NLSIU 
ಸುದ್ದಿಗಳು

ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲಿರುವ ಎನ್‌ಎಲ್‌ಎಸ್‌ಐಯು; ಪ್ರವೇಶಕ್ಕೆ ಸಿಎಲ್‌ಎಟಿ ಅಂಕಗಳನ್ನು ಪರಿಗಣಿಸುವುದಿಲ್ಲ

“ವಿಶ್ವವಿದ್ಯಾಲಯವು ಸಿಎಲ್‌ಎಟಿ 2020 ಅಂಕಗಳನ್ನು 2020-21ರ ಶೈಕ್ಷಣಿಕ ವರ್ಷದ ಪ್ರವೇಶಾತಿಗೆ ಪರಿಗಣಿಸುವುದಿಲ್ಲ,” ಎಂದು ತಿಳಿಸಲಾಗಿದೆ.

Bar & Bench

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ಕಾನೂನು ಕೋರ್ಸ್‌ ಗಳ ದಾಖಲಾತಿಗಾಗಿ ತನ್ನದೇ ಪ್ರತ್ಯೇಕ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ, 2020 (ಎನ್‌ಎಲ್ಎಟಿ) ನಡೆಸಲಿದೆ.

“ಮನೆಯಿಂದಲೇ ಪಾಲ್ಗೊಳ್ಳಬಹುದಾದ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ, 2020 (ಎನ್‌ಎಲ್‌ಎಟಿ) ಎನ್ನುವ ಆನ್‌ ಲೈನ್‌ ಪ್ರವೇಶ ಪರೀಕ್ಷೆಗಳನ್ನು ನಡೆಸಿ ಅದರ ಒಟ್ಟಾರೆ ಅಂಕಗಳ ಆಧಾರದಲ್ಲಿ (ಅಗ್ರಿಗೇಟ್‌ ಮಾರ್ಕ್ಸ್) ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುತ್ತದೆ. ಈ ಪ್ರವೇಶ ಪರೀಕ್ಷೆಯು ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಬಿ.ಎ.,ಎಲ್‌ಎಲ್‌ಬಿ.(ಆನರ್ಸ್‌) ಪದವಿ‌ ಮತ್ತು ಸ್ನಾತಕೋತ್ತರ ಎಲ್‌ಎಲ್‌ಎಂ ಪದವಿಗಳ ಪ್ರವೇಶಾತಿಗಾಗಿ ನಡೆಯಲಿದೆ.

“ವಿಶ್ವವಿದ್ಯಾಲಯವು ಸಿಎಲ್‌ಎಟಿ 2020 ಪರೀಕ್ಷೆಯ ಅಂಕಗಳನ್ನು 2020-21ರ ಶೈಕ್ಷಣಿಕ ವರ್ಷದ ದಾಖಲಾತಿಗೆ ಪರಿಗಣಿಸುವುದಿಲ್ಲ.”
ಎನ್‌ಎಲ್‌ಎಸ್‌ಐಯು, ಬೆಂಗಳೂರು
ಆನ್‌ಲೈನ್ ಅರ್ಜಿ ಪೋರ್ಟಲ್‌ ಸೆಪ್ಟೆಂಬರ್‌ 3ರಿಂದ ಆರಂಭಗೊಂಡಿದ್ದು ಸೆಪ್ಟೆಂಬರ್ ‌10, 2020ರ ಮಧ್ಯರಾತ್ರಿಗೆ ಮುಕ್ತಾಯವಾಗಲಿದೆ. ಎಲ್ಲ ಅರ್ಜಿಗಳನ್ನೂ ಆನ್‌ಲೈನ್‌ ಮೂಲಕವೇ ಈ ಲಿಂಕ್‌ನಲ್ಲಿ ಸಲ್ಲಿಸಬೇಕು: https://admissions.nls.ac.in/.
ಎನ್‌ಎಲ್‌ಎಸ್ಐಯು ಟ್ರೈಮೆಸ್ಟರ್‌ ಪದ್ಧತಿಯನ್ನು ಒಳಗೊಂಡಿದೆ. ಇದರಿಂದಾಗಿ ಸೆಪ್ಟೆಂಬರ್‌ 7ರ ನಂತರವೂ ಒಂದೊಮ್ಮೆ ಕಾನೂನು ಪ್ರವೇಶ ಪರೀಕ್ಷೆಗಳು ನಡೆಯದೇ ಹೋದಲ್ಲಿ ವಿಶೇಷ ಸಮಸ್ಯೆಗಳು ಉದ್ಭವಿಸಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಎನ್‌ಎಲ್‌ಎಸ್‌ಐಯು ಪ್ರಕಟಣೆ

ಇದರ ಪರಿಣಾಮವಾಗಿ ಪ್ರತ್ಯೇಕ ಪರೀಕ್ಷೆಯೊಂದನ್ನು ನಡೆಸಲು ನಿರ್ಧರಿಸಲಾಗಿದ್ದು, ಎನ್‌ಎಲ್ಎಟಿ ಪ್ರವೇಶ ಪರೀಕ್ಷೆಯು ಸೆಪ್ಟೆಂಬರ್‌ 12, 2020ರಂದು ಮುಂದಿನ ಶೈಕ್ಷಣಿಕ ವರ್ಷದ ಕೋರ್ಸ್‌ಗಳಿಗಾಗಿ ನಡೆಯಲಿದೆ.

