National Green Tribunal (NGT) 
ಸುದ್ದಿಗಳು

ಬೆಂಗಳೂರಿನ ಚಂದಾಪುರ ಕೆರೆ ರಕ್ಷಣೆ ಮಾಡುವಲ್ಲಿ ವಿಫಲ: ರಾಜ್ಯ ಸರ್ಕಾರಕ್ಕೆ ₹500 ಕೋಟಿ ದಂಡ ವಿಧಿಸಿದ ಎನ್‌ಜಿಟಿ

ಕೆರೆಯ ಹಾನಿಗೆ ರಾಜ್ಯದ ಅಧಿಕಾರಿಗಳ ನಿಷ್ಕ್ರಿಯತೆಯೇ ಕಾರಣ ಎಂದು ನ್ಯಾಯಮಂಡಳಿಯು ಆದೇಶದಲ್ಲಿ ಹೇಳಿದೆ.

Bar & Bench

ಬೆಂಗಳೂರಿನ ಚಂದಾಪುರ ಕೆರೆಯನ್ನು ಸಮರ್ಥವಾಗಿ ನಿರ್ವಹಿಸಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಈಚೆಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ₹500 ಕೋಟಿ ದಂಡ ವಿಧಿಸಿ ಮಹತ್ವದ ಆದೇಶ ಮಾಡಿದೆ.

ʼದಿ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ 2021ರಲ್ಲಿ ಸ್ವಯಂಪ್ರೇರಿತವಾಗಿ ಎನ್‌ಜಿಟಿ ಪ್ರಕರಣ ದಾಖಲಿಸಿಕೊಂಡಿತ್ತು. ಕೆರೆಗೆ ಸಂಬಂಧಿಸಿದಂತೆ ಬಫರ್‌ ವಲಯ ಉಲ್ಲಂಘನೆ ಮತ್ತು ಘನ ತ್ಯಾಜ್ಯ ವಿಲೇವಾರಿ ಕುರಿತು ಪರಿಶೀಲಿಸಲು ನ್ಯಾಯ ಮಂಡಳಿಯು ಏಳು ಸದಸ್ಯರ ಜಂಟಿ ಸಮಿತಿಯನ್ನು ರಚಿಸಿತ್ತು.

ರಾಜ್ಯ ಸರ್ಕಾರದ ಸಂಬಂಧಿತ ಪ್ರಾಧಿಕಾರಗಳ ನಿಷ್ಕ್ರಿಯತೆಯೇ ಕೆರೆಗೆ ಹಾನಿಯಾಗಿರುವುದಕ್ಕೆ ಕಾರಣ ಎಂದು ನ್ಯಾಯಮೂರ್ತಿಗಳಾದ ಆದರ್ಶ್‌ ಕುಮಾರ್‌ ಗೋಯಲ್‌ ಮತ್ತು ಸುಧೀರ್‌ ಅಗರ್ವಾಲ್‌ ಹಾಗೂ ಸಮಿತಿಯ ತಜ್ಞರಾದ ಪ್ರೊ. ಎ ಸೆಂಥಿಲ್‌ ವೇಲ್‌ ಮತ್ತು ಡಾ. ಅಫ್ರೋಜ್‌ ಅಹ್ಮದ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

“ರಾಜ್ಯ ಸರ್ಕಾರದ ಸೂಚನೆಯಂತೆ ಸಿದ್ಧಪಡಿಸಲಾಗಿರುವ ತಜ್ಞರ ವರದಿಯಲ್ಲಿ ಆಕ್ಷೇಪಿತ ಕೆರೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಸಂಬಂಧಿತ ಪ್ರಾಧಿಕಾರಗಳ ನಿಷ್ಕ್ರಿಯತೆಯೇ ಕಾರಣ. ಕೆರೆಯ ಸಮೀಪ ಅಕ್ರಮವಾಗಿ ಒತ್ತುವರಿ ಮತ್ತು ನಿರ್ಮಾಣ ಚಟುವಟಕೆಗಳನ್ನು ನಡೆಸಲಾಗುತ್ತಿದ್ದು, ಕೈಗಾರಿಕೆಗಳು ಪರಿಸರ ರಕ್ಷಣೆ ನಿಯಮಗಳನ್ನು ಗಾಳಿಗೆ ತೂರಿವೆ. ಬಫರ್ ವಲಯ ಮತ್ತು ಕೆರೆಯ ಜಲಾನಯನ ಪ್ರದೇಶವನ್ನು ರಕ್ಷಿಸುವ ಮೂಲಕ ಮಾಲಿನ್ಯ ನಿಯಂತ್ರಿಸಲಾಗಿಲ್ಲ” ಎಂದು ಎನ್‌ಜಿಟಿ ಆದೇಶದಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಕೆಲವು ನಿರ್ದೇಶನಗಳನ್ನು ನೀಡಿದ್ದರೂ ವಾಸ್ತವಿಕವಾಗಿ ಯಾವುದೇ ರೀತಿಯಲ್ಲೂ ಕೆರೆಗೆ ಉಂಟು ಮಾಡಲಾಗಿರುವ ಹಾನಿಯ ಬಗ್ಗೆಯಾಗಲಿ, ಹಿಂದಿನ ಉಲ್ಲಂಘನೆಗೆ ಸಂಬಂಧಿಸಿದಂತೆ ಹೊಣೆಗಾರಿಕೆ ನಿಗದಿ ಮಾಡುವುದಾಗಲಿ, ಉಲ್ಲಂಘನೆ ಮಾಡಿರುವ ಕೈಗಾರಿಕೆಗಳಿಂದ ದಂಡ ವಸೂಲಿ ಮಾಡಿರುವ ಅನುಪಾಲನಾ ವರದಿಯನ್ನಾಗಲಿ ಸಲ್ಲಿಸಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಹಾನಿ ಮುಂದುವರಿಕೆಯು ಸ್ಪಷ್ಟವಾಗಿ ಸಾರ್ವಜನಿಕ ನಂಬಿಕೆ ತತ್ವದ ಉಲ್ಲಂಘನೆಯಾಗಿದ್ದು, ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಹೊಣೆಗಾರಿಕೆ ನಿಗದಿ ಮಾಡಬೇಕಿದೆ ಎಂದು ಹೇಳಲಾಗಿದೆ. “ಜೀವಿಸುವ ಹಕ್ಕು ಮತ್ತು 'ಸುಸ್ಥಿರ ಅಭಿವೃದ್ಧಿ' ತತ್ವವನ್ನು ಜಾರಿಗೊಳಿಸಲು, ಪರಿಸರವನ್ನು ರಕ್ಷಿಸಲು ಮತ್ತು ನಾಗರಿಕರಿಗೆ ಸ್ವಚ್ಛ ಪರಿಸರವನ್ನು ಒದಗಿಸಲು ರಾಜ್ಯ ಸರ್ಕಾರವು ವಿಫಲವಾಗಿದೆ. ಕೆರೆಯ ಪರಿಸರ ಮತ್ತು ಪರಿಸರ ವ್ಯವಸ್ಥೆಗೆ ಅಪಾರ ಹಾನಿಯಾಗಿದೆ” ಎಂದು ಹೇಳಲಾಗಿದೆ.

