ಸುದ್ದಿಗಳು

ಭೂಷಣ್‌ ಪ್ರಕರಣ: ಉನ್ನತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದ ಆ 9 ನ್ಯಾಯಮೂರ್ತಿಗಳು ಹೇಳಿದ್ದೇನು?

ಪ್ರಶಾಂತ್ ಭೂಷಣ್‌ ನ್ಯಾಯಾಂಗ ನಿಂದನೆ ಪ್ರಕರಣದ ಶಿಕ್ಷೆಯ ವಿಚಾರಣೆ ವೇಳೆ ನ್ಯಾಯಾಂಗದ ಉನ್ನತ ಸ್ತರದಲ್ಲಿನ ಭ್ರಷ್ಟಾಚಾರದ ಬಗ್ಗೆ 9 ನ್ಯಾಯಮೂರ್ತಿಗಳು ಈ ಹಿಂದೆ ಪ್ರಸ್ತಾಪಿಸಿದ್ದನ್ನು ಎಜಿ ಉಲ್ಲೇಖಿಸಿದ್ದರು. ಆ ಪಟ್ಟಿ ಹೀಗಿರಬಹುದೇ...

Bar & Bench

ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಕಳೆದ ಗುರುವಾರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಸುಪ್ರೀಂ ಕೋರ್ಟಿನ ಒಂಭತ್ತು ನಿವೃತ್ತ ನ್ಯಾಯಮೂರ್ತಿಗಳು ನ್ಯಾಯಾಂಗದ ಉನ್ನತ ಸ್ತರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ್ದಾರೆ ಎಂದಿದ್ದರು. ಈ ಪೈಕಿ ಏಳು ಮಂದಿ ತಾವು ನಿವೃತ್ತರಾದ ತಕ್ಷಣವೇ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಎಂದು ವೇಣುಗೋಪಾಲ್ ವಿವರಿಸಿದ್ದರು.

“ಸುಪ್ರೀಂ ಕೋರ್ಟ್‌ ನಲ್ಲಿ ಪ್ರಜಾಪ್ರಭುತ್ವ ಸೋತಿದೆ ಎಂದು ಐವರು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದನ್ನೇ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಎರಡನೆಯದಾಗಿ ನ್ಯಾಯಾಂಗದ ಉನ್ನತ ಸ್ತರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿದ ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಮೂರ್ತಿಗಳ ಪಟ್ಟಿ ನನ್ನ ಬಳಿ ಇದೆ. ಈ ಪೈಕಿ ಇಬ್ಬರು ಸೇವೆಯಲ್ಲಿರುವಾಗಲೇ ಈ ಮಾತು ಆಡಿದ್ದಾರೆ (ಸ್ಪಷ್ಟತೆ ಇಲ್ಲ). ಏಳು ಮಂದಿ ತಾವು ನಿವೃತ್ತ ಹೊಂದಿದ ತಕ್ಷಣವೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ ಎಲ್ಲರೂ ಮಾತನಾಡಿದ ದಾಖಲೆ ನನ್ನ ಬಳಿ ಇದೆ. 1987ರಲ್ಲಿ ಭಾರತೀಯ ಕಾನೂನು ಸಂಸ್ಥೆಯಲ್ಲಿ ನಾನೇ ಭಾಷಣ ಮಾಡಿದ್ದೇನೆ” ಎಂದು ವೇಣುಗೋಪಾಲ್ ವಿಚಾರಣೆ ವೇಳೆ ಹೇಳಿದ್ದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ವೇಣುಗೋಪಾಲ್ ಅವರು ಮಾತು ಮುಂದುವರೆಸಲು ತಡೆಯೊಡ್ಡಿದರು. ವೇಣುಗೋಪಾಲ್ ಮಾತಿಗೆ ಕತ್ತರಿ ಹಾಕಿದ ನ್ಯಾ. ಅರುಣ್ ಮಿಶ್ರಾ ಅವರು ಪ್ರಕರಣದ ಅರ್ಹತೆಯ ಬಗ್ಗೆ ವೇಣುಗೋಪಾಲ್ ನಾವು ಈ ಸಂದರ್ಭದಲ್ಲಿ ಕೇಳ ಬಯಸುವುದಿಲ್ಲ ಎಂದಿದ್ದರು.

ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಾಲ್ವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ನಡೆಸಿದ ಐತಿಹಾಸಿಕ ಸುದ್ದಿಗೋಷ್ಠಿಯೂ ವೇಣುಗೋಪಾಲ್ ಅವರ ಮನದಲ್ಲಿತ್ತು. ಐದನೆಯಾದಾಗಿ ನ್ಯಾ. ಗೋಪಾಲ ಗೌಡ ಅವರು ಇದೇ ವಿಚಾರವಾಗಿ ಮಾತನಾಡಿದ್ದರು. ತಮ್ಮ ಟ್ವೀಟ್‌ ಗಳಿಂದ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಪ್ರಶಾಂತ್ ಭೂಷಣ್ ಪ್ರಕರಣದ ಮೇಲೆ ಈ ಎಲ್ಲರ ಹೇಳಿಕೆಯೂ ಪ್ರಭಾವ ಬೀರಿವೆ.

ಭ್ರಷ್ಟಾಚಾರದ ಬಗ್ಗೆ ನ್ಯಾಯಮೂರ್ತಿಗಳು ಮಾತನಾಡುವುದು, ನ್ಯಾಯಾಂಗವನ್ನು ವಿವಾದಾತ್ಮಕವಾಗಿಸುವ ಆರೋಪದಲ್ಲಿ ಭೂಷಣ್ ವಿರುದ್ಧ ಪ್ರಕರಣ ದಾಖಲಿಸುವುದು ಮತ್ತು 2009ರಲ್ಲಿ ಭೂಷಣ್ ಅವರು ತೆಹಲ್ಕಾ ಮ್ಯಾಗಜೀನ್ ಗೆ ನೀಡಿದ್ದ ಸಂದರ್ಶನಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ನ್ಯಾ. ಅರುಣ್ ಮಿಶ್ರಾ ನೇತೃತ್ವದ ಪೀಠ ವಿಚಾರಣೆಗೆ ಎತ್ತಿಕೊಂಡಿರುವುದು, ಈ ಎಲ್ಲ ಹಿನ್ನೆಲೆಯ ಕುರಿತು ವೇಣುಗೋಪಾಲ್ ಅವರು ಉಲ್ಲೇಖಿಸಿದ್ದರು.

ಅಟಾರ್ನಿ ಜನರಲ್ ಅವರು ಬಹುಶಃ ಪ್ರಸ್ತಾಪಿಸಲು ಉದ್ದೇಶಿಸಿದ್ದ ನ್ಯಾಯಮೂರ್ತಿಗಳ ಪಟ್ಟಿಯನ್ನು “ದಿ ವೈರ್”‌ ಸಿದ್ಧಪಡಿಸಿದ್ದು, ಸದರಿ ನ್ಯಾಯಮೂರ್ತಿಗಳು ನ್ಯಾಯಾಲಯದ ಉನ್ನತ ಸ್ತರದಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಪ್ರಜಾಪ್ರಭುತ್ವದ ಸೋಲಿನ ಬಗ್ಗೆ ಏನು ಹೇಳಿದ್ದರು ಎನ್ನುವುದನ್ನು ಕ್ರೋಢೀಕರಿಸಿದೆ. ಪಟ್ಟಿ ಹೀಗಿದೆ:

1. ನ್ಯಾ. ಇ ಎಸ್ ವೆಂಕಟರಾಮಯ್ಯ

ಸುಪ್ರೀಂ ಕೋರ್ಟಿನ 19ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ. ವೆಂಕಟರಾಮಯ್ಯ ಅವರು 1989ರ ಜೂನ್ 19ರಿಂದ 1989ರ ಡಿಸೆಂಬರ್ 17ರ ವರೆಗೆ ಅಧಿಕಾರದಲ್ಲಿದ್ದರು.

