ಸುದ್ದಿಗಳು

ಕಾನೂನು ಸದಾ ನ್ಯಾಯಯುತ ಎಂದೇನೂ ಅಲ್ಲ; ಅಧಿಕಾರರೂಢರಿಗೆ ಸತ್ಯ ಹೇಳಿ; ದ್ವೇಷ ಭಾಷಣ ಖಂಡಿಸಿ: ನ್ಯಾ. ಚಂದ್ರಚೂಡ್

ಇತರರ ಅಭಿಪ್ರಾಯ ಒಪ್ಪಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಯಾವುದೇ ರೀತಿಯಲ್ಲಿ ಕುರುಡು ಅನುಸರಣೆ ಎಂದಾಗದು ಮತ್ತು ಹಾಗೆ ಸಹಿಸಿಕೊಳ್ಳುವುದು ದ್ವೇಷ ಭಾಷಣದ ವಿರುದ್ಧ ನಿಲ್ಲುವುದಿಲ್ಲ ಎಂದಲ್ಲ ಎಂಬುದಾಗಿ ಅವರು ಹೇಳಿದರು.

Bar & Bench

ಯಾವುದು ಕಾನೂನಾತ್ಮಕವೋ ಬಹುಶಃ ಅದು ಅನ್ಯಾಯದಿಂದ ಕೂಡಿರಬಹುದು, ಅದೇ ರೀತಿ ಯಾವುದು ನ್ಯಾಯಯುತವೋ ಅದು ಯಾವಾಗಲೂ ಕಾನೂನಾತ್ಮಕವಾಗಿರದೆ ಹೋಗಬಹುದು ಎಂಬುದಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅಭಿಪ್ರಾಯಪಟ್ಟರು. ಆ ಮೂಲಕ ಕಾನೂನಾತ್ಮಕತೆ ಮತ್ತು ನೈತಿಕತೆಯ ನಡುವಿನ ವ್ಯತ್ಯಾಸ ಅರಿಯುವಂತೆ ಯುವ ಕಾನೂನು ಪದವೀಧರರಿಗೆ ಅವರು ಕರೆ ನೀಡಿದರು.

ಗಾಂಧಿನಗರದಲ್ಲಿ ಶನಿವಾರ ನಡೆದ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಕಾನೂನು ಪದವೀಧರರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ಮಾತನಾಡಿದರು.

ನ್ಯಾಯದಲ್ಲಿ ಸದಾ ನೀತಿ ಇರುತ್ತದೆ ಎಂದೇನೂ ಅಲ್ಲ. ಆದ್ದರಿಂದ ಕಾನೂನನ್ನು ವಿಮರ್ಶಿಸಲು ಮತ್ತು ತಮ್ಮ ಸ್ವಂತ ಆತ್ಮಸಾಕ್ಷಿಗೆ ಅನುಸಾರವಾಗಿ ಮತ್ತು ನ್ಯಾಯೋಚಿತವಾಗಿ ನಡೆಯುವಂತೆ ಅವರು ಯುವ ಪದವೀಧರರಿಗೆ ತಿಳಿಸಿದರು.

ಭಾಷಣದ ಪ್ರಮುಖ ವಿಚಾರಗಳು

  • ನಿಮ್ಮ ವೃತ್ತಿ ಜೀನವದ ಅನೇಕ ಸಂದರ್ಭಗಳಲ್ಲಿ ಕಾನೂನಾತ್ಮಕವಾಗಿರುವುದು ಬಹುಶಃ ಅನ್ಯಾಯದಿಂದ ಕೂಡಿದೆ ಮತ್ತು ನ್ಯಾಯಯುತವಾದುದು ಕಾನೂನಾತ್ಮಕವಾಗಿಲ್ಲ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.

  • ಕಾನೂನು ಮತ್ತು ನ್ಯಾಯದ ನಡುವಿನ ವ್ಯತ್ಯಾಸದ ಮಹತ್ವವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ನ್ಯಾಯವನ್ನು ಮುನ್ನಡೆಸುವ ಹೆಜ್ಜೆಯಾಗಿ ಕಾನೂನನ್ನು ವಿಮರ್ಶಿಸಬೇಕು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನ್ಯಾಯದಲ್ಲಿ ಸದಾ ನೀತಿ ಇರುತ್ತದೆ ಎಂದೇನೂ ಅಲ್ಲ.

