ಅಸ್ತಿತ್ವದಲ್ಲಿಯೇ ಇರದ ಕಾರ್ಖಾನೆಯ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೊಬ್ಬರಿಗೆ ದೆಹಲಿಯಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ₹ 25,000 ದಂಡ ವಿಧಿಸಿದೆ [ವಸೀಮ್ ಅಹ್ಮದ್ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಬಹು ಕುಲುಮೆಗಳ ಬಳಕೆಯೂ ಸೇರಿದಂತೆ ವಿವಿಧ ರೀತಿಯ ಉತ್ಪಾದನಾ ಕ್ರಿಯೆಗಳನ್ನು ನಡೆಸುವ ಭಾರತ್ ಬ್ರಾಸ್ ಇಂಟರ್‌ನ್ಯಾಷನಲ್ ಕಾರ್ಖಾನೆ ಪರಿಸರಕ್ಕೆ ಹಾನಿಯಾಗುವಂತಹ ವಿಷಕಾರಿ ಪದಾರ್ಥಗಳನ್ನು ಹೊರಚೆಲ್ಲಿ ಪರಿಸರ ನಿಯಮ ಉಲ್ಲಂಘಿಸುತ್ತಿದೆ ಎಂದು ಅರ್ಜಿದಾರರಾದ ವಸೀಮ್ ಅಹ್ಮದ್ ಆರೋಪಿಸಿದ್ದರು.
ಆದರೆ ಅರ್ಜಿ ತಪ್ಪುದಾರಿಗೆಳೆಯುವಂತಹ ಸುಳ್ಳು ಸಂಗತಿಗಳನ್ನು ಆಧರಿಸಿದೆ. ಇದರಿಂದ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ನ್ಯಾಯಮೂರ್ತಿಗಳಾದ ಆದರ್ಶ್ ಕುಮಾರ್ ಗೋಯೆಲ್ ಮತ್ತು ಸುಧೀರ್ ಅಗರ್‌ವಾಲ್ ಹಾಗೂ ತಜ್ಞ ಸದಸ್ಯ ಪ್ರೊ. ಎ ಸೆಂಥಿಲ್ ವೇಲ್ ಅವರಿದ್ದ ಪೀಠ ಹೇಳಿದೆ.
ಕಳೆದ ಮಾರ್ಚ್‌ನಲ್ಲಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ (ಯುಪಿಪಿಸಿಬಿ), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಮೊರಾದಾಬಾದ್‌ನ ಜಿಲ್ಲಾಧಿಕಾರಿಯನ್ನು ಒಳಗೊಂಡ ಜಂಟಿ ಸಮಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡಬೇಕೆಂದು ಮಂಡಳಿ ಕೇಳಿತ್ತು.
ಸಮಿತಿ ಮೇ 9ರಂದು ವರದಿ ಸಲ್ಲಿಸಿದ್ದು, ಅರ್ಜಿದಾರರು ನೀಡಿದ ವಿಳಾಸದಲ್ಲಿ ಕಾರ್ಖಾನೆ ಅಸ್ತಿತ್ವದಲ್ಲಿಲ್ಲ ಎಂದು ತಿಳಿಸಲಾಯಿತು. ಅರ್ಜಿದಾರರು ಮಾಲೀಕ ಎಂದು ಆರೋಪಿಸಿರುವ ವ್ಯಕ್ತಿಯ ಮಾಲೀಕತ್ವದಲ್ಲಿ ಈ ಪ್ರದೇಶದಲ್ಲಿ ಯಾವುದೇ ಕಾರ್ಖಾನೆ ಇಲ್ಲ ಎಂದು ಅದು ಹೇಳಿತು. ಅರ್ಜಿದಾರರು ವರದಿಗೆ ವಿರೋಧ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಅರ್ಜಿ ತಪ್ಪುದಾರಿಗೆಳೆಯುವ ಸುಳ್ಳು ಸಂಗತಿಗಳನ್ನು ಆಧರಿಸಿದೆ ಎಂದು ಎನ್‌ಜಿಟಿ ತೀರ್ಮಾನಿಸಿತು.
ಹೀಗಾಗಿ ಅರ್ಜಿದಾರರಿಗೆ ಎನ್‌ಜಿಟಿ ₹ 25,000 ದಂಡ ವಿಧಿಸಿದ್ದು, ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹಣವನ್ನು ಠೇವಣಿ ಇರಿಸಲು ಸೂಚಿಸಿದೆ. ದಂಡ ಪಾವತಿಗೆ ವಿಫಲವಾದರೆ ಮಾಲಿನ್ಯ ನಿಯಂತ್ರಣ ಮಂಡಳಿ ಬಲವಂತದ ಕ್ರಮ ಕೈಗೊಳ್ಳಬಹುದು ಎಂದು ಅದು ತಿಳಿಸಿದೆ.