ಒಂದೊಮ್ಮೆ ಎನ್‌ಎಲ್‌ಎಸ್‌ಐಯು 2020ರ ಸೆಪ್ಟೆಂಬರ್‌ ಅಂತ್ಯದೊಳಗೆ ಪ್ರವೇಶಾತಿಗಳನ್ನು ಕಲ್ಪಿಸದೆ ಹೋದರೆ, ಅದು ಪ್ರವೇಶಾತಿ ರಹಿತ ‘ಶೂನ್ಯ ವರ್ಷ’ವಾಗಿ ಪರಿಗಣಿತವಾಗುತ್ತದೆ. ಇದರಿಂದಾಗಿ ಭಾರತದ ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯದಲ್ಲಿ ಕಲಿಯುವ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತರಾಗಲಿದ್ದಾರೆ. ಹೀಗಾಗಿ ಪ್ರತ್ಯೇಕ ಪ್ರವೇಶ ಪರೀಕ್ಷೆ ಅನಿವಾರ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವೇಶ ಪರೀಕ್ಷೆಯನ್ನು ನಡೆಸುವ ವಿಧಾನದ ಬಗ್ಗೆ ಪ್ರಕಟಣೆಯಲ್ಲಿ ಹೀಗೆ ತಿಳಿಸಲಾಗಿದೆ:

  • ಆನ್ ಲೈನ್‌ ಪ್ರವೇಶ ಪರೀಕ್ಷೆಯು ಸೆಪ್ಟೆಂಬರ್‌ 12,2020ರಂದು ನಡೆಯಲಿದೆ.

  • ಸಂಪರ್ಕಕ್ಕೆ (ಕನೆಕ್ಟಿವಿಟಿ) ಸಂಬಂಧಿಸಿದ ಸಮಸ್ಯೆಗಳಿಗೆ, ಅಂತರ್ಜಾಲ ಸಂರ್ಪದಲ್ಲಿನ ವ್ಯತ್ಯಯಕ್ಕೆ ಎನ್‌ಎಲ್‌ಎಸ್‌ಐಯು ಜವಾಬ್ದಾರಿಯಲ್ಲ. ಯಾವುದೇ ಅಭ್ಯರ್ಥಿಯು ಪರೀಕ್ಷಾ ಶಿಷ್ಟಾಚಾರ ಉಲ್ಲಂಘಿಸಿದರೆ ಅವರ ಪರೀಕ್ಷೆಯನ್ನು ರದ್ದು ಮಾಡುವ ಹಕ್ಕು ಎನ್‌ಎಲ್‌ಎಸ್‌ಐಯುಗೆ ಇರಲಿದೆ.

  • ಇದು ಮುಕ್ತ ಪುಸ್ತಕ (ಓಪನ್‌ ಬುಕ್‌) ಪರೀಕ್ಷೆಯಾಗಿರುವುದಿಲ್ಲ; ಅಭ್ಯರ್ಥಿಗಳು ಇತರೆ ಯಾವುದೇ ವ್ಯಕ್ತಿಯಿಂದ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯವನ್ನು ಪಡೆಯುವಂತಿಲ್ಲ.

  • ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ಒಂದು ಅವಕಾಶ ಮಾತ್ರವೇ ಇರುತ್ತದೆ. ಮುಂದಿನ ಪ್ರಶ್ನೆಗೆ ಹೋದ ನಂತರ ಹಿಂದಿನ ಪ್ರಶ್ನೆಗೆ ಮರಳಲಾಗದು.

  • ಅಭ್ಯರ್ಥಿಗಳು ಮುದ್ರಣ, ಇಲೆಕ್ಟ್ರಾನಿಕ್‌ ಅಥವಾ ಇನ್ನಾವುದೇ ಸಂಪನ್ಮೂಲದಿಂದ ಸಹಾಯ ಪಡೆಯುವಂತಿಲ್ಲ.

ಸಂಪೂರ್ಣ ವಿವರಗಳಿಗಾಗಿ ಪ್ರಕಟಣೆಯ ಈ ಲಿಂಕ್ ಕ್ಲಿಕ್ಕಿಸಿ