“ವಿಸ್ಕಿ ಬಾಟಲಿಗಳು ಹಾಗೂ ಮೋಜು-ಮಸ್ತಿನ ಪಾರ್ಟಿಗಳ ಪ್ರಭಾವಕ್ಕೆ ಈಡಾಗ ಬಯಸುವ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗುತ್ತಿದ್ದು, ಭಾರತದ ನ್ಯಾಯಾಂಗವು ತನ್ನ ಮಾನದಂಡ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ” ಎಂದು ನ್ಯಾ. ವೆಂಕಟರಾಮಯ್ಯನವರು ಪತ್ರಕರ್ತ ಕುಲದೀಪ್ ನಯ್ಯರ್ ಅವರಿಗೆ ನಿವೃತ್ತಿ ಸಂದರ್ಭದಲ್ಲಿ ತಿಳಿಸಿದ್ದರು.

“ಸಮಾಜ ಘಾತುಕ ಶಕ್ತಿಗಳು, ಫೇರಾ ಉಲ್ಲಂಘಿಸಿದವರು, ಮಧುಮಗಳನ್ನು ಸುಟ್ಟವರು, ಪ್ರತಿಗಾಮಿಗಳು ಸುಪ್ರೀಂ ಕೋರ್ಟ್ ಸೇರಿದ್ದಾರೆ," ಎಂಬ ಕೇಂದ್ರದ ಮಾಜಿ ಕಾನೂನು ಸಚಿವ ಪಿ ಶಿವಶಂಕರ್ ಹೇಳಿಕೆಯನ್ನು ನ್ಯಾ. ವೆಂಕಟರಾಮಯ್ಯನವರು ಉಲ್ಲೇಖಿಸಿದ್ದರು.

ನ್ಯಾಯಾಂಗದಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸಾಂಸ್ಥಿಕ ಭ್ರಷ್ಟಾಚಾರದ ಬಗ್ಗೆ ವೆಂಕಟರಾಮಯ್ಯನವರು ನಿರ್ಬಿಢೆಯಿಂದ ಮಾತನಾಡಿದ್ದರು. ಈ ಸಂದರ್ಶನ ಹಲವು ದೈನಿಕಗಳಲ್ಲಿ ಪ್ರಕಟವಾಗಿತ್ತು.

ಸಂದರ್ಶನದ ಆಧಾರದಲ್ಲಿ ನ್ಯಾ. ವೆಂಕಟರಾಮಯ್ಯನವರ ವಿರುದ್ಧ 1990ರಲ್ಲಿ ಬಾಂಬೆ ಹೈಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕೋರಲಾಗಿತ್ತು. 1990ರ ಮಾರ್ಚ್‌ 2ರಂದು ಎಂ ಎಂ ಖಾಜಿ ಹಾಗೂ ಬಿ ಯು ವಹಾನೆ ನೇತೃತ್ವದ ನಾಗ್ಪುರ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತ್ತು. ನ್ಯಾ.ವೆಂಕಟರಾಮಯ್ಯನವರು 1997ರ ಸೆಪ್ಟೆಂಬರ್ 24ರಂದು ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು.

2. ನ್ಯಾ. ಎಸ್ ಪಿ ಬರೂಚಾ

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ಬರೂಚಾ ಅವರು 2001ರ ತಮ್ಮ ಒಂದು ಭಾಷಣದಲ್ಲಿ ಶೇ.21ರಷ್ಟು ಭಾರತದ ನ್ಯಾಯಮೂರ್ತಿಗಳು ಭ್ರಷ್ಟರು ಎಂದಿದ್ದರು.ಸುಪ್ರೀಂ ಕೋರ್ಟಿನ ಲಾನ್ ನಲ್ಲಿ 2001ರ ನವೆಂಬರ್ 26ರಂದು ನಡೆದಿದ್ದ ಕಾನೂನು ದಿನದ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿದ್ದರು.

