಳಿಸುವಾಗ ಈ ತೀರ್ಪು ನೀಡಲಾಗಿದೆ.

ಡಿಎಚ್ಎಫ್ಎಲ್‌ನ ಪ್ರವರ್ತಕರು ಮತ್ತು ನಿರ್ದೇಶಕರು 31,000 ಕೋಟಿ ರೂಪಾಯಿ ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡಿದ್ದು ಜಾರಿ ನಿರ್ದೇಶನಾಲಯ (ಇ ಡಿ ಅವರ ವಿರುದ್ಧ ಸುಮಾರು 3,700 ಕೋಟಿ ರೂಪಾಯಿಗಳ ಬ್ಯಾಂಕಿಂಗ್ ವಂಚನೆ ವರದಿ ಮಾಡಿದೆ ಎಂಬ ಸುದ್ದಿ ಹೊರಬಂದ ನಂತರ ನಾಲ್ವರು ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಎನ್‌ಎಫ್‌ಆರ್‌ಎ ಶೋಕಾಸ್ ನೋಟಿಸ್ ನೀಡಿತ್ತು.

ಹೀಗಾಗಿ, ಲೆಕ್ಕಪರಿಶೋಧನಾ ಗುಣಮಟ್ಟ ಪರಿಶೀಲನೆ ಆರಂಭಿಸಿದ ಎನ್ಎಫ್ಆರ್‌ಎ, ನಾಲ್ವರು ಚಾರ್ಟರ್ಡ್ ಅಕೌಂಟೆಂಟ್‌ಗಳು (ಸಿಎ) ಲೆಕ್ಕಪರಿಶೋಧನೆಯ ಮಾನದಂಡಗಳನ್ನು ಅನುಸರಿಸುವಲ್ಲಿ ಲೋಪ ಎಸಗಿದ್ದಾರೆ ಎಂದು ಕಂಡುಕೊಂಡಿತು. ಈ ಹಿನ್ನೆಲೆಯಲ್ಲಿ ಆ ಲೆಕ್ಕ ಪರಿಶೋಧಕರು ₹ 1 ಲಕ್ಷ ದಂಡ ದಂಡ ಪಾವತಿಸಬೇಕು, ಒಂದು ವರ್ಷದವರೆಗೆ ಲೆಕ್ಕ ಪರಿಶೋಧನಾ ಕಾರ್ಯ ನಡೆಸಬಾರದು ಎಂದು ಸೂಚಿಸಿತು. ಇದನ್ನು ಆ ನಾಲ್ವರು ಎನ್‌ಸಿಎಲ್‌ಎಟಿಯಲ್ಲಿ ಪ್ರಶ್ನಿಸಿದ್ದರು.

ಡಿಸೆಂಬರ್ 1 ರಂದು 156 ಪುಟಗಳ ಆದೇಶ ನೀಡಿದ ಎನ್‌ಸಿಎಲ್‌ಎಟಿ ಎಲ್ಲಾ ನಾಲ್ಕು ಮೇಲ್ಮನವಿಗಳನ್ನು ವಜಾಗೊಳಿಸಿ ಎನ್‌ಎಫ್‌ಆಎ ತೀರ್ಪನ್ನು ಎತ್ತಿ ಹಿಡಿದಿದೆ. ಎನ್‌ಸಿಎಲ್‌ಎಟಿ ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಈ ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ:

1. ಚಾರ್ಟರ್ಡ್‌ ಅಕೌಂಟೆಂಟ್‌ಗಳ ಶಿಸ್ತು ವಿಚಾರದಲ್ಲಿ ಐಸಿಎಐಗಿಂತಲೂ ಎನ್‌ಎಫ್‌ಆರ್‌ಎಗೆ ಪರಮ ಮತ್ತು ಉನ್ನತಾಧಿಕಾರ ಇರುತ್ತದೆ.

2. ಎನ್ಎಫ್ಆರ್‌ಎಗೆ ಪೂರ್ವಾನ್ವಯ ಅಧಿಕಾರವಿದ್ದು ಆ ಸಂಸ್ಥೆ ಸ್ಥಾಪನೆಗೂ ಮೊದಲಿನ ಲೆಕ್ಕಪರಿಶೋಧನೆ ಅವ್ಯವಹಾರಗಳನ್ನು ಅದು ತನಿಖೆ ಮಾಡಬಹುದು.

3. ಎನ್‌ಎಫ್‌ಆರೆ ತನಿಖೆ ನಡೆಸಬಹುದೇ ಮತ್ತು ತೀರ್ಪ ನಡೆಸಬಹುದೇ ಎಂಬುದನ್ನು ವಿಭಜಿಸದೇ ಇರುವುದರಿಂದ ಸ್ವಾಭಾವಿಕ ನ್ಯಾಯದ ಉಲ್ಲಂಘನೆ ಆಗಿಲ್ಲ.

4. ಕಂಪನಿಯ ಒಟ್ಟಾರೆ ಲೆಕ್ಕಪರಿಶೋಧನೆಗೆ ಶಾಖಾ ಲೆಕ್ಕಪರಿಶೋಧಕರ ಪಾತ್ರವೂ ನಿರ್ಣಾಯಕ.

5. ಲೆಕ್ಕಪರಿಶೋಧನೆಯ ಮಾನದಂಡಗಳನ್ನು ಅನುಸರಿಸುವುದು (ಎಸ್ಎ) ಕಡ್ಡಾಯವಾಗಿದ್ದು ಅವು ಲೆಕ್ಕಪರಿಶೋಧಕರ ಪಾಲಿಗೆ ಕೇವಲ ಸಲಹೆ ಅಥವಾ ಮಾರ್ಗಸೂಚಿಗಳಲ್ಲ.

6. ʼʼವೃತ್ತಿಪರ ಅವ್ಯವಹಾರʼಕ್ಕೆ ಮಾತ್ರ ತನಿಖೆ ಸೀಮಿತಗೊಳಿಸಲು ಐಸಿಎಐ ಅಥವಾ ಎನ್ಎಫ್ಆರ್‌ಎಗೆ ಯಾವುದೇ ನಿರ್ಬಂಧವಿಲ್ಲ .

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Harish Kumar TK and ors v. NFRA.pdf
Preview