ರಾಜ್ಯದಲ್ಲಿ ʼದ ಕೇರಳ ಸ್ಟೋರಿʼ ಚಿತ್ರಕ್ಕೆ ಅನಧಿಕೃತ ನಿರ್ಬಂಧ ಹೇರಲಾಗಿದೆ ಎಂಬುದಾಗಿ ಚಿತ್ರ ನಿರ್ಮಾಪಕರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ವಾಸ್ತವವಾಗಿ ಚಿತ್ರಕ್ಕೆ ಪ್ರೇಕ್ಷಕರ ಸ್ಪಂದನೆ ತೀರಾ ಕೆಳಮಟ್ಟದಲ್ಲಿದ್ದರಿಂದ ಸಿನಿಮಾ ಚಿತ್ರಮಂದಿರಗಳು ಸಿನಿಮಾ ಎಂದು ಸರ್ಕಾರ ತನ್ನ ಪ್ರತಿ- ಅಫಿಡವಿಟ್‌ನಲ್ಲಿ ದಾಖಲಿಸಿದೆ.
“ನಟರ ಕಳಪೆ ಪ್ರದರ್ಶನ ಇಲ್ಲವೇ ಚಿತ್ರಕ್ಕೆ ಸೂಕ್ತ ಸ್ಪಂದನೆ ದೊರೆಯುದಿದ್ದುದು ಅಥವಾ ಸಿನಿಮಾದಲ್ಲಿ ಪ್ರಸಿದ್ಧ ನಟರು ನಟಿಸದೇ ಇದ್ದುದರಿಂದ ಮೇ 7ರ ನಂತರ ಚಿತ್ರಮಂದಿರ ಮಾಲೀಕರು ಸ್ವಪ್ರೇರಣೆಯಿಂದ ಚಿತ್ರಪ್ರದರ್ಶನ ಸ್ಥಗಿತಗೊಳಿಸಿದ್ದಾರೆ” ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ತಮಿಳುನಾಡಿನಲ್ಲಿ ಚಿತ್ರವನ್ನು ಅನಧಿಕೃತವಾಗಿ ನಿಷೇಧಿಸಲಾಗಿದೆ ಎಂದು ಆರೋಪಿಸಿ ಚಲನಚಿತ್ರ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದೆ. ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದರಿಂದ ರಾಜ್ಯದ ಚಿತ್ರಮಂದಿರಗಳು ಸಿನಿಮಾ ಹಿಂಪಡೆದಿವೆ. ಚಿತ್ರ ಪ್ರದರ್ಶನವನ್ನು ಸರ್ಕಾರ ಬೆಂಬಲಿಸುವುದಿಲ್ಲ ಎಂದು ಅಧಿಕಾರಿಗಳು ಚಲನಚಿತ್ರ ಪ್ರದರ್ಶಕರಿಗೆ ಸ್ಪಷ್ಟವಾಗಿ ಅನೌಪಚಾರಿಕ ಸಂದೇಶ ಕಳುಹಿಸಿದ್ದರಿಂದ ಚಿತ್ರಮಂದಿರಗಳು ಪ್ರದರ್ಶನ ಏರ್ಪಡಿಸಲಿಲ್ಲ ಎಂದು ಚಿತ್ರ ನಿರ್ಮಾಪಕರು ದೂರಿದ್ದರು.
ಆದರೆ ಚಿತ್ರದ ಮೇಲೆ ಅನಧಿಕೃತ ನಿರ್ಬಂಧ ಹೇರಲಾಗಿದೆ ಎಂಬ ಹೇಳಿಕೆಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. “ಸಂವಿಧಾನದ 32ನೇ ವಿಧಿಯಡಿ ನ್ಯಾಯಾಲಯದಿಂದ ಅನುಚಿತ ಲಾಭ ಪಡೆಯಲು ಉದ್ದೇಶಪೂರ್ವಕವಾಗಿ ಈ ಸುಳ್ಳು ಹೇಳಿಕೆ ನೀಡಲಾಗಿದೆ. ಅರ್ಜಿದಾರರು ಈ ಅರ್ಜಿಯ ನೆಪದಲ್ಲಿ ತಮ್ಮ ಚಿತ್ರಕ್ಕೆ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ” ಎಂದು ಉತ್ತರದಲ್ಲಿ ತಿಳಿಸಲಾಗಿದೆ.
"ಹತ್ತೊಂಬತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆ ಮಾಡಲಾಗಿದ್ದು ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ ಎಂದು ಸಾಬೀತುಪಡಿಸುವಂತಹ ಯಾವುದೇ ದಾಖಲೆಯನ್ನು ಅರ್ಜಿದಾರರು ಸಲ್ಲಿಸಿಲ್ಲ. ಸರ್ಕಾರ ವಾಸ್ತವದಲ್ಲಿ ಪ್ರತಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಪೊಲೀಸ್ ಪಡೆ ನಿಯೋಜಿಸಿದ್ದು ಇದರಿಂದಾಗಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆ ಇಲ್ಲದೆ ಚಿತ್ರ ವೀಕ್ಷಿಸಬಹುದು” ಎಂದು ಸರ್ಕಾರ ಉತ್ತರ ನೀಡಿದೆ.