Bengaluru City Civil Court and NIA 
ಸುದ್ದಿಗಳು

ಉಗ್ರ ಚಟುವಟಿಕೆ ವಿಸ್ತರಣೆ, ಸರ್ಕಾರಿ ಆಸ್ತಿ ನಾಶ ಸಂಚು: ಇಬ್ಬರಿಗೆ ಆರು ವರ್ಷ ಶಿಕ್ಷೆ ವಿಧಿಸಿದ ಎನ್‌ಐಎ ನ್ಯಾಯಾಲಯ

ರಾಜ್ಯದಲ್ಲಿ ಘಜ್ವಾ-ಎ-ಹಿಂದ್‌ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸಲು ಇಬ್ಬರೂ ಆರೋಪಿಗಳು ಸಕ್ರಿಯರಾಗಿದ್ದರು. ನಿಷೇಧಿತ ಐಸಿಸ್ ಸಂಘಟನೆಗೆ ಯುವಕರನ್ನು ಸೇರ್ಪಡೆಗೊಳಿಸುವ ಮುಖಂಡರಾಗಿದ್ದರು ಎಂದು ಆರೋಪಿಸಲಾಗಿತ್ತು.

Bar & Bench

ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಸರ್ಕಾರಿ ಆಸ್ತಿಗಳನ್ನು ನಾಶಪಡಿಸಲು ಸಂಚು ರೂಪಿಸಿದ್ದರು ಎಂಬುದೂ ಸೇರಿದಂತೆ ಹಲವು ಗುರುತರ ಆರೋಪಗಳ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡು ನ್ಯಾಯಾಲಯಕ್ಕೆ ತಲೆಬಾಗಿದ್ದ ಇಬ್ಬರಿಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು ಆರು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹61 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು 49ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆಂಪರಾಜು ಶುಕ್ರವಾರ ಪ್ರಕಟಿಸಿದರು. ಪ್ರಕರಣದ ಎಂಟನೇ ಆರೋಪಿ ಮೊಹಮದ್‌ ಜಬೀವುಲ್ಲಾ ಅಲಿಯಾಸ್ ಜಬೀವುಲ್ಲಾ ಅಲಿಯಾಸ್ ಚರ್ಬಿ ಹಾಗೂ 9ನೇ ಆರೋಪಿ ಎನ್‌ ನದೀಂ ಫೈಸಲ್‌ ಅಲಿಯಾಸ್ ನದೀಂ ಶಿಕ್ಷೆಗೆ ಗುರಿಯಾದವರು.

ಎನ್‌ಐಎ ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ ಒಟ್ಟು 10 ಜನ ಆರೋಪಿಗಳಿದ್ದು ಸದ್ಯ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎನ್‌ಐಎ ಪರ ವಕೀಲರುಗಳಾದ ಪಿ ಪ್ರಸನ್ನಕುಮಾರ್ ಮತ್ತು ಸಿ ಸಚಿನ್‌ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ 2022ರ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರೇಮ್‌ ಸಿಂಗ್ ಎಂಬ ಯುವಕನಿಗೆ ಚೂರಿಯಿಂದ ಇರಿಯಲಾಗಿತ್ತು. ಈ ಘಟನೆಯನ್ನು ರಾಜ್ಯದ ಪೊಲೀಸರು ತನಿಖೆ ನಡೆಸುತ್ತಿದ್ದರು. ತನಿಖೆಯ ಬೆನ್ನತ್ತಿದ ಪೊಲೀಸರಿಗೆ ತುಂಗಾ ನದಿ ದಂಡೆಯ ಮೇಲೆ ಟ್ರಯಲ್‌ ಬ್ಲಾಸ್ಟ್‌, ಭಾರತದ ತ್ರಿವರ್ಣ ಧ್ವಜ ಸುಟ್ಟ ಕೃತ್ಯ ಪತ್ತೆಯಾಗಿತ್ತು. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಇದರ ತನಿಖೆಯನ್ನು 2022ರ ನವೆಂಬರ್ 11ರಂದು ಎನ್‌ಐಎಗೆ ವರ್ಗಾಯಿಸಲಾಗಿತ್ತು.

ಎನ್‌ಐಎ ತನಿಖೆಯ ವೇಳೆ, ರಾಜ್ಯದಲ್ಲಿ ಘಜ್ವಾ-ಎ-ಹಿಂದ್‌ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸಲು ಇಬ್ಬರೂ ಆರೋಪಿಗಳು ಸಕ್ರಿಯರಾಗಿದ್ದುದು ತಿಳಿದು ಬಂದಿತ್ತು. ಅಲ್ಲದೆ, ನಿಷೇಧಿತ ಐಸಿಸ್ ಸಂಘಟನೆಗೆ ಯುವಕರನ್ನು ಸೇರ್ಪಡೆಗೊಳಿಸಲು ಮುಂದಾಗಿದ್ದರು. ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ಸಹಕಾರದೊಂದಿಗೆ ಸ್ಫೋಟಕಗಳನ್ನು ಸಂಗ್ರಹಿಸಿದ್ದು ದೃಢಪಟ್ಟಿದೆ ಎಂಬುದೂ ಸೇರಿದಂತೆ ಹಲವು ಗಂಭೀರ ಆರೋಪಗಳಡಿ ಎನ್‌ಐಎ, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.