ಹೀಗಾಗಿ, ಕೆರೆ ಪರಿಸರಕ್ಕೆ ಆಗಿರುವ ನಷ್ಟ ಮತ್ತು ಪರಿಸರ ವ್ಯವಸ್ಥೆಗೆ ಹಾಗಿರುವ ಹಾನಿಯನ್ನು ಪುನರ್‌ ಸ್ಥಾಪಿಸಲು ರಾಜ್ಯ ಸರ್ಕಾರ ದಂಡ ಪಾವತಿಸಬೇಕಿದೆ. ನಿಯಮ ಉಲ್ಲಂಘಿಸಿರುವ ಕೈಗಾರಿಕೆಗಳು, ಒತ್ತುವರಿದಾರರು ಮತ್ತು ಕರ್ತವ್ಯ ನಿರ್ವಹಿಸಲು ವಿಫಲವಾಗಿರುವ ಅಧಿಕಾರಿಗಳು ಮತ್ತು ಕಾನೂನು ಪಾಲಿಸಲು ವಿಫಲವಾಗಿರುವವರಿಂದ ದಂಡ ವಸೂಲಿ ಮಾಡಿಕೊಳ್ಳಲು ಸರ್ಕಾರ ಮುಕ್ತವಾಗಿದೆ ಎಂದು ಪೀಠ ಹೇಳಿದೆ.

ಖಚಿತ ದತ್ತಾಂಶದ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ₹500 ಪರಿಹಾರ ಮೊತ್ತ ಪಾವತಿಸಲು ನಿರ್ದೇಶಿಸಲಾಗಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನೂ ಒಳಗೊಂಡ ಮುಖ್ಯ ಕಾರ್ಯದರ್ಶಿ ಅಧೀನಕ್ಕೆ ಒಳಪಟ್ಟ ಖಾತೆಗೆ ಒಂದು ತಿಂಗಳಲ್ಲಿ ಪರಿಹಾರದ ಮೊತ್ತವನ್ನು ಠೇವಣಿ ಇಡಬೇಕು ಎಂದು ಆದೇಶಿಸಲಾಗಿದೆ.

ಕೆರೆ ಪುನರುಜ್ಜೀವನಕ್ಕೆ ಅನುದಾನ ಕೊರತೆಯಾದರೆ ಹೆಚ್ಚುವರಿಯಾಗಿ ಹಣ ಒದಗಿಸಲು ರಾಜ್ಯ ಸರ್ಕಾರ ಹೊಣೆಯಾಗಿರುತ್ತದೆ. “ಪರಿಸರ ಅವನತಿಯ ಹಾದಿಯಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮತ್ತಷ್ಟು ಸಕ್ರಿಯವಾಗಿವಾಗಿರಬೇಕಿದೆ. ಒಂದು ತಿಂಗಳಲ್ಲಿ ರಾಜ್ಯ ಸರ್ಕಾರವು ನಿಖರ ದತ್ತಾಂಶ ಒದಗಿಸಿ, ಪರಿಹಾರದಲ್ಲಿ ವ್ಯತ್ಯಾಸಕ್ಕೆ ಸಂಬಂಧಿಸಿದ್ದನ್ನು ಸಮರ್ಥಿಸಿದರೆ ಪರಿಹಾರದ ಮೊತ್ತವನ್ನು ಮತ್ತೊಮ್ಮೆ ಪರಿಗಣಿಸಲಾಗುವುದು” ಎಂದೂ ಪೀಠವು ಆದೇಶದಲ್ಲಿ ಹೇಳಿದೆ.