ಬೆಂಗಳೂರಿನ ಬಹುತೇಕ ಕಡೆ ನೀರಿನ ಬಿಕ್ಕಟ್ಟು ಎದುರಾಗಿರುವಾಗ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿತ ನೀರು ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೋಮವಾರ ಸ್ವಯಂ ಪ್ರೇರಿತವಾಗಿ ವಿಚಾರಣೆ ಆರಂಭಿಸಿದೆ.
'ನೀರಿನ ತೀವ್ರ ಬಿಕಟ್ಟಿನ ನಡುವೆಯೂ ಬೆಂಗಳೂರು ಕ್ರೀಡಾಂಗಣಕ್ಕೆ ಸಂಸ್ಕರಿತ ನೀರು ಸರಬರಾಜು' ಎಂಬ ಶೀರ್ಷಿಕೆಯ ಇಂಡಿಯಾ ಟುಡೆ ವರದಿಯನ್ನು ಆಧರಿಸಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ.ಎ ಸೆಂಥಿಲ್ ವೆಲ್ ಅವರಿದ್ದ ಎನ್‌ಜಿಟಿ ಪೀಠ ಪ್ರಕರಣ ದಾಖಲಿಸಿಕೊಂಡಿದೆ.
ವರದಿಯ ಪ್ರಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕೋರಿಕೆಯ ಮೇರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಕಬ್ಬನ್ ಪಾರ್ಕ್ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸಲು ಅನುಮತಿ ನೀಡಿತ್ತು.
ಪ್ರಸ್ತುತ ಬೆಂಗಳೂರಿನಲ್ಲಿ ಮೂರು ಪಂದ್ಯಗಳನ್ನು ನಿಗದಿಪಡಿಸಲಾಗಿದ್ದು ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ದಿನಕ್ಕೆ ಅಂದಾಜು 75,000 ಲೀಟರ್ ನೀರು ಬೇಕಾಗುತ್ತದೆ ಎಂದು ವರದಿ ಗಮನ ಸೆಳೆದಿತ್ತು.
ಬೆಂಗಳೂರಿಗೆ ವಾಸ್ತವವಾಗಿ 2,600 ದಶಲಕ್ಷ ಲೀಟರ್ ನೀರು ಅಗತ್ಯವಿದ್ದು ಪ್ರಸ್ತುತ ದಿನಕ್ಕೆ 500 ದಶಲಕ್ಷ ಲೀಟರ್ ಕೊರತೆ ಎದುರಿಸುತ್ತಿದೆ. ನಗರದ 14,000 ಬೋರ್‌ವೆಲ್‌ಗಳಲ್ಲಿ 6,900 ಬತ್ತಿಹೋಗಿವೆ ಎಂದು ವರದಿ ಹೇಳಿತ್ತು.
ಇದಲ್ಲದೆ, ಕೆಡಬ್ಲ್ಯೂಎಸ್‌ಎಸ್‌ಬಿ ಬೆಂಗಳೂರಿನಲ್ಲಿ ಕಾರ್ ಸ್ವಚ್ಚತೆ, ಉದ್ಯಾನ, ನಿರ್ಮಾಣ ಮತ್ತು ನಿರ್ವಹಣಾ ಕಾಮಗಾರಿಗೆ ಕುಡಿಯುವ ನೀರಿನ ಬಳಕೆ ನಿಷೇಧಿಸಿದ್ದರೂ ಐಪಿಎಲ್ ಪಂದ್ಯಗಳಿಗೆ ಕ್ರೀಡಾಂಗಣದಲ್ಲಿ ಇಷ್ಟು ದೊಡ್ಡ ಪ್ರಮಾಣದ ನೀರನ್ನು ಬಳಸಲು ಅನುಮತಿ ನೀಡಿದೆ ಎಂದು ಅದು ಉಲ್ಲೇಖಿಸಿತ್ತು.
ಪರಿಸರ ನಿಯಮಗಳನ್ನು ಗಾಳಿಗೆ ತೂರಲಾಗಿರುವುದನ್ನು ವರದಿ ಹೇಳುತ್ತದೆ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಹೀಗಾಗಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಬಿಡಬ್ಲ್ಯೂಎಸ್‌ಎಸ್‌ಬಿ, ಕೆಎಸ್‌ಸಿಎ ಕಾರ್ಯದರ್ಶಿ ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದೆ.
ಕ್ರೀಡಾಂಗಣದಲ್ಲಿ ಅಂತರ್ಜಲವನ್ನು ಬಳಸುತ್ತಿದ್ದರೂ ಬಿಡಬ್ಲ್ಯೂಎಸ್‌ಎಸ್‌ಬಿ, ಕೆಎಸ್‌ಪಿಸಿಬಿ ಮತ್ತು ಜಿಲ್ಲಾಧಿಕಾರಿ ಬಳಿ ಆ ಬಗ್ಗೆ ಮಾಹಿತಿ ಇಲ್ಲ ಎಂಬುದನ್ನು ನ್ಯಾಯಮಂಡಳಿ ಗಮನಿಸಿತು.
ಆದ್ದರಿಂದ, ಕ್ರೀಡಾಂಗಣದಲ್ಲಿ ಬಳಸುತ್ತಿರುವ ನೀರಿನ ಪ್ರಮಾಣ ಮತ್ತು ಜಲಮೂಲದ ಸಂಪೂರ್ಣ ವಿವರಗಳನ್ನು ಮತ್ತು ಪೂರೈಸಿದ ಸಂಸ್ಕರಿಸಿದ ನೀರಿನ ಗುಣಮಟ್ಟದ ಬಗೆಗಿನ ವಿವರವಾದ ವರದಿ ಸಲ್ಲಿಸುವಂತೆ ಕೆಎಸ್‌ಸಿಎ ಕಾರ್ಯದರ್ಶಿಗೆ ಅದು ಸೂಚಿಸಿದೆ. ಮೇ 2ಕ್ಕೆ ಪ್ರಕರಣ ಮುಂದೂಡಲಾಗಿದೆ.
ಬಿಡಬ್ಲ್ಯೂಎಸ್‌ಎಸ್‌ಬಿ ಪರ ವಕೀಲ ಶ್ರೀನಿವಾಸ್ ಬಿಎಸ್ ವಾದ ಮಂಡಿಸಿದರು. ಕೆಎಸ್‌ಪಿಸಿಬಿಯನ್ನು ವಕೀಲ ಮುಖೇಶ್‌ಕುಮಾರ್ ಪ್ರತಿನಿಧಿಸಿದ್ದರು. ಕರ್ನಾಟಕ ಸರ್ಕಾರದ ಪರ ವಕೀಲರಾದ ದರ್ಪಣ್ ಕೆ.ಎಂ ಮತ್ತು ದುರ್ಗಾಪ್ರಕಾಶ್ ವಾದ ಮಂಡಿಸಿದರು.