ಈಚೆಗೆ ಶರಣಾಗಿದ್ದ ಮಾಜಿ ನಕ್ಸಲರಾದ ಮುಂಡಗಾರು ಲತಾ, ರವೀಂದ್ರ ಅಲಿಯಾಸ್ ಕೋಟೆಹೊಂಡ ರವಿ, ಸಾವಿತ್ರಿ ಅಲಿಯಾಸ್ ಉಷಾ, ವನಜಾಕ್ಷಿ ಅಲಿಯಾಸ್ ಜ್ಯೋತಿ ಅಲಿಯಾಸ್ ಕಲ್ಪನಾ ಅವರನ್ನು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಗುರುವಾರ ಮೂರು ಪ್ರಕರಣಗಳಿಂದ ಖುಲಾಸೆಗೊಳಿಸಿದೆ.
ಚಿಕ್ಕಮಗಳೂರಿನ ಥಣಿಕೋಡು ಅರಣ್ಯ ಚೆಕ್‌ಪೋಸ್ಟ್ ಧ್ವಂಸ ಕೃತ್ಯ, ಲೇವಾದೇವಿದಾರ ಗಂಗಾಧರ್ ಶೆಟ್ಟಿ ಅಲಿಯಾಸ್ ಕಿರಣ್ ಶೆಟ್ಟಿ ಬೈಕ್‌ಗೆ ಬೆಂಕಿ ಹಾಕಿದ್ದ ಕೃತ್ಯ ಹಾಗೂ ಬುಕ್ಕಡಿಬೈಲುವಿನಲ್ಲಿ ಸಾರ್ವಜನಿಕ ಸಭೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಠಾಣೆಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳಲ್ಲದೆ ಭಯೋತ್ಪಾದನಾ ಚಟುವಟಿಕೆಗಳಿಗೆ ಅನ್ವಯಿಸಲಾಗುವ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆಯ (ಯುಎಪಿಎ) ಸೆಕ್ಷನ್‌ಗಳನ್ನೂ ಅನ್ವಯಿಸಲಾಗಿತ್ತು.
ಮುಂಡಗಾರು ಲತಾ ಅವರಿಗೆ ಸಂಬಂಧಿಸಿದ ಮೂರು, ರವೀಂದ್ರ ಅವರನ್ನೊಳಗೊಂಡ ಎರಡು ಮತ್ತು ಸಾವಿತ್ರಿ ಮತ್ತು ಜ್ಯೋತಿ ಅವರನ್ನು ಒಳಗೊಂಡ ತಲಾ ಒಂದೊಂದು ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಸಾಕ್ಷ್ಯ ಒದಗಿಸಲು ವಿಫಲವಾಗಿದೆ ಎಂದು ಆದೇಶದಲ್ಲಿ ತಿಳಿಸಿದ ಎನ್‌ಐಎ ವಿಶೇಷ ನ್ಯಾಯಾಧೀಶರಾದ ಸಿ ಎಂ ಗಂಗಾಧರ್ ಅವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.
