Sachin Waze
Sachin Waze 
ಸುದ್ದಿಗಳು

ಸ್ಫೋಟಕ ಪ್ರಕರಣ: ಏಪ್ರಿಲ್ 7 ರವರೆಗೆ ಸಚಿನ್ ವಜೆ ಕಸ್ಟಡಿ ಅವಧಿ ವಿಸ್ತರಿಸಿದ ಎನ್ಐಎ ನ್ಯಾಯಾಲಯ

Bar & Bench

ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಜೆ ಅವರ ಬಂಧನ ಅವಧಿಯನ್ನು ಏಪ್ರಿಲ್ 7 ರವರೆಗೆ ವಿಸ್ತರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಎನ್‌ಐಎ ನ್ಯಾಯಾಲಯದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಮತ್ತೆ ಆರು ದಿನಗಳ ಕಸ್ಟಡಿಗೆ ಕೋರಿದರು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯ (ಯುಎ ಪಿಎ) ಅಪರಾಧಗಳಿಗೆ 30 ದಿನಗಳವರೆಗೆ ಕಸ್ಟಡಿ ಅವಧಿ ವಿಸ್ತರಿಸಬಹುದು. ವಜೆ ಅವರು 22 ದಿನಗಳಿಂದ ಎನ್‌ಐಎ ವಶದಲ್ಲಿದ್ದು ಇನ್ನೂ ಎಂಟು ದಿನಗಳ ಕಾಲ ಬಂಧನ ಅವಧಿ ವಿಸ್ತರಣೆಗೆ ಅವಕಾಶವಿದೆ ಅವರು ವಾದಿಸಿದರು. ಇದರ ಹೊರತಾಗಿಯೂ ಎನ್‌ಐಎ ಕೇವಲ ಆರು ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿತು.

ಹಿಂದಿನ ವಿಚಾರಣೆಯಿಂದ ಇಲ್ಲಿಯವರೆಗೆ ಪ್ರಕರಣದಲ್ಲಿ ಉಂಟಾದ ಬೆಳವಣಿಗೆಗಳ ಬಗ್ಗೆ ನ್ಯಾಯಾಲಯಕ್ಕೆ ವಿವರಿಸಿದ ಸಿಂಗ್‌, ವಜೆ ಅವರು ಶಂಕಿತರೊಂದಿಗೆ ಡಿಸಿಬಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುವುದನ್ನು ಮತ್ತು ವರ್ಸೋವಾ ಲಾಕರ್‌ನಲ್ಲಿ 26.50 ಲಕ್ಷ ರೂ ಇರಿಸಿರುವುದನ್ನು ತಿಳಿಸಿದರು. ವಜೆ ಅವರು ಬಂಧನದಲ್ಲಿದ್ದಾಗ ಮಾರ್ಚ್‌ 27 ರಂದು ಅವರ ಸಹಚರರೊಬ್ಬರು ಖಾತೆಯನ್ನು ನಿರ್ವಹಿಸಿರುವುದು ಬೆಳಕಿಗೆ ಬಂದಿದೆ. ಆ ಬಳಿಕ ಕೇವಲ ರೂ. 4,000 ಅವರ ಖಾತೆಯಲ್ಲಿ ಉಳಿದಿದೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕೆಂದು ಕೋರಿದರು.

ಅಲ್ಲದೆ 120 ಟಿಬಿಯಷ್ಟು ಸಿಸಿಟಿವಿ ದತ್ತಾಂಶವನ್ನು ವಶಪಡಿಸಿಕೊಳ್ಳಲಾಗಿದ್ದು ಅದನ್ನು ಡೌನ್‌ಲೋಡ್‌ ಮಾಡಲು ಕನಿಷ್ಠ ನಾಲ್ಕೈದು ದಿನಗಳು ಹಿಡಿಯುತ್ತವೆ. ಆದ್ದರಿಂದ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ. ವಜೆ ಅವರು ಹಲವು ಬ್ಯಾಂಕ್‌ ಅಕೌಂಟ್‌ಗಳು ಹೊಂದಿದ್ದು ಅವುಗಳನ್ನು ಪರಿಶೀಲಿಸಬೇಕಿದೆ. ಮತ್ತೊಬ್ಬ ಆರೋಪಿ ವಿನಾಯಕ ಶಿಂಧೆ ಅವರ ಮನೆಯಿಂದ ವಶಪಡಿಸಿಕೊಳ್ಳಲಾದ ದಾಖಲೆಗಳ ಪರಿಶೀಲನೆ ನಡೆಯಬೇಕಿದೆ ಎಂದು ಹೇಳಿದರು.

ವಶಪಡಿಸಿಕೊಳ್ಳಲಾದ ವಸ್ತುಗಳು, ಅವುಗಳನ್ನು ಬಳಸಿದ ಉದ್ದೇಶ ಮತ್ತು ಪ್ರಕರಣಕ್ಕೆ ಇರುವ ನಂಟನ್ನು ಪತ್ತೆಹಚ್ಚಬೇಕಿದೆ. ಯಾವ ರೀತಿಯ ಹಣದ ವಹಿವಾಟು ನಡೆಯಿತು, ಯಾರು ಸಂಚುಕೋರರು, ಯಾರಿಗೆ ಹಣ ದೊರೆತಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ ಎಂದು ಅವರು ವಿವರಿಸಿದರು.

ವಜೆ ಪರವಾಗಿ ನ್ಯಾಯವಾದಿ ಆಬಾದ್‌ ಪೊಂಡ ವಾದ ಮಂಡಿಸಿದರು. ವಜೆ ಅವರ ಅನಾರೋಗ್ಯ ಇತ್ಯಾದಿ ಸಂಗತಿಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಜೆ ಅವರ ಆರೋಗ್ಯ ಕುರಿತಂತೆ ಕಾಳಜಿ ವಹಿಸುವಂತೆ ಎನ್‌ಐಎಗೆ ಸೂಚಿಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಪಿ ಆರ್‌ ಸಿತ್ರೆ ಅವರು ಏಪ್ರಿಲ್‌ 7ರವರೆಗೆ ಕಸ್ಟಡಿ ಅವಧಿ ವಿಸ್ತರಿಸಿದರು.