National Green Tribunal (NGT) 
ಸುದ್ದಿಗಳು

ದೇಶದಲ್ಲಿ ಮುಳುಗಡೆಯಾಗುತ್ತಿರುವ ದ್ವೀಪಗಳ ರಕ್ಷಣೆಗೆ ನೀತಿ ರೂಪಿಸಲು ಸಮಿತಿ ರಚಿಸಿದ ಎನ್‌ಜಿಟಿ

ತಾಪಮಾನ ಏರಿಕೆಯಿಂದಾಗಿ ಹಿಮನದಿಗಳ ಕರಗುವಿಕೆ, ಸಮುದ್ರ ಮಟ್ಟದಲ್ಲಿ ಏರಿಕೆ, ಮೇಘಸ್ಫೋಟ ಹಾಗೂ ಜಾಗತಿಕ ಹವಾಮಾನ ವೈಪರೀತ್ಯದಲ್ಲಿ ಹೆಚ್ಚಳ ಉಂಟಾಗುತ್ತಿದೆ ಎಂದು ಎನ್ಜಿಟಿ ಕಳವಳ ವ್ಯಕ್ತಪಡಿಸಿದೆ.

Bar & Bench

ಸಮುದ್ರ ಮಟ್ಟದ ಏರಿಕೆಯಿಂದ ದ್ವೀಪಗಳ ಮೇಲೆ ಉಂಟಾಗುವ ಪರಿಣಾಮ ಅಧ್ಯಯನ ಮಾಡಲು, ದ್ವೀಪಗಳ ಮುಳುಗಡೆ, ಸವಕಳಿ, ಲವಣಯುಕ್ತ ನೀರಿನ ನುಗ್ಗುವಿಕೆ, ಪ್ರವಾಹ ಮತ್ತಿತರ ಪ್ರತಿಕೂಲ ಅಂಶಗಳಿಂದ ಅವುಗಳನ್ನು ರಕ್ಷಿಸುವ ಬಗ್ಗೆ ಅಭ್ಯಸಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಂಗಳವಾರ ಸಮಿತಿಯೊಂದನ್ನು ರಚಿಸಿದೆ.

ಪತ್ರಿಕಾ ವರದಿಯೊಂದನ್ನು ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಎನ್‌ಜಿಟಿ, ಸಮಿತಿ ರಚನೆಗೆ ಆದೇಶ ನೀಡಿದೆ.

ಭೂ ವಿಜ್ಞಾನ ಸಚಿವಾಲಯ ನೀಡಿರುವ ಪ್ರತಿಕ್ರಿಯೆಯಂತೆ 1901 ಮತ್ತು 2021ರ ನಡುವೆ ಭಾರತದ ಸರಾಸರಿ ತಾಪಮಾನ ಸುಮಾರು 0.63 ° ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ ಎಂದು ಅಧ್ಯಕ್ಷರಾದ ನ್ಯಾಯಮೂರ್ತಿ ಶಿಯೋ ಕುಮಾರ್ ಸಿಂಗ್, ನ್ಯಾಯಾಂಗ ಸದಸ್ಯ, ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ಪರಿಣತ ಸದಸ್ಯ ಪ್ರೊ. ಎ ಸೆಂಥಿಲ್ ವೇಲ್ ಅವರಿದ್ದ ಪೀಠ ತಿಳಿಸಿತು.

ಹಸಿರು ಮನೆ ಪರಿಣಾಮದಿಂದ ಸೃಷ್ಟಿಯಾಗುವ ಅನಿಲಗಳಿಂದಾಗಿ ಮತ್ತು ಮಾನವರಿಂದ ಕೃತಕವಾಗಿ ಸೃಷ್ಟಿಯಾಗುವ ಏರೋಸಾಲ್‌ಗಳಿಂದಾಗಿ (ಗಾಳಿಯಲ್ಲಿ ತೇಲುವ ಘನ ಅಥವಾ ದ್ರವರೂಪಿ ಕಣಗಳು) ತಾಪಮಾನ ಏರಿಕೆಗೆ ಕಾರಣ ಎಂದು ನ್ಯಾಯಮಂಡಳಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಗೋವಾದ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆ (ಎನ್ಐಒ), ಚೆನ್ನೈನಲ್ಲಿರುವ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರ ಹಾಗೂ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ ಜೊತೆಗೆ ಡೆಹ್ರಾಡೂನ್‌ನಲ್ಲಿರುವ ಭಾರತ ಸರ್ವೇಕ್ಷಣಾ ಸಂಸ್ಥೆಯ ನಿರ್ದೇಶಕರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದೆ.

ದ್ವೀಪಗಳ ಸುತ್ತಲಿನ ಸಮುದ್ರ ಮಟ್ಟ ಏರಿಕೆಯಿಂದ ಉಂಟಾಗುವ ಪರಿಣಾಮದ ಅಧ್ಯಯನ ಮಾಡಲು ಮತ್ತು ದ್ವೀಪಗಳನ್ನು ರಕ್ಷಿಸುವುದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನೀತಿ ರೂಪಿಸಲು ಸಮಿತಿಗೆ ಸೂಚನೆ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 13ರಂದು ನಡೆಯಲಿದೆ.