“ಆರೋಪಿಗಳು ಅಪರಾಧ ಎಸಗುವ ಉದ್ದೇಶದಿಂದ ಕಾನೂನುಬಾಹಿರವಾಗಿ ಗುಂಪುಗೂಡಿ ಸಭೆ ನಡೆಸಿ, ಸಾರ್ವಜನಿಕರಿಗೆ ಗಂಭೀರ ಹಾನಿಯ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಸೂಕ್ತ ಪರವಾನಗಿ ಇಲ್ಲದೇ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು, ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗೆ ಪ್ರೇರಣೆ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಯಾವುದೇ ಸಾಕ್ಷಿ ಒದಗಿಸಲು ವಿಫಲವಾಗಿದೆ. ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ದಯನೀಯವಾಗಿ ಸೋತಿದ್ದು, ಅನುಮಾನರಹಿತವಾಗಿ ಆರೋಪಿಗಳ ತಪ್ಪನ್ನು ಸಾಬೀತುಪಡಿಸಿಲ್ಲ” ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಥಣಿಕೋಡು ಅರಣ್ಯ ಚೆಕ್‌ಪೋಸ್ಟ್‌ಗೆ ಹಾನಿ: ಥಣಿಕೋಡು ಚೆಕ್‌ಪೋಸ್ಟ್‌ಗೆ 04.11.2005ರಂದು ಬಂದಿದ್ದ ಮೂವರು ಪುರುಷ ಮತ್ತು ಒಬ್ಬ ಮಹಿಳಾ ನಕ್ಸಲರು ಚೆಕ್‌ಪೋಸ್ಟ್ ಕಚೇರಿ ಧ್ವಂಸ ಮಾಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಕೈಬಿಡಬೇಕು. ಇಲ್ಲಿನ ಜನರಿಗೆ ಯಾವುದೇ ಸಮಸ್ಯೆ ಉಂಟು ಮಾಡಬಾರದು. ಸ್ಥಳೀಯರು ಅರಣ್ಯ ಉತ್ಪನ್ನಗಳನ್ನು ಧಾರಾಳವಾಗಿ ಪಡೆಯಲು ಅವಕಾಶ ಮಾಡಿಕೊಡಬೇಕು. ನಮ್ಮ ಹೋರಾಟ ಸರ್ಕಾರದ ವಿರುದ್ಧ ಎಂದು ಹೇಳಿ ಮೂವರು ಸಿಬ್ಬಂದಿಯನ್ನು ಒತ್ತೆ ಇಟ್ಟು, ಆನಂತರ ಬಿಡುಗಡೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಭಯಂಕರ ಸ್ಫೋಟ ಸಂಭವಿಸಿತ್ತು ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಮುಂಡಗಾರು ಲತಾ ಅಲಿಯಾಸ್ ಲೋಕಮ್ಮ ಅಲಿಯಾಸ್ ಮೋಹಿನಿ ಅಲಿಯಾಸ್ ಶ್ಯಾಮಲಾ ಆರೋಪಿಯಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 120ಬಿ, 143, 147, 148, 353, 427, 435, ಮತ್ತು 506 ಜೊತೆಗೆ ಸೆಕ್ಷನ್ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 3 ಮತ್ತು 25 ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ನಿಷೇಧ) ಕಾಯಿದೆ ಸೆಕ್ಷನ್ 16, ಸ್ಫೋಟಕ ಪರಿಕರಗಳ ಕಾಯಿದೆ 3 ಮತ್ತು 4(a) ಹಾಗೂ ಕರ್ನಾಟಕ ಸರ್ಕಾರಿ ಆಸ್ತಿಗೆ ಹಾನಿ ಮತ್ತು ನಷ್ಟ ನಿಷೇಧ ಕಾಯಿದೆ ಸೆಕ್ಷನ್ 2ರ ಆರೋಪಗಳಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.
ಕಿರಣ್ ಶೆಟ್ಟಿ ಬೈಕ್‌ಗೆ ಬೆಂಕಿ: 22.05.2008ರಂದು ಲೇವಾದೇವಿದಾರ ಗಂಗಾಧರ್ ಶೆಟ್ಟಿ ಅಲಿಯಾಸ್ ಕಿರಣ್ ಶೆಟ್ಟಿ ಬೈಕ್‌ಗೆ ಬೆಂಕಿ ಹಚ್ಚಿದ ಕೃತ್ಯದ ವಿರುದ್ಧ ದೂರು ದಾಖಲಾಗಿತ್ತು. ಅಲ್ಲದೆ, 'ಲಂಚದ ಕಿರಣ್ ಶೆಟ್ಟಿಗೆ ಸರಿಯಾದ ಶಿಕ್ಷೆ ನೀಡೋಣ. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ತಡೆಯೋಣ ಹಾಗೂ ಜನರನ್ನು ಸಾಲದ ಉರುಳಿಗೆ ಸಿಕ್ಕಿಸಿ ಸಾಹುಕಾರನಾದ ಕಿರಣ್ ಶೆಟ್ಟಿಯನ್ನು ಒದ್ದೋಡಿಸಿ ಜನರ ಶ್ರಮದ ಹಣವನ್ನು ಉಳಿಸೋಣ – ಮಾವೋವಾದಿ' ಎಂದು ಒಕ್ಕಣೆ ಹೊಂದಿದ್ದ ಕರಪತ್ರ ಆಧರಿಸಿದ ದೂರು ಸಹ ದಾಖಲಾಗಿತ್ತು. ಈ ಸಂಬಂಧ ಮುಂಡಗಾರು ಲತಾ, ರವೀಂದ್ರ ಮತ್ತು ವನಜಾಕ್ಷಿ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143, 144, 147, 148, 435, ಮತ್ತು 506 ಜೊತೆಗೆ ಸೆಕ್ಷನ್ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 3 ಮತ್ತು 25 ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ನಿಷೇಧ) ಕಾಯಿದೆ ಸೆಕ್ಷನ್‌ಗಳಾದ 13 ಮತ್ತು 18ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.
