<div class="paragraphs"><p>Supreme Court</p></div>

Supreme Court

 
ಸುದ್ದಿಗಳು

ವಣ್ಣಿಯಾರ್ ಸಮುದಾಯಕ್ಕೆ ನೀಡಲಾಗಿದ್ದ ಶೇ. 10.5 ಒಳ ಮೀಸಲಾತಿ ರದ್ದುಪಡಿಸಿದ ಸುಪ್ರೀಂ ಕೋರ್ಟ್‌

Bar & Bench

ತಮಿಳುನಾಡಿನ ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ. 10.5 ಮೀಸಲಾತಿಯನ್ನು ಕಲ್ಪಿಸಿ ರಾಜ್ಯ ಸರ್ಕಾರವು ಜಾರಿಗೆ ತಂದಿದ್ದ ಕಾಯಿದೆಯನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಸುಪ್ರಿಂ ಕೋರ್ಟ್‌ ಗುರುವಾರ ಎತ್ತಿ ಹಿಡಿದಿದೆ [ಪಟ್ಟಾಳಿ ಮಕ್ಕಳ್‌ ಕಚ್ಚಿ ವರ್ಸಸ್‌ ಎ . ಮೈಲೇರುಂಪೆರುಮಾಳ್‌ ಮತ್ತು ಇತರರು].

ಕಾಯಿದೆಯನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ಪೀಠವು ಆಲಿಸಿತು.

"ವಣ್ಣಿಯಾರ್ ಸಮುದಾಯವನ್ನು ಇತರೆ ಸಮೂಹಗಳಿಂದ ಪ್ರತ್ಯೇಕವಾಗಿ ಪರಿಗಣಿಸಲು ಯಾವುದೇ ಆಧಾರವಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಹಾಗಾಗಿ 2021ರಲ್ಲಿ ಜಾರಿಗೆ ತಂದ ಈ ಕಾಯಿದೆಯು ಸಂವಿಧಾನದ 14 ಮತ್ತು 16ನೇ ವಿಧಿಗಳಿಗೆ ವಿರುದ್ಧವಾಗಿದ್ದು ಸಾಂವಿಧಾನಿಕ ವ್ಯಾಪ್ತಿಯ ಹೊರತಾಗಿದೆ," ಎಂದು ನ್ಯಾಯಾಲಯವು ಹೇಳಿತು.

ಇದೇ ವೇಳೆ ನ್ಯಾಯಾಲಯವು, "ರಾಷ್ಟ್ರಪತಿಗಳ ಸಮ್ಮತಿಯ ಮೇರೆಗೆ ಒಳಮೀಸಲಾತಿಯನ್ನು ಕಲ್ಪಿಸಲು ರಾಜ್ಯ ಸರ್ಕಾರವನ್ನು ನಿರ್ಬಂಧಿಸಲಾಗದು. ಒಳಮೀಸಲಾತಿಯನ್ನು ನೀಡಲು ಜಾತಿಯು ಆಧಾರವಾಗಬಹುದು ಆದರೆ, ಅದುವೇ ಏಕೈಕ ಆಧಾರವಾಗಬಾರದು," ಎಂದು ಸ್ಪಷ್ಟಪಡಿಸಿತು.

ಅತಿ ಹಿಂದುಳಿದ ವರ್ಗಗಳಿಗೆ ಹಾಗೂ ಡಿನೋಟಿಫೈಡ್‌ ಸಮುದಾಯಗಳಿಗೆ ನೀಡಲಾಗುವ ಶೇ. 20 ಮೀಸಲಾತಿಯಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ.10.5 ಒಳ ಮೀಸಲಾತಿಯನ್ನು ಜಾರಿಗೊಳಿಸಿ ತಮಿಳುನಾಡು ಸರ್ಕಾರವು 2021ರಲ್ಲಿ ಜಾರಿಗೆ ತಂದಿದ್ದ ಕಾಯಿದೆಯನ್ನು ಪ್ರಶ್ನಿಸಲಾಗಿತ್ತು.

ಅತಿ ಹಿಂದುಳಿದ ಜಾತಿಗಳಿಗೆ ಸೇರುವ ವಣ್ಣಿಯಾರ್ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು. ಅತಿ ಹಿಂದುಳಿದ ವರ್ಗಗಳ ಸಮೂಹದಲ್ಲಿ ತಾವು ಸಂಖ್ಯಾ ಬಾಹುಳ್ಯದಲ್ಲಿ ಹೆಚ್ಚಿದ್ದರೂ ಇತರೆ ಸಮುದಾಯಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಮುದಾಯದ ಅಳಲಾಗಿತ್ತು.

ಆದರೆ, ಈ ಕಾಯಿದೆಯನ್ನು ಮದ್ರಾಸ್‌ ಹೈಕೋರ್ಟ್‌ ಕಳೆದ ವರ್ಷ ನವೆಂಬರ್‌ 1ರಂದು ರದ್ದುಪಡಿಸಿತ್ತು. ವಣ್ಣಿಯಾರ್ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ಬಿಂಬಿಸುವ ಯಾವುದೇ ಸೂಕ್ತ ದತ್ತಾಂಶಗಳಿಲ್ಲದೆ ಹಾಗೂ ಯಾವುದೇ ವಸ್ತುನಿಷ್ಠ ಮಾನದಂಡಗಳಿಲ್ಲದೆ ಕಾಯಿದೆಯನ್ನು ಜಾರಿಗೊಳಿಸಲಾಗಿದೆ ಎಂದು ಒಳಮೀಸಲಾತಿ ರದ್ದತಿಗೆ ಕಾರಣವಾದ ಅಂಶವನ್ನು ನ್ಯಾಯಾಲಯವು ತನ್ನ ಆದೇಶದಲ್ಲಿ ವಿವರಿಸಿತ್ತು.