ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧದ ಸಾಮಾಜಿಕ ಮಾಧ್ಯಮ ಹೇಳಿಕೆ ತೆಗೆದುಹಾಕುವುದಾಗಿ ಬಿಜೆಪಿ ನಾಯಕ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಲೋಕಪಾಲ್ ಆದೇಶಿಸಿತ್ತು. ಈ ಕುರಿತಂತೆ ದುಬೆ ಮತ್ತು ದೇಹದ್ರಾಯ್ ಅವರು ಕ್ರಮವಾಗಿ ಫೇಸ್‌ಬುಕ್ ಮತ್ತು ಎಕ್ಸ್ ಖಾತೆಯಲ್ಲಿ ನೀಡಿದ ಹೇಳಿಕೆ ಕುರಿತು ಮೊಯಿತ್ರಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ದುಬೆ ಅವರು ಹೇಳಿಕೆ ತೆಗೆದುಹಾಕಿರುವುದನ್ನು ನ್ಯಾ. ಮನ್‌ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ಗಮನಕ್ಕೆ ತರಲಾಯಿತು. ಖುದ್ದು ಹಾಜರಿದ್ದ ವಕೀಲ ದೇಹದ್ರಾಯ್ ಅವರು ಟ್ವೀಟ್ ಅಳಿಸುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು
ಮಹುವಾ ಪರ ವಾದ ಮಂಡಿಸಿದ ವಕೀಲ ಸಮುದ್ರ ಸಾರಂಗಿ ಅವರು ಹೇಳಿಕೆಗಳು ಮಾನಹಾನಿಕರವಾಗಿದ್ದು, ಆಧಾರರಹಿತ ಮತ್ತು ಅಸಮರ್ಥನೀಯವಾದವು ಎಂದರು. ದುಬೆ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಮನ್ಯು ಭಂಡಾರಿ ಅವರು ಮಹುವಾ ಅವರ ವಿದೇಶಿ ಬ್ಯಾಂಕ್ ಖಾತೆಗಳ ಕುರಿತು ಸಿಬಿಐ ನಡೆಸಿದ ತನಿಖೆಗೆ ಸಂಬಂಧಿಸಿದಂತೆ ಲೋಕಪಾಲ್ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಹೇಳಿಕೆ ನೀಡಲಾಗಿತ್ತು ಎಂದರು.
ಆದರೆ ದುಬೆ ಮತ್ತು ದೇಹದ್ರಾಯ್ ಅವರು ಮಾಡಿದ ಆರೋಪಗಳು ಮೇಲ್ನೋಟಕ್ಕೆ ಲೋಕಪಾಲ್ ತೀರ್ಪಿಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದ್ದರಿಂದ ನ್ಯಾಯಾಲಯ ದುಬೆ ಮತ್ತು ದೇಹದ್ರಾಯ್ ಅವರಿಗೆ ಹೇಳಿಕೆ ತೆಗೆದುಹಾಕುವಂತೆ ಸೂಚಿಸಿತು.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹೀರಾನಂದಾನಿ ಅವರಿಂದ ಮೊಯಿತ್ರಾ ಲಂಚ ಮತ್ತು ದುಬಾರಿ ಉಡುಗೊರೆ ಸ್ವೀಕರಿಸಿದ್ದಾರೆ ಎಂದು ದೇಹದ್ರಾಯ್ ಈ ಹಿಂದೆ ಆರೋಪಿಸಿದ್ದರು. ಮೊಯಿತ್ರಾ ಸಂಸತ್ತಿನಲ್ಲಿ ಕೇಳಿದ 61 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳು ಹಿರಾನಂದಾನಿಯವರದ್ದಾಗಿದ್ದವು ಎಂದು ದೂರಲಾಗಿತ್ತು. ಇದನ್ನು ಆಧರಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭೆ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಇಬ್ಬರ ವಿರುದ್ಧ ಆಗ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪ್ರಸ್ತುತ ಹೊಸ ಅರ್ಜಿಯನ್ನು ಮಹುವಾ ಸಲ್ಲಿಸಿದ್ದರು.
ನಂತರ ಮಹುವಾ ಅವರನ್ನು ಉಚ್ಚಾಟಿಸುವಂತೆ ಲೋಕಸಭಾ ನೀತಿ ಸಮಿತಿ ಸೂಚಿಸಿತ್ತು. ಅದರಂತೆ ಡಿಸೆಂಬರ್ 8, 2023 ರಂದು ಅವರನ್ನು ಸಂಸತ್‌ನಿಂದ ಉಚ್ಚಾಟಿಸಲಾಗಿತ್ತು. ಆದರೆ ಆರೋಪ ನಿರಾಕರಿಸಿದ್ದ ಮಹುವಾ ಹೀರಾನಂದಾನಿ ತನ್ನ ಸ್ನೇಹಿತರಾಗಿದ್ದು ಲಾಭ ಮಾಡಿಕೊಳ್ಳುವ ಉದ್ದೇಶ ತನಗೆ ಇರಲಿಲ್ಲ. ತನ್ನ ವಿರುದ್ಧದ ಆರೋಪಗಳು ರಾಜಕೀಯ ದ್ವೇಷದ ಭಾಗ ಎಂದಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಮಹುವಾ ಮತ್ತೆ ಸಂಸದರಾಗಿ ಚುನಾಯಿತರಾಗಿದ್ದರು.