ನ್ಯಾ. ಬರೂಚಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ವಜಾಗೊಳಿಸಿತ್ತು.

3. ನ್ಯಾ. ಮೈಕೆಲ್ ಸಲ್ಡಾನಾ

ಕರ್ನಾಟಕ ಹೈಕೋರ್ಟ್‌ ನ ನ್ಯಾಯಮೂರ್ತಿಯಾಗಿದ್ದ ಸಲ್ಡಾನ ಅವರು ಶೇ. 33ರಷ್ಟು ನ್ಯಾಯಾಂಗ ಭ್ರಷ್ಟಗೊಂಡಿದೆ ಎಂದು ಹೇಳಿದ್ದಾಗಿ ವರದಿಯಾಗಿತ್ತು.

4. ನ್ಯಾ. ಮಾರ್ಕಾಂಡೇಯ ಕಾಟ್ಜು

ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿದ್ದ ನ್ಯಾ. ಕಾಟ್ಜು ಅವರು ಸುಪ್ರೀಂ ಕೋರ್ಟ್‌ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅಂದಿನ ಯುಪಿಎ ಸರ್ಕಾರದಲ್ಲಿ ಮೈತ್ರಿ ಪಕ್ಷವಾಗಿದ್ದ ಡಿಎಂಕೆ ಒತ್ತಡಕ್ಕೆ ಒಳಗಾಗಿ ಮದ್ರಾಸ್ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಯೊಬ್ಬರಿಗೆ ಸೇವಾವಧಿ ವಿಸ್ತರಿಸಲು ಮೂವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ದೂರಿದ್ದರು.

5.ನ್ಯಾ. ಜೆ ಚಲಮೇಶ್ವರ್

ಆಂಗ್ಲ ಪತ್ರಿಕೆ 'ಎಕನಾಮಿಕ್ ಟೈಮ್ಸ್' ಗೆ ನೀಡಿದ್ದ ಸಂದರ್ಶನಲ್ಲಿ ನ್ಯಾ.ಚಲಮೇಶ್ವರ್ ಅವರು ಹೀಗೆ ಪ್ರತಿಕ್ರಿಯಿಸಿದ್ದರು:

"ನ್ಯಾಯಾಂಗದಲ್ಲಿ ಭ್ರಷ್ಟಾಚಾರವಿದೆ. ಖುದ್ದೇಶಿ ಬಂಧನವಾಗಿದ್ದು ಏತಕ್ಕೆ? ನಮ್ಮ ದೇಶದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ಬಂಧನವಾಗಿತ್ತು. ನ್ಯಾಯಾಂಗಕ್ಕೆ ಗೌರವ ನೀಡದಿದ್ದರೆ ಪ್ರಜಾಪ್ರಭುತ್ವ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಸಂಸ್ಥೆಯನ್ನು ಘನತೆಯಿಂದ ನೋಡಿಕೊಳ್ಳುವುದು ಹಾಗೂ ಪಾರದರ್ಶಕ ಕಾರ್ಯ ವಿಧಾನದ ಮೂಲಕ ಸುಪ್ರೀಂ ಕೋರ್ಟ್ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಕಡೆ ನನ್ನ ಪ್ರಯತ್ನ ಸಾಗಿತ್ತು. ನ್ಯಾಯಮೂರ್ತಿಗಳೂ ರಾಜಕೀಯ ಪ್ರಭಾವಕ್ಕೆ ಒಳಗಾಗುತ್ತಾರೆ. ನ್ಯಾಯಮೂರ್ತಿಗಳು ರಾಜಕೀಯದಿಂದ ಅತೀತರು ಎಂಬುದು ಪ್ರಾಮಾಣಿಕ ಹೇಳಿಕೆಯಲ್ಲ..."

