ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಸುಗ್ರೀವಾಜ್ಞೆ- 2020ರ ಸೆಕ್ಷನ್ 5ರಡಿ ನಿಯಮ ರೂಪಿಸಿ ಅವುಗಳನ್ನು ಜಾರಿಗೆ ತರುವವರೆಗೆ (ದನಗಳ ಸಾಗಣೆಗೆ ನಿರ್ಬಂಧ) ಯಾವುದೇ ವ್ಯಕ್ತಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಕರ್ನಾಟಕ ಸರ್ಕಾರ ಬುಧವಾರ ರಾಜ್ಯ ಹೈಕೋರ್ಟ್‌ಗೆ ತಿಳಿಸಿದೆ.
ಈ ವಾದ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್ ಎಸ್ ಮಗದುಮ್ ಅವರಿದ್ದ ಪೀಠ ಈ ಹಂತದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಸುಗ್ರೀವಾಜ್ಞೆಯಿಂದಾಗಿ ಸಂವಿಧಾನದ 19 (1) (ಜಿ) ಅಡಿಯಲ್ಲಿ ವ್ಯಾಪಾರ ಮತ್ತು ಉದ್ಯೋಗದ ಸ್ವಾತಂತ್ರ್ಯ ಉಲ್ಲಂಘನೆಯಾಗಿದೆ. ಅಲ್ಲದೆ ಸಂವಿಧಾನದ 21 ನೇ ವಿಧಿಯಡಿ ಒದಗಿಸಲಾಗಿರುವ ಆಹಾರದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಜ. 5ರಂದು ಬಂದ ಸುಗ್ರೀವಾಜ್ಞೆ ಸೆಕ್ಷನ್ 4ರ ಅಡಿ ಜಾನುವಾರು ವಧೆ ನಿಷೇಧಿಸಿದೆ. ತಪ್ಪಿದಲ್ಲಿ ಕನಿಷ್ಠ ಮೂರು ವರ್ಷ ಮತ್ತು ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ಮತ್ತು/ಅಥವಾ ಪ್ರತಿ ರಾಸಿಗೆ ರೂ 50,000ಕ್ಕೆ ಕಡಿಮೆಯಿಲ್ಲದಂತೆ ದಂತೆ ರೂ. 5 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ. ಪುನರಾವರ್ತಿತ ಅಪರಾಧಗಳಿಗಾಗಿ ರೂ ಒಂದು ಲಕ್ಷಕ್ಕಿಂತ ಕಡಿಮೆಯಿಲ್ಲದಂತೆ ರೂ. 10 ಲಕ್ಷದ ವರೆಗೆ ವಿಸ್ತೃತ ದಂಡ ವಿಧಿಸಬಹುದಾಗಿದೆ.
ಆದರೆ, ವಿಚಾರಣೆಗಳ ವೇಳೆ ನ್ಯಾಯಾಲಯ ಸುಗ್ರೀವಾಜ್ಞೆಯ ಸೆಕ್ಷನ್ 5ರ ಕಾರಣದಿಂದಾಗಿ ನಿರ್ದಿಷ್ಟವಾಗಿ ರೈತರು ಮತ್ತು ಜಾನುವಾರು ಮಾಲೀಕರಿಗೆ ಉಂಟಾಗಬಹುದಾದ ಪ್ರಾಯೋಗಿಕ ತೊಂದರೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಯಾವುದೇ ವ್ಯಕ್ತಿ ಯಾವುದೇ ಜಾನುವಾರುಗಳನ್ನು ರಾಜ್ಯದೊಳಗಿನ ಯಾವುದೇ ಸ್ಥಳದಿಂದ ವಧೆಗಾಗಿ ರಾಜ್ಯದೊಳಗಿನ ಮತ್ತಾವುದೇ ಸ್ಥಳಕ್ಕೆ ಸಾಗಿಸಲು ಅಥವಾ ಅದಕ್ಕೆ ಅವಕಾಶ ನೀಡಲು ಮುಂದಾಗಬಾರದು ಎಂದು ಸುಗ್ರೀವಾಜ್ಞೆಯ ಸೆಕ್ಷನ್ 5 ಹೇಳುತ್ತದೆ.
ಇಷ್ಟಾದರೂ, ಯಾವುದೇ ಜಾನುವಾರುಗಳನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರ ಸೂಚಿಸಿದ ರೀತಿಯಲ್ಲಿ, ಉತ್ತಮ ಕೃಷಿ ಅಥವಾ ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಿಸುವುದನ್ನು ಈ ವಿಭಾಗದ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ.