ನಕ್ಸಲ್ ಚಟುವಟಿಕೆಗೆ ಬೆಂಬಲ ಕೋರಿಕೆ: ಬುಕ್ಕಡಿಬೈಲುವಿನ ಉಮೇಶ್ ಎಂಬವರ ಅಂಗಡಿಯ ಮುಂದೆ ಬಿ ಜಿ ಕೃಷ್ಣಮೂರ್ತಿ ಮತ್ತು ಮುಂಡಗಾರು ಲತಾ ನೇತೃತ್ವದಲ್ಲಿ 05.03.2009ರಂದು ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಪುರುಷ ಮತ್ತು ಇಬ್ಬರು ಮಹಿಳಾ ನಕ್ಸಲರು 80-100 ಜನರನ್ನು ಸೇರಿಸಿ ಸಭೆ ನಡೆಸಿದ್ದ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಸಭೆಯ ವೇಳೆ ಆರೋಪಿಗಳು ತಾವು ಜನರ ಕಲ್ಯಾಣಕ್ಕಾಗಿ ಮತ್ತು ಸರ್ಕಾರದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಜನರ ಒಳಿತಿಗಾಗಿ ಸಾಕಷ್ಟು ಮಂದಿ ನಕ್ಸಲರು ತ್ಯಾಗ ಮಾಡಿದ್ದಾರೆ. ಹೀಗಾಗಿ, ತಮ್ಮ ಕೆಲಸಗಳಿಗೆ ಬೆಂಬಲ ನೀಡಬೇಕು ಎಂದು ಕೋರಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಶಸ್ತ್ರಾಸ್ತ್ರ ಹೊಂದಿದ್ದರು. ಹೊರಡುವಾಗ ಕರಪತ್ರ ಬಿಟ್ಟು, ಘೋಷಣೆ ಹಾಕಿ ಹೊರಟಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತು ಸಾರ್ವಜನಿಕರು ದೂರು ನೀಡಿರಲಿಲ್ಲ. ಆದರೆ, ಜನರ ಮಾಹಿತಿ ಆಧರಿಸಿ 11 ಮಂದಿಯ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಮುಂಡಗಾರು ಲತಾ, ರವೀಂದ್ರ ಮತ್ತು ಸಾವಿತ್ರಿ ಮುಖ್ಯವಾಹಿನಿಗೆ ಬಂದಿದ್ದರಿಂದ ಅವರ ವಿರುದ್ಧದ ಪ್ರಕರಣ ಪ್ರತ್ಯೇಕಿಸಿ ವಿಚಾರಣೆ ನಡೆಸಲಾಗಿತ್ತು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143, 144, 147, 148 ಮತ್ತು 506 ಜೊತೆಗೆ ಸೆಕ್ಷನ್ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 3 ಮತ್ತು 25 ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ನಿಷೇಧ) ಕಾಯಿದೆ ಸೆಕ್ಷನ್‌ಗಳಾದ 13 ಮತ್ತು 18ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.
ಜನವರಿ 9ರಂದು ಆರು ಮಂದಿ ನಕ್ಸಲರು ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಶರಣಾಗಿದ್ದರು.