NLAT 2020
NLAT 2020 
ಸುದ್ದಿಗಳು

ದುಷ್ಕೃತ್ಯದಲ್ಲಿ ಭಾಗಿಯಾದವರನ್ನು ಅನರ್ಹಗೊಳಿಸಲಾಗಿದೆ ಎನ್‌ಎಲ್‌ಎಸ್‌ಐಯು; ತೀರ್ಪು ಕಾಯ್ದರಿಸಿದ ಸುಪ್ರೀಂ ಕೋರ್ಟ್‌

Bar & Bench

ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್ಎಲ್‌ಎಸ್‌ಐಯು) ಪ್ರವೇಶ ಕಲ್ಪಿಸಲು ನಡೆಸಲಾಗಿದ್ದ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್ಎಲ್‌ಎಟಿ) ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ.

ಎನ್‌ಎಲ್‌ಎಟಿ ಪ್ರಶ್ನಿಸಿ ಎನ್‌ಎಲ್‌ಎಸ್‌ಐಯು ವಿಶ್ರಾಂತ ಉಪಕುಲಪತಿ ಪ್ರೊ. ವೆಂಕಟರಾವ್ ಮತ್ತು ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸೆಪ್ಟೆಂಬರ್ 21ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಇದೇ ಸಂದರ್ಭದಲ್ಲಿ ಎನ್‌ಎಲ್‌ಎಸ್‌ಐಯು ಪರ ವಕೀಲ ಸಜ್ಜನ್ ಪೂವಯ್ಯ ಅವರು “ಎನ್‌ಎಲ್‌ಎಟಿ ಫಲಿತಾಂಶ ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುವುದರಿಂದ ಇನ್ನಷ್ಟೇ ಫಲಿತಾಂಶ ಪ್ರಕಟಿಸಬೇಕಿದೆ. ಪರೀಕ್ಷೆಯ ದತ್ತಾಂಶವನ್ನು ವಿಶ್ಲೇಷಿಸಿದ್ದು, ದುಷ್ಕೃತ್ಯದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ಅನರ್ಹಗೊಳಿಸಲಾಗಿದೆ” ಎಂದು ಹೇಳಿದರು.

ಎನ್‌ಎಲ್‌ಎಸ್‌ಐಯು ಪರ ವಾದಿಸಿದ ಹಿರಿಯ ವಕೀಲ ಅರವಿಂದ್ ದಾತಾರ್ ಅವರು ಮೂರು ವಿಚಾರಗಳ ಕುರಿತು ನ್ಯಾಯಾಲಯದ ಗಮನಸೆಳೆದರು. ಎನ್‌ಎಲ್‌ಎಸ್‌ಐಯುನ ಶೈಕ್ಷಣಿಕ ಸಮಿತಿಗೆ ಸಂಬಂಧಿಸಿದ ಕಾರ್ಯಕಾರಿ ಸಮಿತಿಯ ಪಾತ್ರ, ವಿಶ್ವವಿದ್ಯಾಲಯವು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ (ಎನ್‌ಎಲ್‌ ಯು‌) ಒಕ್ಕೂಟದ ಭಾಗವಾಗಿದ್ದು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಬಹುದೇ ಎನ್ನುವ ವಿಚಾರ ಮತ್ತು ಪರೀಕ್ಷೆಯ ವಿಧಾನದ ಕುರಿತು ನ್ಯಾಯಾಲಯಕ್ಕೆ ವಿವರಿಸಿದರು.

ಕಡಿಮೆ ಅವಧಿ ನೀಡಿ ಪರೀಕ್ಷೆ ನಡೆಸಿದ್ದರಿಂದ ಬಹುಸಂಖ್ಯಾತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ಈ ಸಂಬಂಧ ವಾದಿಸುವಂತೆ ನ್ಯಾ. ಭೂಷಣ್ ಅವರು ದಾತಾರ್ ಅವರಿಗೆ ಸೂಚಿಸಿದರು. “ಪರಿಚ್ಛೇದ 14ರ ಉಲ್ಲಂಘನೆಯನ್ನೂ ಪ್ರಸ್ತಾಪಿಸಬೇಕಿದೆ” ಎಂದು ನ್ಯಾಯಮೂರ್ತಿಯು ದಾತಾರ್ ಅವರಿಗೆ ನಿರ್ದೇಶಿಸಿದರು.

ಎನ್‌ಎಲ್‌ಎಸ್‌ಐಯುವನ್ನು ಎನ್‌ಎಲ್‌ಎಸ್‌ ಒಕ್ಕೂಟದಿಂದ ಹೊರಗಿಟ್ಟಿರುವುದರಿಂದ ಸಾಮಾನ್ಯ ಕಾನೂನು ಪ್ರವೃತ್ತಿ ಪರೀಕ್ಷೆ (ಸಿಎಲ್‌ಎಟಿ) ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸುವ ಅರ್ಜಿಯ ಮೂರನೇ ಮನವಿಯನ್ನು ಪುರಸ್ಕರಿಸಲಾಗದು ಎಂದ ದಾತಾರ್ ಅವರನ್ನು ಕುರಿತು ನ್ಯಾ. ಭೂಷಣ್ ಅವರು “ಎನ್‌ಎಲ್‌ಎಸ್‌ಐಯುವನ್ನು ಕಚೇರಿಯಿಂದ ಹೊರಗಿಟ್ಟಿದ್ದಾರೆಯೇ ವಿನಾ ಒಕ್ಕೂಟದಿಂದ ಅಲ್ಲ” ಎಂದರು.

ಎನ್‌ಎಲ್‌ಯು ಒಕ್ಕೂಟದ ಆಡಳಿತ ಮಂಡಳಿಯು ಹಣಕಾಸನ್ನು ಹೈದಾರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ಗೆ ವರ್ಗಾಯಿಸುವಂತೆ ಎನ್‌ಎಲ್‌ಎಸ್‌ಐಯುಗೆ ಸೂಚಿಸಿದೆ. ಎನ್‌ಎಎಲ್‌ಎಸ್‌ಎಆರ್ ಅನ್ನು ಒಕ್ಕೂಟದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ದಾತಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಭೂಷಣ್ ಅವರು “ದಾತಾರ್ ಅವರೇ ಒಕ್ಕೂಟವು ದೇಶಾದ್ಯಂತ ಇರುವ ವಿದ್ಯಾರ್ಥಿಗಳಿಗೆ ಸಿಎಲ್‌ಎಟಿ ನಡೆಸಬೇಕು. ಇದು ಒಂದು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ್ದಲ್ಲ” ಎಂದರು.

ಎನ್‌ಎಲ್‌ಎಸ್‌ಐಯುವನ್ನು ಒಕ್ಕೂಟದಲ್ಲಿ ಉಳಿಯಲು ಅವಕಾಶ ನೀಡಲಾಗುವುದೇ ಎಂಬುದರ ಕುರಿತು ಒಕ್ಕೂಟವನ್ನು ಪ್ರಶ್ನಿಸುವುದಾಗಿ ನ್ಯಾ. ಭೂಷಣ್ ಹೇಳಿದರು.

ವಿಚಾರಣೆಯ ಪ್ರಮುಖ ಅಂಶಗಳು ಇಂತಿವೆ.

  • ದೇಶದಲ್ಲೇ ಟ್ರೈಮಿಸ್ಟರ್ ವ್ಯವಸ್ಥೆಯಿರುವ ಏಕೈಕ ಕಾನೂನು ಶಾಲೆ ಬೆಂಗಳೂರಿನ ಎನ್‌ಎಲ್‌ಎಸ್‌ಐಯು. ಆದ್ದರಿಂದ ಸಿಎಲ್‌ಎಟಿ ಮುಂದೂಡದಂತೆ ಹಲವು ಬಾರಿ ಕೋರಲಾಗಿತ್ತು. ಆದರೆ, ಉದ್ದೇಶಪೂರ್ವಕವಾಗಿ ಪರೀಕ್ಷೆಯನ್ನು ಸೆಪ್ಟೆಂಬರ್ 28ಕ್ಕೆ ನಿಗದಿಗೊಳಿಸಲಾಗಿದೆ. ಒಪ್ಪಂದದ ನಿಯಮಗಳನ್ನು ಅನುಸರಿಸುವುದು ಅಸಾಧ್ಯವೆನಿಸಿದಲ್ಲಿ ನಮ್ಮ ತೀರ್ಮಾನಗಳನ್ನು ಕೈಗೊಳ್ಳಬಹುದು ಎಂದ ಅರವಿಂದ್ ದಾತಾರ್.

  • ಎನ್‌ಎಲ್‌ಎಸ್‌ಐಯು ಬೈ-ಲಾ ಉಲ್ಲಂಘಿಸಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಸಂಬಂಧಿತ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಸಂಪರ್ಕಿಸದೇ ಪರೀಕ್ಷೆ ಮುಂದೂಡುವ ಕುರಿತು ಬೈಲಾದಲ್ಲಿ ಎಲ್ಲಿ ಹೇಳಲಾಗಿದೆ?

  • ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಎನ್‌ಎಲ್‌ಎಸ್‌ಐಯು ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಕೇವಲ 20 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶ್ವವಿದ್ಯಾಲಯ ಕಡಿಮೆ ಕಾಲಾವಕಾಶ ನೀಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಲಾಗಿಲ್ಲ ಎಂದ ನ್ಯಾ. ಎಂ ಆರ್ ಶಾ.

  • ಎಲ್ಲರೂ ಒಕ್ಕೂಟದಿಂದ ಹೊರನಡೆಯುವ ಮಾತನಾಡಿದರೆ ಒಕ್ಕೂಟ ರಚಿಸುವ ಅಗತ್ಯವೇನಿತ್ತು? ಇದು ಖಾಸಗಿ ಕ್ಲಬ್ ಅಲ್ಲ. ಎಲ್ಲರೂ ಪ್ರಮುಖ ಉದ್ದೇಶದಿಂದ ಒಗ್ಗೂಡಿದ್ದು, ಪ್ರತ್ಯೇಕ ವಿಚಾರ ಮುಂದಿಟ್ಟರೆ ಎಲ್ಲವೂ ಕುಸಿಯಲಿದೆ ಎಂದ ಒಕ್ಕೂಟ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಎಸ್ ನರಸಿಂಹನ್.