ಅಂತಹ ಸಾರಿಗೆಯನ್ನು ಅನುಮತಿಸುವ ವಿಧಾನ ಸೂಚಿಸುವ ನಿಯಮಗಳನ್ನು ರೂಪಿಸಲಾಗಿದ್ದರೂ, ಅದು ಇನ್ನೂ ಜಾರಿಗೆ ಬಂದಿಲ್ಲ. ಹೀಗಾಗಿ ಸೆಕ್ಷನ್ ಐದನ್ನು ಜಾರಿಗೊಳಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲು ರಾಜ್ಯ ಮುಂದಾಯಿತು. ನಿಯಮ ಜಾರಿಗೆ ತಂದ ನಂತರ ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ನ್ಯಾಯಾಲಯಕ್ಕೆ ತಿಳಿಸಿದರು.
ವಿಚಾರಣೆ ವೇಳೆ ನ್ಯಾಯಾಲಯ ಹೀಗೆ ಹೇಳಿತು: “ಸುಗ್ರೀವಾಜ್ಞೆಯ ಸೆಕ್ಷನ್ 5 ರಲ್ಲಿ ನಿಬಂಧನೆ ಇಲ್ಲದಿದ್ದರೆ, ಯಾವುದೇ ಸಮಸ್ಯೆ ಇರುವುದಿಲ್ಲ. ಇಲ್ಲಿ, ಶಾಸಕಾಂಗದ ಆಶಯ ಸ್ಪಷ್ಟವಾಗಿದೆ. ಅದು ಹೇಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.... ಒಬ್ಬ ರೈತನ ಮನೆ ಪಕ್ಕದಲ್ಲಿ ದನಗಳ ಕೊಟ್ಟಿಗೆ ಇರುತ್ತದೆ. ಆತ ಅವುಗಳನ್ನು ತನ್ನ ಜಮೀನಿಗೆ ಕೊಂಡೊಯ್ಯಲು ಪ್ರತಿ ಬಾರಿಯೂ ಪ್ರಮಾಣಪತ್ರ ತೆಗೆದುಕೊಳ್ಳಬೇಕೆ?” ಎಂದು ಪೀಠವು ಪ್ರಶ್ನಿಸಿತು.
ಆಗ ಎಜಿ ನಾವದಗಿ ಅವರು ಮೊದಲ ಹದಿನೈದು ಕಿಮೀ ವ್ಯಾಪ್ತಿಗೆ ವಿನಾಯ್ತಿ ಇದೆ. ಈ ನಿಟ್ಟಿನಲ್ಲಿ ಇನ್ನಷ್ಟೇ ನಿಯಮ ಜಾರಿಗೆ ತರಬೇಕಿದೆ” ಎಂದು ಹೇಳಿದರು. ಆದರೆ ಇದರಿಂದ ಅಸಮಾಧಾನಗೊಂಡ ಮುಖ್ಯ ನ್ಯಾಯಮೂರ್ತಿ ಓಕಾ ಅವರು, “ಇದು (ಸೆಕ್ಷನ್ 5ರ ನಿಬಂಧನೆ) ಸಮಸ್ಯೆ ಸೃಷ್ಟಿಸುತ್ತದೆ. ಇದು ಪೊಲೀಸರ ವಿವೇಚನೆಗೆ ಬಿಟ್ಟದ್ದು,” ಎಂದರು.
ವಿಚಾರಣೆ ಮುಂದುವರೆದಂತೆ, ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಕ್ಲಿಫ್ಟನ್ ರೊಜಾರಿಯೋ ಅವರು, ಸುಗ್ರೀವಾಜ್ಞೆಯ ಸೆಕ್ಷನ್ 10 ರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಸೆಕ್ಷನ್ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಲು ಇಲ್ಲವೇ ಬಂಧಿಸಲು ಅನುವು ಮಾಡಿಕೊಡುತ್ತದೆ. ಮತ್ತೊಂದೆಡೆ ಸದ್ಯಕ್ಕೆ ಸುಗ್ರೀವಾಜ್ಞೆಯ ಸೆಕ್ಷನ್ 5ರ ಅಡಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹಿರಿಯ ವಕೀಲೆ ಜಯ್ನಾ ಕೊಠಾರಿ ವಾದ ಮಂಡಿಸಿದರು.
ಆಗ ನ್ಯಾಯಾಲಯ, “ನಿಬಂಧನೆಯಿಂದಾಗಿ ರೈತರು ಸದುದ್ದೇಶಕ್ಕೆ ದನಕರುಗಳನ್ನು ಕೊಂಡೊಯ್ಯುವುದಕ್ಕೆ ಕೂಡ ನಿರ್ಬಂಧ ಹೇರುತ್ತದೆಯೇ?” ಎಂದು ನಾವದಗಿ ಅವರನ್ನು ಪ್ರಶ್ನಿಸಿತು. ಫೆಬ್ರವರಿ 20 ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಫೆಬ್ರವರಿ 26 ರಂದು, ಸುಗ್ರೀವಾಜ್ಞೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಎರಡು ಅರ್ಜಿಗಳನ್ನು ನ್ಯಾಯಾಲಯ ಆಲಿಸಲಿದೆ.