"ಹಾಗೆಂದ ಮಾತ್ರಕ್ಕೆ ನಾನು ಪಕ್ಷ ರಾಜಕೀಯದ ಬಗ್ಗೆ ಮಾತನಾಡುತ್ತಿಲ್ಲ. ಸದ್ಯದ ರಾಜಕೀಯ ಪ್ರಕ್ರಿಯೆಗಳನ್ನು ನ್ಯಾಯಮೂರ್ತಿಗಳು ಎಷ್ಟು ನಿರ್ಭಾವುಕವಾಗಿ ನಡೆಸುತ್ತಾರೆ ಎನ್ನುವುದು ಪ್ರಶ್ನೆ... ನೇರವಾಗಿ ರಾಜಕೀಯ ಪ್ರಭಾವ ಬೀರದೇ ಇದ್ದರೂ ಭಿನ್ನ ಹಾದಿಗಳ ಮೂಲಕ ಒತ್ತಡ ಹೇರಲಾಗುತ್ತದೆ," ಎಂದು ನ್ಯಾ.ಚಲಮೇಶ್ವರ್ ಅವರು ವಿವರಿಸಿದ್ದರು. ಸದ್ಯ ನ್ಯಾಯಾಂಗದ ಮೆಲೆ ರಾಜಕೀಯ ಒತ್ತಡ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಮೇಲಿನ ಮಾತುಗಳನ್ನು ಹೇಳಿದ್ದರು.

ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೊಗೊಯ್, ಮದನ್ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರ ಜೊತೆಗೂಡಿ 2018ರ ಜನವರಿ 12ರಂದು ನಡೆಸಿದ್ದ ಸಂದರ್ಶನಲ್ಲಿ ಚಲಮೇಶ್ವರ್ ಹೀಗೆ ಹೇಳಿದ್ದರು:

“ಇಪ್ಪತ್ತು ವರ್ಷಗಳ ನಂತರ ಕೆಲವು ಬದ್ಧಿವಂತರು ನ್ಯಾಯಮೂರ್ತಿಗಳು ತಮ್ಮ ಆತ್ಮ ಮಾರಿಕೊಂಡಿದ್ದರು ಎಂದು ಹೇಳಬಾರದು,” ಎಂದು ಮಾರ್ಮಿಕವಾಗಿ ನುಡಿದಿದ್ದರು.

6. ನ್ಯಾ. ಎಂ ಎನ್ ವೆಂಕಟಾಚಲಯ್ಯ

“ನೂರು ಕೋಟಿಗೂ ಅಧಿಕ ಜನಸಂಖ್ಯೆ ಇರುವ ದೇಶದ ಸುಪ್ರೀಂ ಕೋರ್ಟ್ ನಲ್ಲಿ ಕೇವಲ 25 ಮಂದಿ ನ್ಯಾಯಮೂರ್ತಿಗಳು ಇದ್ದಾರೆ. ಅದರಲ್ಲಿಯೂ ಕೂಡ ಕೆಲವರು ಭ್ರಷ್ಟರು” ಎಂದು ನಿವೃತ್ತ ಸಿಜೆಐ ವೆಂಕಟಾಚಲಯ್ಯ ಅವರು 2011ರಲ್ಲಿ ಔಟ್ ಲುಕ್ ನ ಅನುರಾಧಾ ರಮಣ್ ಅವರಿಗೆ ಹೇಳಿದ್ದರು. "ಸಿಜೆಐ ಟೀಕೆಗೆ ಗುರಿಯಾಗುವುದು ಅಥವಾ ಅವರ ಕೈಗಳು ಕೊಳಕು ಎಂಬ ಅನುಮಾನಗಳಿಗೆ ಅವಕಾಶ ಮಾಡಿಕೊಡುವುದು ಅತ್ಯಂತ ಘೋರ ಅಪರಾಧ” ಎಂದಿದ್ದರು.