  • ರಾಜಕೀಯ, ಸಾಮಾಜಿಕ ಮತ್ತು ನೈತಿಕ ಘರ್ಷಣೆಗಳ ಹೆಚ್ಚುತ್ತಿರುವ ಗದ್ದಲ ಮತ್ತು ಗೊಂದಲದ ನಡುವೆ ಹೊಸ ಪದವೀಧರರಾಗಿ ಜಗತ್ತಿಗೆ ಕಾಲಿಡುತ್ತಿರುವ ನೀವು ನಿಮ್ಮ ಸ್ವಂತ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ನ್ಯಾಯೋಚಿತವಾಗಿ ನಡೆಯಬೇಕು.

  • ಅಧಿಕಾರದಲ್ಲಿರುವವರಿಗೆ ಸತ್ಯವನ್ನೇ ಹೇಳಿ. ಹೇಳಿಕೊಳ್ಳಲಾಗದ ಸಾಮಾಜಿಕ ಅನ್ಯಾಯಗಳ ಬಗ್ಗೆ ಸ್ಥಿರತೆ ಕಾಯ್ದುಕೊಳ್ಳಿ ಮತ್ತು ಅವುಗಳನ್ನು ಸರಿಪಡಿಸಲು ನಿಮ್ಮ ಅದೃಷ್ಟ ಮತ್ತು ಸವಾಲುಗಳನ್ನು ಬಳಸಿಕೊಳ್ಳಿ.

  • ಇತರರ ಅಭಿಪ್ರಾಯ ಒಪ್ಪಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಯಾವುದೇ ರೀತಿಯಲ್ಲಿ ಕುರುಡು ಅನುಸರಣೆ ಎಂದಾಗದು ಮತ್ತು ಹಾಗೆ ಸಹಿಸಿಕೊಂಡವರು ದ್ವೇಷ ಭಾಷಣದ ವಿರುದ್ಧ ನಿಲ್ಲುವುದಿಲ್ಲ ಎಂದರ್ಥವಲ್ಲ.

  • ಪರಿಸ್ಥಿತಿ ಮೊದಲಿಗಿಂತಲೂ ಚೆನ್ನಾಗಿದೆ ಅಥವಾ ಬೇರೆಡೆಗಳಿಗಿಂತಲೂ ಇಲ್ಲಿ ಉತ್ತಮವಾದ ಸ್ಥಿತಿ ಇದೆ ಎಂದು ಹೇಳುವ ಜನ ನಿಮಗೆ ಎದುರಾಗಬಹುದು. ಆದರೆ ನ್ಯಾಯದೆಡೆಗಿನ ಪಯಣ ಮಧ್ಯದಲ್ಲೇ ನಿಲ್ಲುವುದಿಲ್ಲ ಅಥವಾ ಇತರರಿಗಿಂತಲೂ ಕಡಿಮೆ ಅನ್ಯಾಯ ನಮಗಾಗಿದೆ ಎಂದು ಭಾವಿಸುವಲ್ಲಿಗೆ ಮುಗಿಯುವುದಿಲ್ಲ

  • (ಸಾಂಸ್ಕೃತಿಕ ಯಜಮಾನಿಕೆಯ ಅಪಾಯಗಳ ಕುರಿತು ಮಾತನಾಡುತ್ತಾ) ಅಮೆರಿಕದ ಚಿಂತಕಿ, ರಾಜ್ಯಶಾಸ್ತ್ರಜ್ಞೆ ಐರಿಸ್‌ ಯಂಗ್‌ ಚರ್ಚಿಸುವಂತೆ ಸಾಂಸ್ಕೃತಿಕ ಯಜಮಾನಿಕೆ ಎಂಬುದು ಸಮಾಜದಂಚಿನಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ದಬ್ಬಾಳಿಕೆಯ ಅನೇಕ ಮುಖಗಳಲ್ಲಿ ಒಂದಾಗಿದೆ. ಪ್ರಬಲ ಸಂಸ್ಕೃತಿ ಸದಾ ಅಂತಹ ಸಮುದಾಯಗಳನ್ನು ದಾರಿ ತಪ್ಪಿರುವಂತಹವು ಎಂದು ವ್ಯಾಖ್ಯಾನಿಸುತ್ತವೆ ಎಂಬುದು ಆಕೆಗೆ ತಿಳಿದಿತ್ತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಕೆಲವೊಮ್ಮೆ ಅಂಚಿನ ಸಮುದಾಯಗಳ ಆತ್ಮಾಭಿಮಾನದ ರಾಜಕಾರಣ ಆ ಉಪ ಸಮುದಾಯಗಳನ್ನು ಮತ್ತಷ್ಟು ಅಂಚಿಗೆ ತಳ್ಳಬಹುದು.

  • ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಪಡೆಯಲು ಕಾರಣವಾಗುವ ಬಹಳಷ್ಟು ಕೆಲಸಗಳು ಸಾಮಾಜಿಕ ಚಳವಳಿ, ರಾಜಕೀಯ ನಂಬಿಕೆ ಮತ್ತು ಸಾಂಸ್ಕೃತಿಕ ತಿಳಿವಳಿಕೆಯ ಮೂಸೆಯಲ್ಲಿ ಮತ್ತು ಕಾನೂನಿಗೆ ಅತೀತವಾಗಿ ನಡೆಯುತ್ತವೆ. ಕಾನೂನು ಮತ್ತು ನ್ಯಾಯದ ನಡುವಿನ ಸೂಕ್ಷ್ಮವನ್ನು ಅರಿಯಲು ನಮ್ಮದೇ ಸಂದರ್ಭಗಳನ್ನು ನಾವು ಗಮನಿಸಬಹುದು. ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಲಾಗಿದ್ದು 2005ರಲ್ಲಿ. ನಮ್ಮ ಇತಿಹಾಸದಲ್ಲಿ ಬಹಳ ಕಾಲದವರೆಗೆ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಿಸುವ ಕಾನೂನು ಇರಲಿಲ್ಲ. ಇತ್ತೀಚಿನ ಕಾರ್ಮಿಕ ಚಳವಳಿಗಳ ಪರಿಣಾಮವಾಗಿ ವಿಶ್ವದೆಲ್ಲೆಡೆ ಕನಿಷ್ಠ ವೇತನ ಜಾರಿಯಲ್ಲಿದೆ. ಸಮ್ಮತಿ ಹೊಂದಿರುವ ವಯಸ್ಕರ ನಡುವೆ ಸಲಿಂಗ ಸಂಬಂಧ ಅಪರಾಧವೆಂದು ಪರಿಗಣಿಸಿದ್ದ ಐಪಿಸಿ ಸೆಕ್ಷನ್‌ 377 ಅಸಾಂವಿಧಾನಿಕ ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ ಪೀಠದ ಭಾಗ ನಾನಾಗಿದ್ದೆ.

  • ಬಡತನದ ಹಿನ್ನೆಲೆಯ ಪದವಿಧರರು ಶೈಕ್ಷಣಿಕ ಸಾಲ ಪಡೆದವರಾಗಿದ್ದು ಅವರಿಗೆ ಹೆಚ್ಚಿನ ಸಂಬಳದ ಉದ್ಯೋಗ ಅಗತ್ಯವಿರುವುದರಿಂದ ಸಾಮಾಜಿಕ ನ್ಯಾಯದ ಪರವಾಗಿ ವಕೀಲಿಕೆ ಮಾಡುವುದು ಸಾಧ್ಯವಾಗದೆ ಹೋಗಬಹುದು. ಆದರೆ ನಿಮ್ಮ ವೃತ್ತಿ ಯಾವುದೇ ಇರಲಿ ನಿಮ್ಮ ವೃತ್ತಿ ಜೀವನದಲ್ಲಿ ಸಾಂವಿಧಾನಿಕ ನೈತಿಕತೆ ಅಳವಡಿಸಿಕೊಂಡರೆ ಅಂತಹವರು ಸಾಂವಿಧಾನಿಕ ಮೌಲ್ಯ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸಬಹುದು.

  • ಕಾನೂನನ್ನು ವಿಮರ್ಶಿಸುವುದರ ಜೊತೆಗೆ ಅವುಗಳನ್ನು ಉತ್ತಮಪಡಿಸಲು ಮತ್ತು ಹೆಚ್ಚು ನ್ಯಾಯಯುತವಾಗಿಸಲು ಅವುಗಳನ್ನು ಮರುರೂಪಿಸುವ ಮತ್ತು ಮರುವ್ಯಾಖ್ಯಾನಿಸಬಹುದಾದ ಮಾರ್ಗಗಳನ್ನು ಒಟ್ಟಿಗೆ ಕಂಡುಕೊಳ್ಳುವುದು ಮುಖ್ಯವಾಗಿದೆ. ಕಾನೂನಿನ ಮರುವ್ಯಾಖ್ಯಾನ ಎಂಬುದು ವಕೀಲರ ದೃಷ್ಟಿ ಮತ್ತು ನ್ಯಾಯಾಧೀಶರ ಕೌಶಲ್ಯದ ಮೂಲಕ ನಡೆಯುತ್ತದೆ.

  • ವೈಫಲ್ಯಗಳಿಗೆ ವಕೀಲರು ಹೆದರಬಾರದು. ನೀವು ಬೀಳುತ್ತಿರುವಾಗ ಏನನ್ನಾದರೂ ಸಾಧಿಸಲು ಯತ್ನಿಸದಿದ್ದರೆ, ನೀವು ಬಹುಶಃ ನಿಮ್ಮ ಸಾಮರ್ಥ್ಯಕ್ಕೆ ಪೂರಕವಾಗಿ ಯತ್ನಿಸುತ್ತಿಲ್ಲ ಎಂದಾಗುತ್ತದೆ. ಏಕೆಂದರೆ ಆತ್ಯಂತಿಕತೆಯಲ್ಲಿ ಯಶಸ್ಸು ಸಮಾನ ಪ್ರಮಾಣದಲ್ಲಿರುತ್ತಾರೆ. ಸಾಮಾಜಿಕ ವಕೀಲಿಕೆಯ ಮೊಗಸಾಲೆಯಲ್ಲಿ ನೀವಿದ್ದರೆ ವೈಫಲ್ಯಗಳನ್ನು, ಟೀಕೆಗಳನ್ನು ತೊಂದರೆಗಳನ್ನು ಎದುರಿಸದೆ ಯಾವ ಚಳವಳಿಯೂ ಎಂದಿಗೂ ನ್ಯಾಯವನ್ನು ಪಡೆಯದು ಎಂಬುದನ್ನು ಸದಾ ನೆನಪಿಡಿ.

  • ಸೀಮಿತ ಅವಧಿಯ ಗಮನವನ್ನಷ್ಟೇ ಸೆಳೆಯುವ ಸಾಮಾಜಿಕ ಮಾಧ್ಯಮ ಪ್ರಪಂಚದ ಚಂಚಲತೆಯನ್ನು ವಿಶೇಷವಾಗಿ ನೆನಪಿಟ್ಟುಕೊಳ್ಳಬೇಕಾದ ಅಗತ್ಯದ ಬಗ್ಗೆಯೂ ಅವರು ಮನವರಿಕೆ ಮಾಡಿಕೊಟ್ಟರು. ನೀವು ಮಾಡುವ ಕೆಲಸಗಳು ದೀರ್ಘಾವಧಿಯ ಪರಿಣಾಮವನ್ನಷ್ಟೇ ಹೊಂದಿದ್ದು ನಿಮ್ಮ ಹಾದಿಯಲ್ಲಿ ಎದುರಾಗುವ ನಿತ್ಯ ಚಾಂಚಲ್ಯದ ಬಗ್ಗೆ ಹೆಚ್ಚು ಚಿಂತಿತರಾಗಬಾರದು ಎಂದರು.

  • ಎಳೆಯ ಕುತೂಹಲಭರಿತ ಕಣ್ಣಿನ ಪದವೀಧರರಾಗಿ ಕಲ್ಯಾಣ ರಾಜ್ಯವನ್ನು ಪಡೆಯುವತ್ತ ನೀವು ಹಾತೊರೆಯಬೇಕು. ಏಕೆಂದರೆ ಬದಲಾವಣೆಯ ಮುಂಚೂಣಿಯಲ್ಲಿರುವವರು ಆಗಾಗ ಹತಾಶ ಕನಸುಗಾರರಾಗಿರುತ್ತಾರೆ.