ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 
ಸುದ್ದಿಗಳು

ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಭಾರ ಲೋಹ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಎನ್‌ಜಿಟಿ

Bar & Bench

ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳು ಭಾರ ಲೋಹದಿಂದ ಕಲುಷಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಂಗಳವಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಆಹಾರ ಮತ್ತು ಕೃಷಿ ಸಂಘಟನೆ (ಎಫ್ಎಒ) ನಿಗದಿಪಡಿಸಿದ ಅನುಮತಿಸಲಾದ ಮಿತಿಯನ್ನು ಮೀರಿ ತರಕಾರಿಗಳು ಕಲುಷಿತಗೊಂಡಿವೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ) ನಡೆಸಿದ ಅಧ್ಯಯನ ಆಧರಿಸಿ ಸುದ್ದಿತಾಣ ʼಒನ್‌ ಇಂಡಿಯಾʼ ಲೇಖನ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದೆ.

ತ್ಯಾಜ್ಯ ನೀರಿನಿಂದ ಬೆಳೆದ ತರಕಾರಿಗಳಲ್ಲಿ ಭಾರ ಲೋಹ ಕಂಡುಬಂದಿತ್ತು. ಕೊತ್ತಂಬರಿ ಮತ್ತು ಪಾಲಾಕ್‌ನಲ್ಲಿ ಕಬ್ಬಿಣದ ಸಾಂದ್ರತೆಯು ಸುಮಾರು ಎರಡು ಪಟ್ಟು ಹೆಚ್ಚಿದ್ದು ವಿಷಕಾರಿ ಭಾರಲೋಹ ಕ್ಯಾಡ್ಮಿಯಂ ಪ್ರತಿ ಕೆ.ಜಿ.ಗೆ 52.30 ಮಿಲಿ ಗ್ರಾಂನಷ್ಟು ಪತ್ತೆಯಾಗಿದೆ. ತರಕಾರಿಗಳಲ್ಲಿ ನಿಕ್ಕಲ್ ಪ್ರತಿ ಕೆ.ಜಿ.ಗೆ 67.9 ಮಿಲಿ ಗ್ರಾಂಗೂ ಹೆಚ್ಚಿದೆ ಎಂದು ಸುದ್ದಿತಾಣ ವರದಿ ಮಾಡಿತ್ತು.

ಇಎಂಪಿಆರ್‌ಐ ಅಧ್ಯಯನ ಮತ್ತದರ ಸಂಶೋಧನೆಗಳನ್ನು ಉಲ್ಲೇಖಿಸಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸಂಕ್ಷಿಪ್ತ ವರದಿ ಸಲ್ಲಿಸಿತ್ತು. ತರಕಾರಿಗಳಲ್ಲಿನ ಮಾಲಿನ್ಯ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು, ಅದರ ಮೂಲಗಳನ್ನು ಒಳಗೊಂಡ ಹೆಚ್ಚು ಸಮಗ್ರ ಮತ್ತು ಆಳವಾದ ಅಧ್ಯಯನ ರಾಜ್ಯ ಮಟ್ಟದಲ್ಲಿ ಅಗತ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಪರಿಸರಕ್ಕೆ ಸಂಬಂಧಿಸಿದ ಗಂಭೀರ ವಿಷಯ ವರದಿಯಲ್ಲಿ ಪ್ರಸ್ತಾಪವಾಗಿದೆ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ. ಎ ಸೆಂಥಿಲ್ ವೇಲ್ ಅವರನ್ನೊಳಗೊಂಡ ಪೀಠ ಹೇಳಿದೆ. ಅದರಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ), ಕೆಎಸ್‌ಪಿಸಿಬಿ ಹಾಗೂ ಇಎಂಪಿಆರ್‌ಐಗಳನ್ನು ಅದು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಿದೆ.

ವಾಸ್ತವಿಕ ಸ್ಥಿತಿ ಮತ್ತು ಇಎಂಪಿಆರ್‌ಐ ಅಧ್ಯಯನವನ್ನು ಪರಿಶೀಲಿಸಲು ಸಿಪಿಸಿಬಿಗೆ ಎನ್‌ಜಿಟಿ ಸೂಚನೆ ನೀಡಿದೆ. ಅಲ್ಲದೆ, ಎನ್‌ಜಿಟಿ ದಕ್ಷಿಣ ಪೀಠಕ್ಕೆ ವಾಸ್ತವಿಕ ಸ್ಥಿತಿ ಮತ್ತು ಕೈಗೊಂಡ ಕ್ರಮದ ವರದಿ ಎರಡನ್ನೂ ಸಲ್ಲಿಸುವಂತೆ ಅದು ಸೂಚಿಸಿದೆ.

ಜೊತೆಗೆ, ತರಕಾರಿ ಮಾದರಿಗಳನ್ನು ಸಂಗ್ರಹಿಸಿ ಪ್ರತಿಯೊಂದು ಭಾರ ಲೋಹ ಮತ್ತು ಕೀಟನಾಶಕ ನಿಯತಾಂಕಗಳನ್ನು ವಿಶ್ಲೇಷಿಸಲು ನ್ಯಾಯಾಲಯ ಸಿಪಿಸಿಬಿಗೆ ನಿರ್ದೇಶನ ನೀಡಿತು. ಈ ವಿಶ್ಲೇಷಣೆಯನ್ನು ದೆಹಲಿಯ ಸಿಪಿಸಿಬಿಯ ಕೇಂದ್ರ ಪ್ರಯೋಗಾಲಯದಲ್ಲಿ ಪ್ರಮಾಣಿತ ವಿಧಾನಗಳಿಗೆ ಬದ್ಧವಾಗಿ ನಡೆಸಿ ನಂತರ ವರದಿ ಸಲ್ಲಿಸುವಂತೆ ಅದು ಸೂಚಿಸಿದೆ. ಪ್ರಕರಣವನ್ನು ಎನ್‌ಜಿಟಿ ದಕ್ಷಿಣ ಪೀಠ ಜನವರಿ 10, 2024ರಂದು ವಿಚಾರಣೆ ನಡೆಸಲಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

NGT on its own motion order dated 21.11.2023.pdf
Preview