7. ನ್ಯಾ. ವಿ ಆರ್ ಕೃಷ್ಣ ಐಯ್ಯರ್

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ರಾ‍ಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ನಿವೃತ್ತ ಸಿಜೆಐ ಕೆ ಜಿ ಬಾಲಕೃಷ್ಣ ಅವರ ರಾಜೀನಾಮೆ ಕೇಳಿದ್ದವರಲ್ಲಿ ನಿವೃತ್ತ ನ್ಯಾ. ಕೃಷ್ಣ ಐಯ್ಯರ್ ಸಹ ಒಬ್ಬರು. ಕೇರಳ ಹೈಕೋರ್ಟ್‌ ನ ನ್ಯಾ. ಪಿ ಕೆ ಶಂಸುದ್ದೀನ್ ಮತ್ತು ನ್ಯಾ. ಕೆ ಸುಕುಮಾರನ್ ಅವರು ಬಾಲಕೃಷ್ಣನ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

2011ರಲ್ಲಿ ಕಾಂಗ್ರೆಸ್ ಅಂದಿನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದ ನ್ಯಾ. ಐಯ್ಯರ್ ಅವರು ಹೀಗೆ ವಿವರಿಸಿದ್ದರು:

“ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವವರನ್ನು ಶಿಕ್ಷಿಸುವ ಮಹತ್ವದ ಅಧಿಕಾರ ಹೊಂದಿರುವ ಪವಿತ್ರ ಸಾಧನವಾದ ನ್ಯಾಯಾಂಗವೇ ಭ್ರಷ್ಟವಾಗಿದೆ. ಒಬ್ಬೇ ಒಬ್ಬ ಭ್ರಷ್ಟ ನ್ಯಾಯಮೂರ್ತಿಯನ್ನು ಹಿಡಿಯಲಾಗಿಲ್ಲ ಅಥವಾ ಶಿಕ್ಷಿಸಲಾಗಿಲ್ಲ”.

2013ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದ ಕೃಷ್ಣ ಐಯ್ಯರ್ ಅವರು ಸುಪ್ರೀಂ ಕೋರ್ಟಿನ ಕೆಲವು ಹಿರಿಯ ನ್ಯಾಯಮೂರ್ತಿಗಳ “ನೈತಿಕತೆ ಶಂಕಾಸ್ಪದವಾಗಿದ್ದು” ಅವರನ್ನು ತನಿಖೆಗೆ ಒಳಪಡಿಸಿ, ಕ್ರಮಕೈಗೊಳ್ಳಬೇಕು ಎಂದು ಕೋರಿದ್ದರು. ರಾಜಕೀಯ ವ್ಯವಸ್ಥೆಯನ್ನು ದೀರ್ಘವಾಗಿ ಕಳಂಕಕ್ಕೆ ಈಡ ಮಾಡಿರುವ ಭ್ರಷ್ಟಾಚಾರವು ನ್ಯಾಯಾಂಗವನ್ನು ಸಾಕಷ್ಟು ಕಾಲ ಕಲುಷಿತಗೊಳಿಸಿರಲಿಲ್ಲ. ಆದರೆ ಈಗ ಅದು “ಹಳೆಯ ವಿಷಯವಾಗುತ್ತಿದೆ” ಎಂದು ತಮ್ಮ ಪತ್ರದಲ್ಲಿ ಅವರು ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇತ್ತೀಚಿನ ವರ್ಷಗಳಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದ್ದರು.

8. ನ್ಯಾ. ಜೆ ಎಸ್ ವರ್ಮಾ

“ಸುಪ್ರೀಂ ಕೋರ್ಟಿನಲ್ಲಿ ಒಬ್ಬೇ ಒಬ್ಬ ಭ್ರಷ್ಟ ನ್ಯಾಯಮೂರ್ತಿಯೂ ಇಲ್ಲ ಎಂದು ನಾನು ಹೇಳಲಾರೆ. ಅದು ಸಾರ್ವಜನಿಕರ ಗಮನದಲ್ಲೂ ಇದೆ” ಎಂದು ನಿವೃತ್ತ ನ್ಯಾ, ಜೆ ಎಸ್ ವರ್ಮಾ (1997ರ ಮಾರ್ಚ್ ನಿಂದ 1998ರ ಜನವರಿಯರೆಗೆ ಸಿಜೆಐ ಆಗಿದ್ದವರು) ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೇ ನ್ಯಾಯಾಂಗದಲ್ಲಿ ಭ್ರಷ್ಟಾಷಾರ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವಿವರಿಸಿದ್ದರು.

