ಉದ್ಯಮಿ ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾ ಬಳಿ ಸ್ಫೋಟಕ ತುಂಬಿದ ವಾಹನ ನಿಲ್ಲಿಸುವ ಮೂಲಕ ಭೀತಿ ಹುಟ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಅರೋಪಿಗಳಾದ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗ ಸಚಿನ್ ವಾಜೆ ಹಾಗೂ ಎನ್‌ಕೌಂಟರ್‌ಗಳ ಕುಖ್ಯಾತಿಯ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರಿಗೆ ಸಿಮ್ ಕಾರ್ಡ್ ಒದಗಿಸಿದ್ದ ಆರೋಪಿ ನರೇಶ್‌ಗೆ ಎನ್‌ಐಎ ನ್ಯಾಯಾಲಯ ಜಾಮೀನು ನೀಡಿದೆ.
ಆರೋಪಿ ನರೇಶ್ ಪರ ಹಾಜರಾದ ವಕೀಲ ಅನಿಕೇತ್ ನಿಕಮ್ ಅವರು ವಾಜೆ ತಮ್ಮ ಕಕ್ಷಿದಾರರನ್ನು ಯಾವತ್ತೂ ಭೇಟಿ ಮಾಡಿರಲಿಲ್ಲ. ಅವರಿಬ್ಬರ ನಡುವೆ ಯಾವುದೇ ಫೋನ್ ಕರೆಗಳು ವಿನಿಮಯವಾಗಿಲ್ಲ. ಹಾಗಾಗಿ ಪ್ರಕರಣದ ಸಂಚಿನಲ್ಲಿ ನರೇಶ್ ಭಾಗಿಯಾಗಿದ್ದಾರೆ ಎಂದು ಹೇಳಲಾಗದು. ಸಂಚಿನ ಅಂತಿಮ ಉದ್ದೇಶದ ಬಗ್ಗೆ ನರೇಶ್ ಅರಿವಿತ್ತು ಎನ್ನುವುದನ್ನು ನಿರೂಪಿಸುವಲ್ಲಿಯೂ ಎನ್‌ಐಎ ಸೋತಿದೆ ಎಂದು ವಾದಿಸಿದರು. “ಹಾಗಾಗಿ, ಕೇವಲ ಸಿಮ್ ಕಾರ್ಡ್ ಒದಗಿಸಿದ ಮಾತ್ರಕ್ಕೆ ಅವರು ಸಂಚಿನ ಭಾಗವಾಗಿದ್ದಾರೆ ಎನ್ನಲಾಗದು” ಎಂದು ತಮ್ಮ ಕಕ್ಷೀದಾರನನ್ನು ಸಮರ್ಥಿಸಿಕೊಂಡರು.
ಅಲ್ಲದೆ, ಸಂಶಯಾಸ್ಪದವಾಗಿ ಕೊಲೆಗೀಡಾದ ಸ್ಫೋಟಕ ತುಂಬಿದ್ದ ವಾಹನದ ಮಾಲೀಕ ಉದ್ಯಮಿ ಮನ್‌ಸುಖ್ ಲಾಲ್ ಹಿರೇನ್ ಅವರ ಕೊಲೆಯ ಸಂಚಿನಲ್ಲಿ ನರೇಶ್ ಭಾಗಿ ಎನ್ನುವುದನ್ನು ನಿರೂಪಿಸಲು ಸಹ ಎನ್ಐಎಗೆ ಸಾಧ್ಯವಾಗಿಲ್ಲ. ನರೇಶ್ ಅವರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದ ಎಂದು ಹೇಳಿದರು.
ಅಂತಿಮವಾಗಿ ವಕೀಲ ಅನಿಕೇತ್ ನಿಕಮ್ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಎನ್‌ಐಎ ವಕೀಲರ ಪ್ರತಿರೋಧದ ನಡುವೆಯೂ ಆರೋಪಿ ನರೇಶ್ ಗೌರ್‌ಗೆ ರೂ.50 ಸಾವಿರ ಭದ್ರತೆ ನೀಡಲು ಸೂಚಿಸಿ ಜಾಮೀನು ಮಂಜೂರು ಮಾಡಿತು.