Supreme Court of India 
ಸುದ್ದಿಗಳು

ಕಾಂವಡ್ ಯಾತ್ರೆ ವೇಳೆ ವರ್ತಕರು ಸ್ವಪ್ರೇರಣೆಯಿಂದ ಹೆಸರು ಪ್ರದರ್ಶಿಸುವುದಕ್ಕೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್

ಆದರೆ ಒತ್ತಾಯಪೂರ್ವಕವಾಗಿ ಅಂಗಡಿ ಇಲ್ಲವೇ ಹೋಟೆಲ್ ಮಾಲೀಕರು ಮತ್ತು ಉದ್ಯೋಗಿಗಳ ಹೆಸರು ಬಹಿರಂಗಪಡಿಸುವುದಕ್ಕೆ ನೀಡಿರುವ ಮಧ್ಯಂತರ ತಡಯಾಜ್ಞೆಯನ್ನು ಪೀಠ ವಿಸ್ತರಿಸಿದೆ.

Bar & Bench

ಕಾಂವಡ್ ಯಾತ್ರೆಯ ಸಂದರ್ಭದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರು ಮತ್ತು ವಿವರಗಳನ್ನು ಅಂಗಡಿಗಳ ಹೊರಗೆ ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಆದೇಶಕ್ಕೆ ತಾನು ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಿಸ್ತರಿಸಿದೆ [ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಜುಲೈ 22 ರಂದು ನೀಡಿದ ಮಧ್ಯಂತರ ಆದೇಶ ಮುಂದುವರೆಯಲಿದೆ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ ಪೀಠ ಹೇಳಿದೆ.

ಉತ್ತರ ಪ್ರದೇಶ (ಯುಪಿ), ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯಗಳು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಸಮಯಾವಕಾಶ ನೀಡಿದ ನ್ಯಾಯಾಲಯ "ಮಧ್ಯಂತರ ಆದೇಶ  ಮುಂದುವರೆಯಲಿದೆ ಎಂದಿತು.

ಆದರೆ ಯಾತ್ರೆ ವೇಳೆ ಸ್ವಪ್ರೇರಣೆಯಿಂದ ಅಂಗಡಿ ಮಾಲೀಕರ ಇಲ್ಲವೇ ಉದ್ಯೋಗಿಗಳ ಹೆಸರು ಬಹಿರಂಗಪಡಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

 "ಸ್ವಯಂಪ್ರೇರಿತವಾಗಿ ಹೆಸರುಗಳನ್ನು ಪ್ರದರ್ಶಿಸಲು ಯಾವುದೇ ಸಮಸ್ಯೆ ಇಲ್ಲ. ಡಾಬಾದ ಹೊರಗೆ ಮಾಲೀಕರ ಹೆಸರುಗಳು ಮತ್ತು ಉದ್ಯೋಗಿಗಳ ಹೆಸರುಗಳನ್ನು ಹಾಕಲು ಒತ್ತಾಯಿಸುವಂತಿಲ್ಲ ಎಂದು ನಮ್ಮ ಆದೇಶ  ಹೇಳುತ್ತದೆ" ಎಂದು ನ್ಯಾಯಾಲಯ ವಿವರಿಸಿದೆ.

ಅಂಗಡಿಗಳ ಹೊರಗೆ ಹೆಸರು ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಜುಲೈ 22 ರಂದು ತಡೆ ನೀಡಿತ್ತು.

ಕಾಂವಡ್ ಯಾತ್ರಾ ಋತುವಿನಲ್ಲಿ ತಮ್ಮ ಆವರಣದ ಹೊರಗೆ ತಮ್ಮ ಹೆಸರನ್ನು ಪ್ರದರ್ಶಿಸಲು ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳಿಗೆ ವಿವಿಧ ರಾಜ್ಯಗಳ ಅಧಿಕಾರಿಗಳು ಹೊರಡಿಸಿದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಜುಲೈ 22 ರಂದು ತಡೆಹಿಡಿದಿತ್ತು.

ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸುವಂತೆ ಮುಜಫರ್‌ನಗರದಲ್ಲಿ ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ನಿರ್ದೇಶನವನ್ನು ನೆರೆಯ ರಾಜ್ಯಗಳು ಸಹ ಅಳವಡಿಸಿಕೊಂಡಿದ್ದವು.

ಹೀಗೆ ಮಾಡುವುದರಿಂದ ಮುಸ್ಲಿಂ ವರ್ತಕರ ವಿರುದ್ಧ ತಾರತಮ್ಯ ಎಸಗಿದಂತಾಗುತ್ತದೆ ಎಂದು ದೂರಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್), ಸಂಸದೆ ಮಹುವಾ ಮೊಯಿತ್ರಾ, ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅಪೂರ್ವಾನಂದ್ ಹಾಗೂ ಸಾಮಾಜಿಕ ಹೋರಾಟಗಾರ ಆಕಾರ್ ಪಟೇಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.