ವರ್ಮಾ ಅವರ ಉತ್ತರಾಧಿಕಾರಿ, ನಿವೃತ್ತ ಸಿಜೆಐ ಪುಣ್ಚಿ ಅವರಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಅಂದಿನ ಪ್ರಧಾನಿ ಐ ಕೆ ಗುಜ್ರಾಲ್ ಅವರಿಗೆ ದಾಖಲೆ ಸಲ್ಲಿಸಿದ್ದೆ. ಆದರೆ ಅವರು ತನಿಖೆಗೆ ಆದೇಶಿಸಲಿಲ್ಲ ಎಂದು ವರ್ಮಾ ಹೇಳಿದ್ದರು.

“40 ವರ್ಷಗಳ ಹಿಂದೆ ನಾನು ವಕೀಲರ ಪರಿಷತ್ ಗೆ ಸೇರ್ಪಡೆಯಾದಾಗ ಯಾರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರಲಿಲ್ಲ. ಜಿಲ್ಲಾ ನ್ಯಾಯಾಲಯದಲ್ಲೂ ಇದರ ಬಗ್ಗೆ ಮಾತು ಇರುತ್ತಿರಲಿಲ್ಲ. ಈಗ ಸುಪ್ರೀಂ ಕೋರ್ಟಿನಲ್ಲಿನ ಭ್ರಷ್ಟಾಚಾರದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಇದು ನನ್ನ ಕೆನ್ನೆಗೆ ಬಾರಿಸಿದಂತಾಗುತ್ತಿದೆ”.

9. ನ್ಯಾ. ಎ ಕೆ ಗಂಗೂಲಿ

2011ರಲ್ಲಿ ಭ್ರಷ್ಟಾಚಾರದ ಕುರಿತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಕೆ ಗಂಗೂಲಿ ಹೀಗೆ ಹೇಳಿದ್ದರು:

“ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರೊ. ರಾಜ್ ಕುಮಾರ್ ಅವರೂ ಸಹ ಮಾತನಾಡಿರುವುದರ ಬಗ್ಗೆ ನನಗೆ ಸಂತೋಷವಾಗಿದೆ. ಇತ್ತೀಚೆಗಿನ ಮಹಾಭಿಯೋಗದ ಬಗ್ಗೆ ಅವರು ಉಲ್ಲೇಖಿಸಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಅವರು ನ್ಯಾ. ದಿನಕರನ್ ಅವರು ಸಿಕ್ಕಿಂ ಹೈಕೋರ್ಟ್ ನ್ಯಾಯಮೂರ್ತಿಯಲ್ಲ. ಬದಲಿಗೆ ಅವರು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂಬುದನ್ನು ತಿದ್ದುಪಡಿಕೊಳ್ಳಬೇಕಿದೆ. ಉಲ್ಲೇಖಿತ ಇಬ್ಬರು ನ್ಯಾಯಮೂರ್ತಿಗಳ ಪರ ನಾನು ನಿಲ್ಲುವುದಿಲ್ಲ. ಅವರ ಬಗ್ಗೆ ನನಗೆ ವಿಷಾದವಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಈ ರೀತಿಯ ಆರೋಪ ಕೇಳಿಬಂದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಹೇಗೆ? ಆದರೂ ಪ್ರೊ. ರಾಜ್ ಕುಮಾರ್ ಅವರು ಪುಸ್ತಕ ಹೊರತರಲು ತೋರಿರುವ ನಿಷ್ಪಕ್ಷಪಾತ ಮತ್ತು ಧೈರ್ಯಶಾಲಿ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ. ಇದೊಂದು ಮಹತ್ವದ ಪ್ರಯತ್ನ”